ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸೀರೆ ಪೂರೈಕೆ ಆದೇಶವನ್ನು ಖಾಸಗಿ ಸಂಸ್ಥೆ ಬದಲು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೀಡುವಂತೆ ಜವಳಿ ಸಚಿವ ಅವರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರು (ಅ.18): ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸೀರೆ ಪೂರೈಕೆ ಆದೇಶವನ್ನು ಖಾಸಗಿ ಸಂಸ್ಥೆ ಬದಲು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೀಡುವಂತೆ ಜವಳಿ ಸಚಿವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಶಿವಾನಂದ ಪಾಟೀಲ್‌, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ತಲಾ 2 ಸೀರೆಗಳಂತೆ 2.79 ಲಕ್ಷ ಸೀರೆ ಖರೀದಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿದೆ. ಅದನ್ನು ಐಸಿಡಿಎಸ್‌ ಯೋಜನೆ ಅಡಿ ಕೆಟಿಪಿಪಿ ನಿಯಮದಡಿ ಖರೀದಿಸಲು ಉದ್ದೇಶಿಸಲಾಗಿದೆ. ಅದರ ಬದಲು ಸೀರೆ ಪೂರೈಕೆ ಆದೇಶವನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೀಡಬೇಕು.

ಆ ಮೂಲಕ ರಾಜ್ಯದ ನೇಕಾರರಿಗೆ ನೆರವಾಗಬಹುದು ಮತ್ತು ನಷ್ಟದಲ್ಲಿರುವ ನಿಗಮವನ್ನು ಪುನಶ್ಚೇತನಕ್ಕೆ ಕ್ರಮ ಕೈಗೊಂಡಂತಾಗಲಿದೆ ಎಂದು ಕೋರಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಿಗೆ ಅಗತ್ಯವಾದ ಬಟ್ಟೆ ಮತ್ತು ಸೀರೆಗಳನ್ನು ಕೈಮಗ್ಗ ಮತ್ತು ಜವಳಿ ಇಲಾಖೆ ಅಡಿ ಕಾರ್ಯನಿರ್ವಹಿಸುತ್ತಿರುವ ನಿಗಮಗಳಿಂದ ಮಾಡಲು ಈ ಹಿಂದೆ ಸರ್ಕಾರದಿಂದ ಆದೇಶ ಮಾಡಲಾಗಿದೆ. ಅದರ ಜತೆಗೆ ಎಲ್ಲ ಇಲಾಖೆಗಳು ಕೂಡ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಿಗೆ ಬೇಡಿಕೆಯ ಶೇ.75ರಷ್ಟು ಸಮವಸ್ತ್ರಗಳನ್ನು ಕಡ್ಡಾಯವಾಗಿ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಪೂರೈಸಲು ಆದೇಶಿಸಿವೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸೀರೆ ಪೂರೈಕೆ ಆದೇಶವನ್ನೂ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೀಡಲು ನಿರ್ದೇಶಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.

ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅಗತ್ಯ

ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ಪಾಲಕರು ಮಗುವಿನ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಣ ಕೊಡಿಸಿ ಎಂದು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಕರೆ ನೀಡಿದರು.ಪಟ್ಟಣದ ತೆಲಗಿ ರಸ್ತೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಜಾಗತಿಕ ಮಟ್ಟದಲ್ಲಿ ಸುಮಾರು 230 ಕ್ಕೂ ಹೆಚ್ಚು ದೇಶಗಳಲ್ಲಿ ಇಂಗ್ಲಿಷ್ ಭಾಷೆಯೇ ಪ್ರಧಾನ ವ್ಯವಹಾರಿಕ ಭಾಷೆಯಾಗಿದೆ. ಸರ್ಕಾರ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ 100 ಮೌಲಾನ ಆಜಾದ ಆಂಗ್ಲ ಶಾಲೆ ಸ್ಥಾಪನೆಗೆ ಮುಂದಾಗಿದೆ. ನಮ್ಮ ಕ್ಷೇತ್ರಕ್ಕೂ ಶಾಲೆ ಮಂಜೂರಾಗಿದೆ. ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರು, ಶಾಲಾ ಕಟ್ಟಡ, ಪ್ರಯೋಗಾಲಯ ಸೇರಿ ಅಗತ್ಯ ಸೌಲಭ್ಯ ಕಲ್ಪಿಸವುದು ಅಗತ್ಯವಾಗಿದೆ. ಮೌಲಾನಾ ಆಜಾದ್ ಶಾಲೆಯಲ್ಲಿ ಎಲ್.ಕೆ.ಜಿಯಿಂದ ಪಿಯುಸಿವರೆಗೆ ಶಿಕ್ಷಣ ನೀಡುತ್ತಿದ್ದು, ಇದರ ಸದುಪಯೋಗ ಪಡೆಯಬೇಕು ಎಂದರು.