ಕಾಂಗ್ರೆಸ್ ಅಧಿಕಾರವಿರುವ ಎಲ್ಲೆಡೆಯೂ ದೇಶದ್ರೋಹಿಗಳಿಗೆ ವಿಶೇಷ ಶಕ್ತಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ಅಧಿಕಾರವಿರುವ ಎಲ್ಲೆಡೆಯೂ ಮತಾಂಧ ಶಕ್ತಿಗಳು ಹಾಗೂ ದೇಶದ್ರೋಹಿಗಳಿಗೆ ವಿಶೇಷ ಶಕ್ತಿ ಬರುತ್ತದೆ. ಇದಕ್ಕೆ ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯೇ ಕಾರಣ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಹುಬ್ಬಳ್ಳಿ (ಸೆ.22): ಕಾಂಗ್ರೆಸ್ ಅಧಿಕಾರವಿರುವ ಎಲ್ಲೆಡೆಯೂ ಮತಾಂಧ ಶಕ್ತಿಗಳು ಹಾಗೂ ದೇಶದ್ರೋಹಿಗಳಿಗೆ ವಿಶೇಷ ಶಕ್ತಿ ಬರುತ್ತದೆ. ಇದಕ್ಕೆ ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯೇ ಕಾರಣ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ಇಂದು ತುಷ್ಟೀಕರಣದ ರಾಜಕಾರಣ ಪರಾಕಾಷ್ಠೆಗೆ ತಲುಪಿದೆ. ನಾಗಮಂಗಲ, ಕೊಪ್ಪಳ ಘಟನೆಯನ್ನು ಪೊಲೀಸರು ಸರಿಯಾಗಿ ನಿರ್ವಹಿಸಿಲ್ಲ. ಪೊಲೀಸ್ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿ ಕೆಲಸ ಮಾಡಬಾರದು ಎಂದರು.
ಕೇಂದ್ರದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ತಾವೆಂದೂ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಕಾಂಗ್ರೆಸ್ಸಿಗರಿಗೆ ಮನವರಿಕೆಯಾಗಿದೆ. ಹಾಗಾಗಿ ಕೇಂದ್ರ ಸರ್ಕಾರದ ಎಲ್ಲ ನಿರ್ಣಯಗಳನ್ನು ವಿರೋಧಿಸುತ್ತ ಬರುತ್ತಿದ್ದಾರೆ. ಮುಂದೆಯೂ ಅಧಿಕಾರಕ್ಕೆ ಬರುವುದು ಅಸಾಧ್ಯ ಎಂಬ ಹತಾಶೆಯಲ್ಲಿ ಕಾಂಗ್ರೆಸ್ ಒಂದು ದೇಶ- ಒಂದು ಚುನಾವಣೆಗೆ ವಿರೋಧಿಸುತ್ತಿದೆ ಎಂದು ಟೀಕಿಸಿದರು.
ಎಚ್ಚರಿಕೆಯಿಂದ ಮಾತನಾಡಿ: ದಾವಣಗೆರೆಯ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹಿಂದುಗಳ ಕೊಲೆ ಸಂಚು ರೂಪಿಸಲಾಗಿತ್ತು ಎಂಬ ವಿಚಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಾಟಿಯಲ್ಲಿಯೇ ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಎಚ್ಚರಿಕೆಯಿಂದ ಮಾತನಾಡಬೇಕು. ನಾಗಮಂಗಲ ಗಲಾಟೆಯಲ್ಲಿ ಪಿಎಫ್‌ಐ ಸಂಘಟನೆಗಳು ಪೂರ್ವ ತಯಾರಿ ಮಾಡಿಕೊಂಡಿರುವುದು ಈಗ ಎಲ್ಲೆಡೆ ಬೆಳಕಿಗೆ ಬಂದಿದೆ. ಹಿಂದುಗಳ ಅಂಗಡಿಗಳ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಒಂದೇ ದಿನಕ್ಕೆ ಈ ರೀತಿ ದಾಳಿ ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದರು. ಇದೊಂದು ಅತ್ಯಂತ ತುಷ್ಟೀಕರಣ ನೀತಿ ಎಂದು ಹರಿಹಾಯ್ದರು.
ವರ್ಷದೊಳಗಾಗಿ ತುಂಗಭದ್ರಾ ಜಲಾಶಯಕ್ಕೆ ನೂತನ ಕ್ರಸ್ಟ್ ಗೇಟ್ ಅಳವಡಿಕೆ: ಡಿ.ಕೆ.ಶಿವಕುಮಾರ್
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಲೋಕಾಯುಕ್ತ ವಿಚಾರವಾಗಿ ನೋಟಿಸ್ ಕೊಟ್ಟಿರುವ ಕುರಿತು ಉತ್ತರಿಸಿದ ಜೋಶಿ, ಕಾಂಗ್ರೆಸ್ ಸರ್ಕಾರ ರಾಜಕೀಯ ದ್ವೇಷದಿಂದ ಈ ರೀತಿಯ ಕ್ರಮಕ್ಕೆ ಮುಂದಾಗಿದೆ. ಕಾಂಗ್ರೆಸ್ ಸರ್ಕಾರ ಯಾವಾಗ ಬೇಕಾದರೂ ಪತನವಾಗುವ ಆತಂಕ ಎದುರಾಗಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡುವ ಪರಿಸ್ಥಿತಿ ಬರುತ್ತದೆ ಎಂಬ ಭಯದಿಂದಾಗಿ ಬಿ.ಎಸ್. ಯಡಿಯೂರಪ್ಪ ಅವರಂಥ ಹಿರಿಯರಿಗೆ ಸಮನ್ಸ್ ಜಾರಿ ಮಾಡುವುದು ಲೋಕಾಯುಕ್ತಕ್ಕೆ ತರವಲ್ಲ ಎಂದರು.