ಪ್ರಜ್ವಲ್ ರೇವಣ್ಣ ಕೇಸ್‌ನಿಂದ ದೂರ ಇರಿ: ಬಿಜೆಪಿಗರಿಗೆ ಹೈಕಮಾಂಡ್ ಸೂಚನೆ
ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಂಡು ಸೂಕ್ಷ್ಮವಾಗಿ ವರ್ತಿಸುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು (ಮೇ.02): ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಂಡು ಸೂಕ್ಷ್ಮವಾಗಿ ವರ್ತಿಸುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ. ಚುನಾವಣೆ ವೇಳೆ ಅಶ್ಲೀಲ ವಿಡಿಯೋ ಪ್ರಕರಣ ಬಹಿರಂಗಗೊಂಡು ದೇಶ ಮಾತ್ರವಲ್ಲದೇ, ವಿದೇಶದಲ್ಲೂ ಸಾಕಷ್ಟು ಸುದ್ದಿಯಾಗಿದೆ. ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಇರಿಸು-ಮುರಿಸು ಅನುಭವಿಸುವಂತಾಗಿದೆ.
ಈ ಹಿನ್ನೆಲೆಯಲ್ಲಿ ವಿವಾದ ಸುಳಿಯಲ್ಲಿ ಸಿಲುಕಿಕೊಳ್ಳದಂತೆ ಎಚ್ಚರಿಕೆಯಿಂದ ಇರಬೇಕು ಎಂಬ ನಿರ್ದೇಶನ ನೀಡಿದೆ ಎನ್ನಲಾಗಿದೆ. ಪ್ರಜ್ವಲ್ ರೇವಣ್ಣ ಘಟನೆಯು ಕಾಂಗ್ರೆಸ್ ಸಿಕ್ಕಿರುವ ಅಸ್ತ್ರವಾಗಿದೆ. ಜೆಡಿಎಸ್ ವಿರುದ್ಧ ಟೀಕೆ ಮಾಡುವಾಗ ಸಹಜವಾಗಿ ಬಿಜೆಪಿ ವಿರುದ್ಧವೂ ಟೀಕೆ ಬರುತ್ತದೆ. ಹೀಗಾಗಿ ಪ್ರಕರಣದ ಬಗ್ಗೆ ಬಿಜೆಪಿ ಎಷ್ಟು ಸಾಧ್ಯವೋ, ಅಷ್ಟರ ಮಟ್ಟಿಗೆ ಅಂತರವನ್ನು ಕಾಯ್ದುಕೊಳ್ಳಬೇಕು. ಜೆಡಿಎಸ್, ಎನ್‌ಡಿಎ ಭಾಗ ಅಷ್ಟೇ ಆಗಿರುವುದರಿಂದ ಜೆಡಿಎಸ್ ಮಾಡಿದ ತಪ್ಪಿಗೆ ನಾವು ಹೊಣೆ ಅಲ್ಲ. ತನಿಖೆ ವಿಚಾರದಲ್ಲಿ ಪಕ್ಷದ ನಾಯಕರು ಮಾತಾಡಬಾರದು ಮತ್ತು ವಿವಾದಾತ್ಮಕ ಹೇಳಿಕೆ ಕೊಡಬಾರದು ಎಂದು ಸೂಚಿಸಲಾಗಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಪಾತ್ರವಿಲ್ಲ: ಪ್ರಜ್ವಲ್ ರೇವಣ್ಣ ವೀಡಿಯೋ ಬಹಿರಂಗದ ಹಿಂದೆ ಕಾಂಗ್ರೆಸ್ ಮುಖಂಡರ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಜ್ವಲ್ ಅವರ ಮಾಜಿ ಕಾರು ಚಾಲಕ ಕಾರ್ತಿಕ್, ಬಿಜೆಪಿ ಮುಖಂಡ ದೇವರಾಜೇಗೌಡ ಅವರಿಗೆ ನಾನೇ ಈ ವೀಡಿಯೋಗಳನ್ನು ಕೊಟ್ಟಿದ್ದೆ ಎಂದು ತಿಳಿಸಿದ್ದಾರೆ. ರೇವಣ್ಣ ಕುಟುಂಬದ ಜತೆ ಕಾಂಗ್ರೆಸ್ ನಾಯಕರು ಚೆನ್ನಾಗಿದ್ದರು. ಇದೇ ಕಾರಣಕ್ಕೆ ವಿಡಿಯೋಗಳನ್ನು ಕಾಂಗ್ರೆಸ್ ನಾಯಕರಿಗೆ ನಾನು ಕೊಟ್ಟಿರಲಿಲ್ಲ ಎಂದೂ ಅವರು ಸಮಜಾಯಿಷಿ ನೀಡಿದ್ದಾರೆ. ಸಂಸದರ ವಿರುದ್ಧ ಲೈಂಗಿಕ ಹಗರಣ ಬೆಳಕಿಗೆ ಬಂದ ನಂತರ ಅಜ್ಞಾತವಾಗಿದ್ದ ಈ ಮಾಜಿ ಕಾರು ಚಾಲಕ ಕಾರ್ತಿಕ್ ಮಂಗಳವಾರ ಸುಮಾರು ಆರು ನಿಮಿಷಗಳ ವಿಡಿಯೋ ಹೇಳಿಕೆಯನ್ನು ಬಿಡುಗಡೆಗೊಳಿಸಿ ಪ್ರಕರಣದ ಕುರಿತು ವಿವರ ನೀಡಿದ್ದಾರೆ.
ರಾಯಚೂರು ಲೋಕಸಭಾ ಕ್ಷೇತ್ರ: ಬಿಜೆಪಿಯ 3ನೇ ಗೆಲುವಿಗೆ ಕಡಿವಾಣ ಹಾಕಲು ಕಾಂಗ್ರೆಸ್ ಸಜ್ಜು
ದೇವರಾಜೇಗೌಡ ಪಾತ್ರ: ಸಂಸದರ ವಿಡಿಯೋಗಳ ಬಿಡುಗಡೆ ಹಿಂದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಹಾಗೂ ವಕೀಲ ದೇವರಾಜೇಗೌಡ ಇದ್ದಾರೆ. ಈ ಕೃತ್ಯದಲ್ಲಿ ಕಾಂಗ್ರೆಸ್ ನಾಯಕರ ಪಾತ್ರವಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ನನ್ನ ಮತ್ತು ನನ್ನ ಕುಟುಂಬದ ಮೇಲೆ ಪ್ರಜ್ವಲ್ ರೇವಣ್ಣ ದೌರ್ಜನ್ಯ ನಡೆಸಿದ್ದರು. ಆಗ ನಾನು ಸಂಸದರ ವಿರುದ್ಧ ಹೋರಾಟಕ್ಕೆ ದೇವರಾಜೇಗೌಡರ ನೆರವು ಪಡೆದು ಅವರಿಗೆ ವೀಡಿಯೋಗಳನ್ನು ನೀಡಿದ್ದೆ. ನಾನು ದೇವರಾಜೇಗೌಡ ಹೊರತುಪಡಿಸಿ ಮತ್ಯಾರಿಗೂ ವಿಡಿಯೋಗಳನ್ನು ನೀಡಿಲ್ಲ. ಆದರೀಗ ವಿಡಿಯೋ ಸ್ಫೋಟದ ಹಿಂದೆ ಕಾಂಗ್ರೆಸ್ ನಾಯಕರಿದ್ದಾರೆ ಎಂಬುದಾಗಿ ದೇವರಾಜೇಗೌಡ ಸುಳ್ಳು ಹೇಳಿಕೆ ಕೊಡುತ್ತಿದ್ದಾರೆ ಎಂದು ಕಾರ್ತಿಕ್ ಕಿಡಿಕಾರಿದ್ದಾರೆ.