ಬರ ಪರಿಹಾರದ ವಿಚಾರ ಸೇರಿ ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲೂ ಕರ್ನಾಟಕವನ್ನು ಟಾರ್ಗೆಟ್‌ ಮಾಡುತ್ತಿಲ್ಲ. ಆ ರೀತಿ ಅಭಿಪ್ರಾಯವನ್ನು ಕಾಂಗ್ರೆಸ್‌ ಅಥವಾ ಇನ್ನಾವುದೇ ಪಕ್ಷ ಮೂಡಿಸುತ್ತಿದ್ದರೆ ಅದು ತಪ್ಪು ಎಂದು ಕೇಂದ್ರ ವಿದೇಶಾಂಗ ಸಚಿವ ಡಾ। ಎಸ್‌.ಜೈಶಂಕರ್‌ ಹೇಳಿದ್ದಾರೆ.

ಬೆಂಗಳೂರು (ಏ.17): ಬರ ಪರಿಹಾರದ ವಿಚಾರ ಸೇರಿ ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲೂ ಕರ್ನಾಟಕವನ್ನು ಟಾರ್ಗೆಟ್‌ ಮಾಡುತ್ತಿಲ್ಲ. ಆ ರೀತಿ ಅಭಿಪ್ರಾಯವನ್ನು ಕಾಂಗ್ರೆಸ್‌ ಅಥವಾ ಇನ್ನಾವುದೇ ಪಕ್ಷ ಮೂಡಿಸುತ್ತಿದ್ದರೆ ಅದು ತಪ್ಪು ಎಂದು ಕೇಂದ್ರ ವಿದೇಶಾಂಗ ಸಚಿವ ಡಾ। ಎಸ್‌.ಜೈಶಂಕರ್‌ ಹೇಳಿದ್ದಾರೆ. ಮಂಗಳವಾರ ನಗರದಲ್ಲಿ ಮಾಧ್ಯಮಗಳ ಸಂಪಾದಕರ ಜೊತೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.

ಬರ ಪರಿಹಾರವನ್ನು ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎನ್ನುವುದು ಅಪಪ್ರಚಾರ. ಈ ರೀತಿಯಾಗಿ ವಿಳಂಬ ಆಗಿರುವುದು ಕರ್ನಾಟಕಕ್ಕೆ ಮಾತ್ರವಲ್ಲ, ನಾಲ್ಕೈದು ರಾಜ್ಯಗಳಿಗೂ ಇದೇ ರೀತಿಯ ಸಮಸ್ಯೆ ಎದುರಾಗಿದೆ. ಎಲ್ಲ ಪ್ರಕ್ರಿಯೆಯನ್ನು ಮುಗಿಸಿ ಹಣ ಬಿಡುಗಡೆ ಸಂಬಂಧ ಚುನಾವಣಾ ಆಯೋಗಕ್ಕೆ ಕೇಳಲಾಯಿತು. ಆದರೆ, ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಈ ವಿಚಾರದಲ್ಲಿ ಇನ್ನೂ ಆಯೋಗದಿಂದ ನಮಗೆ ಸ್ಪಷ್ಟನೆ ಸಿಕ್ಕಿಲ್ಲ. ಹೀಗಾಗಿ ನಾವು ಪರಿಹಾರ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಬರ ಪರಿಹಾರ ವಿಳಂಬ ಆಗಿದೆಯೇ ಹೊರತು ಇದರಲ್ಲಿ ರಾಜಕೀಯ ಹುಡುಕುವುದು ತಪ್ಪು ಎಂದು ಹೇಳಿದರು.

ಮಂಡ್ಯ, ಕೋಲಾರದಲ್ಲಿ ಇಂದು ರಾಹುಲ್‌ ಗಾಂಧಿ ಅಬ್ಬರ: ಸಿದ್ದು,ಡಿಕೆಶಿ ಸಾಥ್!

ದಕ್ಷಿಣ ರಾಜ್ಯಗಳೆಲ್ಲ ತಮ್ಮ ಹಕ್ಕು ಪಡೆಯುವ ಸಲುವಾಗಿ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರುವ ಸ್ಥಿತಿ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೋರ್ಟ್‌ ಮೆಟ್ಟಿಲೇರಿದ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್‌, ರಾಜ್ಯ ಸರ್ಕಾರಗಳು ಆರ್ಥಿಕ ಶಿಸ್ತು ನಿರ್ವಹಿಸದೆ ದಿವಾಳಿ ಸ್ಥಿತಿ ತಲುಪಿದ್ದರೆ ಕೇಂದ್ರದ ಮೇಲೆ ದೂಷಿಸುವುದು ಸರಿಯಲ್ಲ ಎಂದು ಹೇಳಿದೆ. ಇದೇ ರೀತಿಯ ಆರ್ಥಿಕ ಶಿಸ್ತಿನ ಮಾತು ಕರ್ನಾಟಕ ರಾಜ್ಯಕ್ಕೂ ಅನ್ವಯಿಸುತ್ತದೆ. ರಾಜ್ಯ ಸರ್ಕಾರಗಳು ಹಣವನ್ನು ಸರಿಯಾಗಿ ನಿರ್ವಹಿಸದೆ ಕೇಂದ್ರದಿಂದ ಹಣ, ನೆರವು ಕೇಳುತ್ತಿದ್ದರೆ ಇದು ರಾಜಕೀಯ ಆಗುತ್ತದೆ ವಿನಃ ಆಡಳಿತ ಆಗಲಾರದು ಎಂದರು.

