Asianet Suvarna News Asianet Suvarna News

ಅಧಿವೇಶನ ಬಳಿಕ ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ: ಬಿಎಸ್‌ವೈ

ಅಧಿವೇಶನ ಮುಗಿದ ಬಳಿಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರ ಸಭೆ ನಡೆಸಿ ಜನವಿರೋಧಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಟಕ್ಕೆ ಅಣಿಗೊಳಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುಡುಗಿದ್ದಾರೆ.

State wide Protest against Congress government after session Says BS Yediyurappa gvd
Author
First Published Jul 5, 2023, 11:36 AM IST

ಬೆಂಗಳೂರು (ಜು.05): ಅಧಿವೇಶನ ಮುಗಿದ ಬಳಿಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರ ಸಭೆ ನಡೆಸಿ ಜನವಿರೋಧಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಟಕ್ಕೆ ಅಣಿಗೊಳಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುಡುಗಿದ್ದಾರೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನಡೆದ ಬಿಜೆಪಿ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಮನೆ-ಮನೆಗೆ ತೆರಳಿ ತಾವು ಸಹಿ ಮಾಡಿದ ಗ್ಯಾರಂಟಿ ಕಾರ್ಡ್‌ಗಳನ್ನು ಹಂಚಿದ್ದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದ 24 ತಾಸಿನೊಳಗೆ ಭರವಸೆಗಳನ್ನು ಕಾರ್ಯರೂಪಕ್ಕೆ ತರುವುದಾಗಿ ಭರವಸೆ ನೀಡಿದ್ದರು. 

ಇದನ್ನು ನಂಬಿದ ಜನ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಿದರು. ಈಗ ಭರವಸೆಗಳನ್ನು ಈಡೇರಿಸದೆ ಮೊಸ ಮಾಡಲಾಗಿದೆ ಎಂದು ಕಿಡಿಕಾರಿದರು. ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಾಗುತ್ತಿದೆ. ಯಾವ ಭರವಸೆಗಳನ್ನು ಕಾರ್ಯಗತ ಮಾಡಿದ್ದೀರಿ? ಕೊಟ್ಟಮಾತಿನಂತೆ ನಡೆದುಕೊಳ್ಳದೆ ಜನತೆಗೆ ದ್ರೋಹ ಮಾಡುತ್ತಿದ್ದೀರಿ. ಸಹಿ ಮಾಡಿದ ಗ್ಯಾರಂಟಿ ಕಾರ್ಡ್‌ ಕೊಟ್ಟು ಜನರನ್ನು ವಂಚಿಸಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ: ಸ್ವಪಕ್ಷದ ನಾಯಕರ ವಿರುದ್ದ ಮಾಜಿ ಸಚಿವ ರಾಜೂಗೌಡ ಗರಂ

ಕೇಂದ್ರ ಸರ್ಕಾರದ 5 ಕೆ.ಜಿ ಅಕ್ಕಿ ಜೊತೆಗೆ 10 ಕೆ.ಜಿ. ಸೇರಿ ಒಟ್ಟು ತಲಾ 15 ಕೆ.ಜಿ. ಅಕ್ಕಿ ನೀಡಬೇಕು. ಮಹಿಳಾ ಸ್ವ ಸಹಾಯ ಸಂಘಗಳ ಸಾಲ ಮನ್ನಾ ಮಾಡಬೇಕು. ಪ್ರತಿ ಮನೆಯ ಒಡತಿಗೆ ಮಾಸಿಕ 2 ಸಾವಿರ ರು. ಹಾಕಬೇಕು. ನಿರುದ್ಯೋಗಿ ಪದವಿಧರರಿಗೆ ಮಾಸಿಕ 3 ಸಾವಿರ ರು., ಡಿಪ್ಲೊ ವಿದ್ಯಾರ್ಥಿಗಳಿಗೆ ಮಾಸಿಕ 1,500 ರು. ಹಾಕಬೇಕು. ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡಲೇಬೇಕು ಎಂದು ಆಗ್ರಹಿಸಿದರು.

ನನಗೂ ಸ್ಥಾನಮಾನ ಬೇಕು: ಅಧಿಕಾರದ ಆಸೆ ಬಹಿರಂಗಪಡಿಸಿದ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ!

ಕಾಯ್ದೆ ಮುಟ್ಟಿದರೆ ಪರಿಣಾಮ ನೆಟ್ಟಗಿರಲ್ಲ: ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ಕಾಯ್ದೆ ಮುಟ್ಟಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತನ್ನಿ. ಇಲ್ಲವೇ ಅಧಿಕಾರ ಬಿಟ್ಟು ತೊಲಗಿ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿಕಾರಿದ ಯಡಿಯೂರಪ್ಪ, ಈ ಜನ ದ್ರೋಹಿ, ಭ್ರಷ್ಟಸರ್ಕಾರವನ್ನು ಕಿತ್ತೊಗೆಯಲು ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕು. ಇದಕ್ಕೆ ನಿಮ್ಮೆಲ್ಲರ ಸಹಕಾರಬೇಕು ಎಂದು ಕಾರ್ಯಕರ್ತರಲ್ಲಿ ಕೋರಿದರು.

Follow Us:
Download App:
  • android
  • ios