Asianet Suvarna News Asianet Suvarna News

ರಾಜ್ಯಗಳಿಗೆ ಜಾತಿ ಗಣತಿ ಅಧಿಕಾರ ಇಲ್ಲ: ಸುಪ್ರೀಂಗೆ ಕೇಂದ್ರದ ಅಫಿಡವಿಟ್‌

ಬಿಹಾರದ ಆಡಳಿತಾರೂಢ ಜೆಡಿಯು-ಆರ್‌ಜೆಡಿ ಸರ್ಕಾರ ಜಾತಿಗಣತಿ ನಡೆಸುತ್ತಿರುವ ಹೊತ್ತಿನಲ್ಲೇ, ಜನಗಣತಿ ಅಥವಾ ಅದಕ್ಕೆ ಸಮಾನಾಂತರವಾದ ಇನ್ನಾವುದೇ ಗಣತಿ (ಜಾತಿ ಗಣತಿ) ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ

States have no power to caste census Central Govt affidavit to the Supreme Court in the Bihar Caste Census case akb
Author
First Published Aug 29, 2023, 6:52 AM IST

ನವದೆಹಲಿ: ಬಿಹಾರದ ಆಡಳಿತಾರೂಢ ಜೆಡಿಯು-ಆರ್‌ಜೆಡಿ ಸರ್ಕಾರ ಜಾತಿಗಣತಿ ನಡೆಸುತ್ತಿರುವ ಹೊತ್ತಿನಲ್ಲೇ, ಜನಗಣತಿ ಅಥವಾ ಅದಕ್ಕೆ ಸಮಾನಾಂತರವಾದ ಇನ್ನಾವುದೇ ಗಣತಿ (ಜಾತಿ ಗಣತಿ) ನಡೆಸುವ ಅಧಿಕಾರ ಕೇಂದ್ರ ಸರ್ಕಾರ ಹೊರತುಪಡಿಸಿ ಇನ್ಯಾವುದೇ ಸರ್ಕಾರ ಅಥವಾ ಸಂಸ್ಥೆಗಳಿಗೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಬಿಹಾರ ಜಾತಿಗಣತಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಈ ಮಾಹಿತಿ ನೀಡಿದೆ.

ಜಾತಿ ಗಣತಿ ನಡೆಸುವ ಬಿಹಾರ ಸರ್ಕಾರದ (Bihar Govt) ನಿರ್ಧಾರವನ್ನು ಇತ್ತೀಚೆಗೆ ಬಿಹಾರ ಹೈಕೋರ್ಟ್ (Bihar Highcourt) ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಕೇಂದ್ರ ಸರ್ಕಾರದ (Union Govt) ಪರವಾಗಿ ಅಫಿಡವಿಟ್‌ ಸಲ್ಲಿಸಿರುವ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ (Tushar Mehta), ‘ಜನಗಣತಿಯು 1948ರ ಸೆನ್ಸಸ್‌ ಕಾಯ್ದೆ ಅನ್ವಯ ಶಾಸನಾತ್ಮಕ ಪ್ರಕ್ರಿಯೆಯಾಗಿದೆ. ಈ ಕಾಯ್ದೆಯು ಕೇಂದ್ರ ಸರ್ಕಾರಕ್ಕೆ ಮಾತ್ರವೇ ಗಣತಿ ನಡೆಸುವ ಅಧಿಕಾರವನ್ನು ನೀಡುತ್ತದೆ. ಕೇಂದ್ರ ಸರ್ಕಾರಕ್ಕೆ ಹೊರತಾಗಿ ಇತರೆ ಯಾವುದೇ ಸಾಂವಿಧಾನಿಕ ಸಂಸ್ಥೆಯಾಗಲೀ ಅಥವಾ ಇತರೆ ಯಾರೇ ಆಗಲಿ ಜನಗಣತಿ ಅಥವಾ ಅದನ್ನು ಹೋಲುವ ಇನ್ನಾವುದೆ ಪ್ರಕ್ರಿಯೆಗಳನ್ನು ನಡೆಸುವ ಅಧಿಕಾರವನ್ನು ಹೊಂದಿಲ್ಲ. ಹೀಗಾಗಿ ಬಿಹಾರದಲ್ಲಿ ಪ್ರಸಕ್ತ ನಡೆಸುತ್ತಿರುವ ಪ್ರಕ್ರಿಯೆಗಳು ಕೆಲವು ಪರಿಣಾಮಗಳನ್ನು ಹೊಂದಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ ಇದೇ ವೇಳೆ ಕೇಂದ್ರ ಸರ್ಕಾರ ಜಾತಿ ಗಣತಿಯ ಪರವಾಗಲೀ ಅಥವಾ ವಿರೋಧವಾಗಲೀ ಇಲ್ಲ. ನಾವು ಸಮೀಕ್ಷೆಯ ಕುರಿತಾಗಿ ಕಾನೂನಿನಲ್ಲಿರುವ ಅಂಶಗಳನ್ನು ನ್ಯಾಯಾಲಯದ ಮುಂದಿಡುತ್ತಿದ್ದೇವೆ ಅಷ್ಟೇ ಎಂದು ತುಷಾರ್‌ ಮೆಹ್ತಾ ಸ್ಪಷ್ಟಪಡಿಸಿದರು.

ಸಂಸತ್‌ ಚುನಾವಣೆವರೆಗೂ ಜಾತಿ ಗಣತಿ ವರದಿಗೆ ಬ್ರೇಕ್‌..!

ಜಾತಿ ಗಣತಿ ಏಕೆ?:

ಜಾತಿ ಗಣತಿ ನಡೆಸಿದರೆ ರಾಜ್ಯದಲ್ಲಿ ಹಿಂದುಳಿದ ಸಮುದಾಯದ ಜನರ ಪ್ರಮಾಣ ನಿಖರವಾಗಿ ಎಷ್ಟಿದೆ ಎಂಬುದರ ಮಾಹಿತಿ ಸಿಗುತ್ತದೆ. ಇದರ ಆಧಾರದಲ್ಲಿ ಸರ್ಕಾರ ಮೀಸಲು ಪ್ರಮಾಣ ಹೆಚ್ಚಳ, ಹಿಂದುಳಿದ ಸಮುದಾಯಕ್ಕೆ ಪೂರಕ ಯೋಜನೆಗಳ ಘೋಷಣೆ, ಹೆಚ್ಚಿನ ಅನುದಾನ ಮೊದಲಾದ ಹೆಜ್ಜೆಗಳನ್ನು ಇಡಲು ನೆರವಾಗುತ್ತದೆ. ಈ ವಿಷಯ ರಾಜಕೀಯವಾಗಿಯೂ ಲಾಭ ತರುವ ಕಾರಣ, ಒಬಿಸಿ ಸಮುದಾಯದ ಜಾತಿಗಳ ಮತವನ್ನೇ ಹೆಚ್ಚಾಗಿ ನಂಬಿರುವ ಜೆಡಿಯು, ಆರ್‌ಜೆಡಿ ನೇತೃತ್ವದ ಬಿಹಾರ ಸರ್ಕಾರ ಜಾತಿ ಗಣತಿಗೆ ಮುಂದಾಗಿದೆ ಎನ್ನಲಾಗಿದೆ.

ಜಾತಿಗಣತಿ ವರದಿ ಬಿಡುಗಡೆಗೆ ಕಾಂಗ್ರೆಸ್‌ನಲ್ಲೇ ವಿರೋಧ: ಬಹುಸಂಖ್ಯಾತರಾದ ಮುಸ್ಲಿಮರು

Follow Us:
Download App:
  • android
  • ios