ಕರ್ನಾಟಕದಲ್ಲಿ ಬಿಜೆಪಿ ಅತ್ಯಂತ ಅಧಿಕ ಸ್ಥಾನದಲ್ಲಿ ಗೆಲ್ಲುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಮೋದಿ ಬಗ್ಗೆ, ಮೋದಿ ಗ್ಯಾರಂಟಿ ಬಗ್ಗೆ ವಿಶ್ವಾಸವಿದೆ. ವಿಪಕ್ಷಗಳ ತಾತ್ಕಾಲಿಕ ಗ್ಯಾರಂಟಿ ನಂಬುವ ಬದಲು ದೀರ್ಘಕಾಲೀನ ಗ್ಯಾರಂಟಿಗಳ ಬಗ್ಗೆ ವಿಶ್ವಾಸವಿಟ್ಟು ಜನ ಮತ ನೀಡಲಿದ್ದಾರೆ ಎಂಬ ನಂಬಿಕೆಯಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯದ ಯೋಜನೆಗೆ ಒಪ್ಪಿಗೆ:

ರಾಜ್ಯದ ಕೆಲ ಯೋಜನೆಗಳು ತಾಂತ್ರಿಕ ಸಮಸ್ಯೆ ಸೇರಿ ಕೆಲ ವಿವಾದಗಳನ್ನು ಒಳಗೊಂಡಿವೆ. ಯೋಜನೆ ಜಾರಿಗೆ ಒಪ್ಪಿಗೆ ನೀಡುವ ಮುನ್ನ ಆ ಸಮಸ್ಯೆಯನ್ನು ಪರಿಹರಿಸಿ ಮುಂದುವರಿಯಬೇಕು. ಇಲ್ಲದಿದ್ದರೆ ಯೋಜನೆ ನ್ಯಾಯಾಲಯದ ಮೆಟ್ಟಿಲೇರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿಕೊಂಡು ಅನುಮೋದನೆ ನೀಡಬೇಕಾಗುತ್ತದೆ. ಯಾವ್ಯಾವ ಯೋಜನೆಗಳಿಗೆ ಒಪ್ಪಿಗೆ ನೀಡಲು ಸಾಧ್ಯವೋ ಅವೆಲ್ಲದಕ್ಕೂ ನೀಡಲಿದೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಅವರು ಸ್ಪಷ್ಟವಾಗಿ ತಿಳಿಸಿದರು.

ಪ್ರಧಾನಿ ಮೋದಿ ಭಾವನಾತ್ಮಕ ವಿಚಾರಗಳನ್ನು ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಿದ್ದಾರೆ, ಅಭಿವೃದ್ಧಿ, ಅಂತಾರಾಷ್ಟ್ರೀಯ ವಿಚಾರದ ಕುರಿತು ಯಾಕೆ ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ ಎಂದಾಗ ಎಲ್ಲ ವಿಚಾರಗಳ ಮಾತು ಕೂಡ ಇರುತ್ತವೆ. ಭಾವನಾತ್ಮಕ, ಅಭಿವೃದ್ಧಿ, ದೇಶಪ್ರೇಮದ ವಿಚಾರಗಳೂ ಇರುತ್ತವೆ. ಮಾಧ್ಯಮಗಳು ಕೆಲ ವಿಚಾರಗಳನ್ನು ಮಾತ್ರ ಎತ್ತಿಕೊಂಡು ಪ್ರಚುರಪಡಿಸಿದರೆ ಅದಕ್ಕೆ ಸರ್ಕಾರ, ಪ್ರಧಾನಿ ಮೋದಿ ಹೊಣೆಯಾಗಲ್ಲ ಎಂದು ಹೇಳಿದರು.

ವಾರದಲ್ಲಿ ಬಹಿರಂಗ ಕ್ಷಮೆ: ಬಾಬಾ ರಾಮದೇವ್‌, ಬಾಲಕೃಷ್ಣಗೆ ಸುಪ್ರೀಂಕೋರ್ಟ್ ಆದೇಶ

ದಕ್ಷಿಣ ಭಾರತಕ್ಕೂ ಬಿಜೆಪಿ ಹೆಚ್ಚಿನ ಆದ್ಯತೆ: ಬಿಜೆಪಿ ಉತ್ತರ ಭಾರತ ಹಾಗೂ ಹಿಂದಿ ಬೆಲ್ಟ್‌ನ ಸರ್ಕಾರ ಮಾತ್ರವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಜೈಶಂಕರ್‌, ಬಿಜೆಪಿ ಕೇವಲ ಉತ್ತರ ಭಾರತದ ಪಕ್ಷವಾಗಿರಲು ಬಯಸುವುದಿಲ್ಲ. ದಕ್ಷಿಣ ಭಾರತದ ಚುನಾವಣೆಗಳಲ್ಲೂ ಯಶಸ್ಸು ಸಾಧಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಾವು ಕೇವಲ ಉತ್ತರ ಭಾರತದ ಪಕ್ಷವಲ್ಲ ಎಂಬುದನ್ನು ಜನರ ಮತಗಳು ತಿಳಿಸಲಿವೆ. ದಕ್ಷಿಣ ಭಾರತದ ಕಲೆ, ಸಂಸ್ಕೃತಿಗೆ ಆದ್ಯತೆ ನೀಡುವುದು ನಮ್ಮ ಉದ್ದೇಶ. ಪ್ರಧಾನಿ ನರೇಂದ್ರ ಮೋದಿ ಅವರು ಪದೇ ಪದೇ ದಕ್ಷಿಣದ ರಾಜ್ಯಗಳಿಗೆ ಭೇಟಿ ನೀಡುವುದು ಈ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರ ಸಂಕೇತ ಎಂದು ಹೇಳಿದರು.