‘ನಾನು ರಾಜಕಾರಣದಲ್ಲಿ ಇದ್ದೇನೆ. ಹೀಗಾಗಿ, ರಾಜಕಾರಣ ಮಾಡಲೇ ಬೇಕು. ನನಗೆ ಯಶಸ್ಸು ಸಿಕ್ಕೇ ಸಿಗುತ್ತದೆ. ಆದರೆ, ಸ್ವಲ್ಪ ಶ್ರಮ ಬೇಕಾಗುತ್ತದೆ ಅಷ್ಟೇ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ನವದೆಹಲಿ : ‘ನಾನು ರಾಜಕಾರಣದಲ್ಲಿ ಇದ್ದೇನೆ. ಹೀಗಾಗಿ, ರಾಜಕಾರಣ ಮಾಡಲೇ ಬೇಕು. ನನಗೆ ಯಶಸ್ಸು ಸಿಕ್ಕೇ ಸಿಗುತ್ತದೆ. ಆದರೆ, ಸ್ವಲ್ಪ ಶ್ರಮ ಬೇಕಾಗುತ್ತದೆ ಅಷ್ಟೇ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಅಸ್ಸಾಂ ಚುನಾವಣೆ ಕುರಿತ ಎಐಸಿಸಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದ ಅವರು, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ವಾದ್ರಾ ಅವರನ್ನು ಭೇಟಿ ಮಾಡಿ ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.

ನಿಮ್ಮ ಭೇಟಿ ಫಲಪ್ರದವಾಗಿದೆಯೆ?

ಬಳಿಕ ಸುದ್ದಿಗಾರರ ಜತೆ ನಡೆಸಿದರು. ನಿಮ್ಮ ಭೇಟಿ ಫಲಪ್ರದವಾಗಿದೆಯೆ? ಅಧಿಕಾರ ಹಂಚಿಕೆ ವಿಚಾರವಾಗಿ ಹೈಕಮಾಂಡ್‌ನಿಂದ ಸ್ಪಷ್ಟನೆ ಸಿಕ್ಕಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಪಕ್ಷ ತನ್ನದೇ ಆದ ಗುರಿ ಹೊಂದಿದ್ದು ಪಕ್ಷದ, ರಾಜ್ಯದ ಹಿತಾಸಕ್ತಿ ದೃಷ್ಟಿಯಿಂದ ನಮ್ಮ ನಾಯಕರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಕಾಲ ಎಲ್ಲದಕ್ಕೂ ಉತ್ತರ ಕೊಡಲಿದೆ’ ಎಂದರು.

‘ನಾನಿಲ್ಲಿ ಸುಮ್ಮನೆ ಗಾಳಿ ಕುಡಿದುಕೊಂಡು ಹೋಗೋಕೆ ಬಂದಿಲ್ಲ

ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿ, ‘ನಾನಿಲ್ಲಿ ಸುಮ್ಮನೆ ಗಾಳಿ ಕುಡಿದುಕೊಂಡು ಹೋಗೋಕೆ ಬಂದಿಲ್ಲ. ನಾನು ದೆಹಲಿಗೆ ಬಂದಿರುವುದೇ ರಾಜಕಾರಣ ಮಾಡಲಿಕ್ಕೆ. ಜನಪಥ್‌ ನಿವಾಸದಲ್ಲಿ ವರಿಷ್ಠರನ್ನು ಭೇಟಿ ಮಾಡಿ, ಮಾತನಾಡಿದ್ದೇನೆ. ವರಿಷ್ಠರ ಜೊತೆ ಏನೇನು ಮಾತನಾಡಬೇಕೋ, ಅದೆಲ್ಲವನ್ನೂ ಮಾತನಾಡಿದ್ದೇನೆ. ಎಲ್ಲಾ ವಿಚಾರದ ಬಗ್ಗೆ ಮಾತನಾಡಿದ್ದೇನೆ. ಆದರೆ, ಆ ವಿಚಾರಗಳನ್ನು ಬಹಿರಂಗವಾಗಿ ಹೇಳೋಕೆ ಆಗಲ್ಲ. ಬೀದೀಲಿ ನಿಂತುಕೊಂಡು ರಾಜಕಾರಣ ಮಾಡುವುದಕ್ಕೆ ನಾನು ತಯಾರಿಲ್ಲ’ ಎಂದರು.

