ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುತ್ತಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ದಿವ್ಯ ನಿರ್ಲಕ್ಷ್ಯ ತಳೆದಿದೆ ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸುವರ್ಣ ವಿಧಾನಸಭೆ : ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುತ್ತಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ದಿವ್ಯ ನಿರ್ಲಕ್ಷ್ಯ ತಳೆದಿದೆ ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಮಾತನಾಡಿ, ಈ ಸರ್ಕಾರ ದಕ್ಷಿಣ ಕರ್ನಾಟಕದ ಅಭಿವೃದ್ಧಿಗೆ ನೀಡುತ್ತಿರುವ ಆದ್ಯತೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನೀಡುತ್ತಿಲ್ಲ. ಈ ಭಾಗದಲ್ಲಿ ಪ್ರವಾಹದಿಂದ ತೊಗರಿ, ಮೆಕ್ಕೆಜೋಳ, ಹೆಸರು, ಉದ್ದು ಮೊದಲಾದ ಬೆಳೆಗಳು ನಾಶವಾಗಿವೆ. ಈ ಭಾಗದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿರುವುದು ಸರ್ಕಾರದ ಕರ್ತವ್ಯ. ಆದರೆ, ಇದರಲ್ಲಿ ಸರ್ಕಾರ ವಿಫಲವಾಗಿದೆ. ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರದ ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತಿದೆ ಟೀಕಿಸಿದರು.
ರಾಜ್ಯದಲ್ಲಿ ಕಳೆದ ಎರಡ್ಮೂರು ತಿಂಗಳಿಂದ ಕಬ್ಬು ಬೆಳೆಗಾರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಿದೆ. ಮುಖ್ಯಮಂತ್ರಿ ಅವರು ಕಬ್ಬು ಕಟಾವಿಗೂ ಮುನ್ನ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆದು ಚರ್ಚಿಸಬೇಕಿತ್ತು. ಆದರೆ, ಆ ಕೆಲಸ ಮಾಡಿಲ್ಲ. ಹೀಗಾಗಿ ಕಬ್ಬು ಬೆಳೆಗಾರರು ಬೀದಿಗಿಳಿದು ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಖರೀದಿ ಕೇಂದ್ರ ತೆರೆಯುವಲ್ಲಿ ವಿಳಂಬ:
ಮೆಕ್ಕೆಜೋಳಕ್ಕೆ 2400 ರು. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಅದರೆ, ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆಯುವಲ್ಲಿ ವಿಳಂಬ ಮಾಡಿದೆ. ಇದರಿಂದ ಮಧ್ಯವರ್ತಿಗಳು ಲಾಭ ಮಾಡಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹವಾಗಿ ಶೇ.80ರಷ್ಟು ತೊಗರಿ, ಹೆಸರು, ಉದ್ದು ನಾಶವಾಗಿದೆ. ಆದರೂ ಸರ್ಕಾರಕ್ಕೆ ರೈತರ ನೆರವಿಗೆ ಧಾವಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಕರೆಗೆ 25 ಸಾವಿರ ರು. ಪರಿಹಾರಕ್ಕೆ ಆಗ್ರಹ:
ಒಂದು ವರ್ಷ ಕಳೆದರೂ ತುಂಗಾಭದ್ರಾ ಅಣೆಕಟ್ಟೆಗೆ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಮುಗಿದಿಲ್ಲ. ಈ ಬಾರಿ ಆ ಭಾಗದಲ್ಲಿ ರೈತರ ಎರಡನೇ ಬೆಳೆಗೆ ನೀರು ಇಲ್ಲ. ಸರ್ಕಾರದ ವಿಳಂಬ ಧೋರಣೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ಆ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರು. ಪರಿಹಾರ ನೀಡಬೇಕು. ಇನ್ನು ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳು ಸ್ಥಗಿತವಾಗಿವೆ. ನೀರಾವರಿ ಯೋಜನೆಗಳಿಗೆ ಕಳೆದ ಎರಡೂವರೆ ವರ್ಷದಲ್ಲಿ 20 ಸಾವಿರ ಕೋಟಿ ರು. ಅನುದಾನ ನೀಡಿಲ್ಲ. ಈ ಸರ್ಕಾರಕ್ಕೆ ಉತ್ತರ ಕರ್ನಾಟಕದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಗೃಹಲಕ್ಷ್ಮೀ ಚುನಾವಣಾ ಲಕ್ಷ್ಮೀ:
ಉತ್ತರ ಕರ್ನಾಟಕ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಕೆಪಿಎಸ್‌ಸಿಯಲ್ಲಿ ಸುಧಾರಣೆ ತರುವಲ್ಲಿ ಈ ಸರ್ಕಾರ ವಿಫಲವಾಗಿದೆ. ನಾಡಿನ ಯುವಕರ ತಾಳ್ಮೆ ಪರೀಕ್ಷಿಸಬೇಡಿ. ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಚುನಾವಣಾ ಲಕ್ಷ್ಮೀ ಆಗಿದೆ. ಚುನಾವಣೆಗಳು ಬಂದಾಗ ಖಾತೆಗೆ ಹಣ ಹಾಕುತ್ತಾರೆ. ಶಾಸಕರಿಗೆ ಅನುದಾನ ನೀಡುವಲ್ಲಿ ಈ ಸರ್ಕಾರ ವಿಫಲವಾಗಿದೆ. ಅಭಿವೃದ್ಧಿಯಲ್ಲಿ ಈ ಸರ್ಕಾರ ಸಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದರು.
ವಿಜಯೇಂದ್ರ ಚಾರ್ಜ್‌ಶೀಟ್
- ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಲ್ಲಿ ವಿಳಂಬ
- ಗೃಹಲಕ್ಷ್ಮಿ ಬರೀ ಎಲೆಕ್ಷನ್ ಲಕ್ಷ್ಮಿಯಾಗಿ ಸೀಮಿತ
- ರೈತರ 2ನೇ ಬೆಳೆಗೆ ತುಂಗಭದ್ರೆಯ ನೀರು ಇಲ್ಲ
- ಉ.ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳ
- ಕೆಪಿಎಸ್‌ಸಿಯಲ್ಲಿ ಸುಧಾರಣೆಯಲ್ಲಿ ಸರ್ಕಾರ ವಿಫಲ
- ಕಬ್ಬು ಬೆಳೆಗಾರರ ಸಮಸ್ಯೆ ನಿವಾರಿಸದ ಸರ್ಕಾರ
- ಒಟ್ಟಾರೆಯಾಗಿ ಉತ್ತರದ ಬಗ್ಗೆ ಉದಾಸೀನ


