ಬೆಂಗಳೂರು [ಜ.31]:  ಅಧಿಕಾರದಿಂದ ಕೆಳಗಿಳಿದ ಏಳು ತಿಂಗಳ ಬಳಿಕ ಹಿಂದಿನ ಮೈತ್ರಿ ಸರ್ಕಾರದ ಎಂಟು ಮಾಜಿ ಸಚಿವರಿಗೆ ಕಲ್ಪಿಸಲಾಗಿದ್ದ ವಿಶೇಷ ಭದ್ರತೆಯನ್ನು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹಿಂಪಡೆದಿದ್ದಾರೆ. ವರ್ಗೀಕೃತ ಭದ್ರತಾ ಶ್ರೇಣಿಗೊಳಪಟ್ಟಿರುವ ‘ಎ’ ಪಟ್ಟಿಯಲ್ಲಿನ ಗಣ್ಯರನ್ನು ಹೊರತುಪಡಿಸಿ ‘ಬಿ’ ಗಣ್ಯರಿಗೆ ಒದಗಿಸಲಾಗಿದ್ದ ಅಂಗರಕ್ಷಕ ಮತ್ತು ನಿವಾಸದ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

ಕೆಲವು ಭದ್ರತಾ ಕಾರಣಗಳಿಗೆ ಮಾಜಿ ಸಚಿವರಾದ ಪಿ.ಟಿ.ಪರಮೇಶ್ವರ್‌ ನಾಯ್ಕ್ ಅವರಿಗೆ ಓರ್ವ ಅಂಗರಕ್ಷಕ ಹಾಗೂ ಜಮೀರ್‌ ಅಹಮ್ಮದ್‌ ಖಾನ್‌ ಅವರಿಗೆ ಮೂವರು ಅಂಗರಕ್ಷಕರು ಮತ್ತು ಬೆಂಗಾವಲು ವಾಹನಗಳನ್ನು ಮುಂದುವರೆಸಲಾಗಿದೆ. ಆದರೆ ಅವರಿಗೆ ಇನ್ನುಳಿದ ವಿಶೇಷ ರಕ್ಷಣಾ ಸೌಲಭ್ಯಗಳು ರದ್ದಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

3 ಲಕ್ಷ ಬಾಂಗ್ಲಾದೇಶಿಗಳು ಬೆಂಗಳೂರಿನಲ್ಲಿದ್ದಾರೆ; ಸಾಕ್ಷ್ಯ ಕೊಟ್ಟ ಭಾಸ್ಕರ್ ರಾವ್...

‘ಬಿ’ ಪಟ್ಟಿಗಣ್ಯರು:  ಮಾಜಿ ಸಚಿವರಾದ ಆರ್‌.ವಿ.ದೇಶಪಾಂಡೆ, ಬಂಡೆಪ್ಪ ಕಾಶೆಂಪೂರ್‌, ಆರ್‌.ಬಿ.ತಿಮ್ಮಾಪುರ್‌, ತುಕಾರಾಂ, ರಹೀಂಖಾನ್‌, ಸತೀಶ್‌ ಜಾರಕಿಹೊಳಿ, ಪಿ.ಟಿ.ಪರಮೇಶ್ವರ್‌ ನಾಯ್ಕ್ ಹಾಗೂ ಜಮೀರ್‌ ಅಹಮ್ಮದ್‌ ಖಾನ್‌ ಅವರಿಗೆ ಸರ್ಕಾರದಿಂದ ನೀಡಲಾಗಿದ್ದ ವಿಶೇಷ ಭದ್ರತೆಯನ್ನು ಹಿಂಪಡೆಯಲಾಗಿದೆ.

‘ಎ’ ಪಟ್ಟಿಯ ಗಣ್ಯರು:  ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರಿಗೆ ಝಡ್‌ ಪ್ಲಸ್‌ ರಕ್ಷಣೆ ಮತ್ತು ಪೈಲಟ್‌ ವಾಹನ ಒದಗಿಸಲಾಗಿದೆ. ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್‌ ಮತ್ತು ಎಚ್‌.ಡಿ.ರೇವಣ್ಣ ಅವರಿಗೆ ಝಡ್‌ ಶ್ರೇಣಿ ಭದ್ರತೆ ಮತ್ತು ಡಿ.ಕೆ.ಶಿವಕುಮಾರ್‌ ಹಾಗೂ ಕೆ.ಜೆ.ಜಾರ್ಜ್ ಅವರಿಗೆ ವೈ ಶ್ರೇಣಿ ಭದ್ರತೆ ಮುಂದುವರೆಸಲಾಗಿದೆ.