ಯಾರ್‍ಯಾರನ್ನು ಭೇಟಿ ಮಾಡಿದ್ದೀರಿ ಎಂಬ ಪ್ರಶ್ನೆಗೆ, ‘ನಾನು ದೆಹಲಿಗೆ ಬಂದ ನಂತರ ಎಲ್ಲರನ್ನೂ ಭೇಟಿ ಮಾಡುತ್ತೇನೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲಾ, ಟಿ.ಬಿ.ಜಯಚಂದ್ರ ಸೇರಿದಂತೆ ಎಲ್ಲ ನಾಯಕರನ್ನು ಭೇಟಿ ಮಾಡಿದ್ದೇನೆ. ಇನ್ನು, ರಾಜಕಾರಣಿಗಳು ಪರಸ್ಪರ ಭೇಟಿಯಾದಾಗ ರಾಜಕಾರಣದ ಬಗ್ಗೆ ಚರ್ಚೆ ಮಾಡದೆ ಇರಲಿಕ್ಕೆ ಸಾಧ್ಯವಾ? ಖಂಡಿತವಾಗಿಯೂ ರಾಜಕೀಯ ಕುರಿತು ಚರ್ಚೆ ಮಾಡಿದ್ದೇನೆ. ಆದರೆ, ಆ ಚರ್ಚೆಯ ವಿವರವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಲು ಸಾಧ್ಯವಿಲ್ಲ. ಕರ್ನಾಟಕದ ಹಿತ ಸೇರಿದಂತೆ ಅಸ್ಸಾಂ, ದೆಹಲಿ ಬಗ್ಗೆಯೂ ಚರ್ಚೆ ಮಾಡಿದ್ದೇನೆ’ ಎಂದರು.

ನೀವು ಬಹಳ ತಾಳ್ಮೆಯಿಂದ ಇದ್ದೀರಲ್ಲ ಎಂಬ ಪ್ರಶ್ನೆಗೆ, ‘ತಾಳ್ಮೆ ಕೂಡ ಸಾಕಷ್ಟು ಫಲ ನೀಡುತ್ತದೆ’ಎಂದರು. ನಾಯಕತ್ವ ಬದಲಾವಣೆ ಇಲ್ಲ ಎಂಬ ಮೇಲ್ಮನೆ ಸದಸ್ಯ ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರು ನಮ್ಮ ಹೈಕಮಾಂಡ್ ಅಲ್ಲವೇ? ಅವರ ಮಾತನ್ನು ನಾವು ಸ್ವೀಕರಿಸಬೇಕು’ ಎಂದು ವ್ಯಂಗ್ಯವಾಡಿದರು.

ಶಾಸಕರ ವಿದೇಶ ಪ್ರವಾಸ ಕುರಿತ ಪ್ರಶ್ನೆಗೆ, ‘ಈ ವಿಚಾರವಾಗಿ ನಾನು ಏನನ್ನೂ ಮಾತನಾಡುವುದಿಲ್ಲ. ಶಾಸಕರುಂಟು ಹಾಗೂ ಮುಖ್ಯಮಂತ್ರಿಗಳುಂಟು. ಸಿಎಂ ಅವರಿಗೆ ಯಾವ ಮಾರ್ಗದರ್ಶನ ನೀಡಿದ್ದಾರೋ ನನಗೆ ಗೊತ್ತಿಲ್ಲ. ಈ ವಿಚಾರ ನನ್ನ ಜತೆ ಚರ್ಚೆಯಾಗಿಲ್ಲ. ಈ ವಿಚಾರ ನನಗೆ ಮಾಧ್ಯಮಗಳಿಂದ ತಿಳಿಯಿತೇ ಹೊರತು, ಬೇರೆ ಯಾರೂ ಈ ಬಗ್ಗೆ ಮಾಹಿತಿ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲಿ ಸಿಎಂ ಹಾಗೂ ಡಿಸಿಎಂ ನಡುವಿನ ಸಂಘರ್ಷದಿಂದ ಜನರು ನರಳುವಂತಾಗಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಸಂಘರ್ಷವಿರುವುದು ಬಿಜೆಪಿಯಲ್ಲೇ ಹೊರತು, ನಮ್ಮ ನಡುವೆಯಲ್ಲ. ನಾನು ಹಾಗೂ ಸಿಎಂ ಇಬ್ಬರೂ ಪಕ್ಷದ ತೀರ್ಮಾನದಂತೆ ನಡೆಯುತ್ತೇವೆ. ಈ ಬಗ್ಗೆ ಈಗಾಗಲೇ ನಾವಿಬ್ಬರು ಸ್ಪಷ್ಟನೆ ನೀಡಿದ್ದೇವೆ. ಎಲ್ಲಾ ಚರ್ಚೆಗಳು ನಮ್ಮ ನಡುವೆಯೇ ಆಗಿದೆ. ಪಕ್ಷ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.