ಬೆಂಗಳೂರು, [ಫೆ.08]: ಇಂದು [ಶುಕ್ರವಾರ] ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಸಿ.ಡಿ ಆಡಿಯೋದಲ್ಲಿ ತಮ್ಮ ಹೆಸರು ಪ್ರಸ್ತಾಪ‌ವಾಗಿರುವ ಬಗ್ಗೆ ಸ್ಪೀಕರ್​ ರಮೇಶ್ ಕುಮಾರ್ ಗರಂ ಆಗಿದ್ದಾರೆ. 

 'ಆಡಿಯೋದಲ್ಲಿನ ಸಂಭಾಷಣೆ ಯಾರದ್ದು? ಎಂಬುದು ನನಗೆ ಗೊತ್ತಿಲ್ಲ. ಅಷ್ಟಕ್ಕೂ ಅದು ಯಡಿಯೂರಪ್ಪ ಅವರ ಧ್ವನಿಯಂತೂ ಅಲ್ಲವೇ ಅಲ್ಲ. ಯಡಿಯೂರಪ್ಪ ಈ ವಿಚಾರವಾಗಿ ನನ್ನ ಬಳಿ ಮಾತನಾಡಿಲ್ಲ' ಎಂದು ಸಿ.ಡಿಯಲ್ಲಿನ ಸಂಭಾಷಣೆ ಬಗ್ಗೆ ಸಭಾಧ್ಯಕ್ಷ ರಮೇಶ್ ಕುಮಾರ್ ವಿಧಾನಸೌಧದಲ್ಲಿ ಈ ಸ್ಪಷ್ಟನೆ ನೀಡಿದರು.

ದೇವರ ಹೆಸರಲ್ಲಿ ಯಡಿಯೂರಪ್ಪ ದೇವದುರ್ಗ ಭೇಟಿ ರಹಸ್ಯ ಬಯಲು

ಸೋಮವಾರ ಈ ವಿಚಾರವನ್ನ ಸದನದಲ್ಲಿ ನಾನೇ ಪ್ರಸ್ತಾಪ‌ ಮಾಡುತ್ತೇನೆ. ಇದನ್ನ ಯಾರಿಗೆ ತನಿಖೆಗೆ ಕೊಡಬೇಕು ಎಂಬುದನ್ನೂ ನಾನು ತೀರ್ಮಾನ ಮಾಡುತ್ತೇನೆ. 

ಬೀದಿಯಲ್ಲಿ ಹೋಗುವವರು ನನ್ನ ಹೆಸರನ್ನ ಬಳಸಲು ಬಿಡುವುದಿಲ್ಲ. ಆಡಿಯೋವನ್ನ ತರಿಸಿಕೊಂಡು ನಾನೂ ಕೇಳಿದ್ದೇನೆ. ಸಂಭಾಷಣೆ ನಡೆಸಿರುವ ವ್ಯಕ್ತಿ ನನ್ನ ಹೆಸರನ್ನ ಮಾತ್ರವಲ್ಲ, ನ್ಯಾಯಾಧೀಶರ ಹೆಸರನ್ನೂ ಪ್ರಸ್ತಾಪಿಸಿದ್ದಾನೆ. 

ಪ್ರಧಾನ ಮಂತ್ರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರನ್ನ ಪ್ರಸ್ತಾಪ ಮಾಡಿದ್ದಾನೆ ಎಂದು ಸಭಾಧ್ಯಕ್ಷ ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ನಾನು ಸಂಪೂರ್ಣ ಆಡಿಯೋ ಸಂಭಾಷಣೆಯನ್ನ ಆಲಿಸಿದ್ದೇನೆ. ಅದು ಯಡಿಯೂರಪ್ಪ ಧ್ವನಿಯಂತೂ ಅಲ್ಲವೇ ಅಲ್ಲಾ. ಕಾಂಗ್ರೆಸ್ ಅತೃಪ್ತ ಶಾಸಕರ ದೂರು ವಿಚಾರವಾಗಿ ನನ್ನ ಬಳಿ ಯಾರೂ ಬಂದಿಲ್ಲ, ದೂರನ್ನೂ ಕೊಟ್ಟಿಲ್ಲ ಎಂದರು.

ತಮ್ಮ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತದೆ ಎಂಬ ಆತಂಕದಲ್ಲಿ ಬಜೆಟ್​ಗೂ ಮುನ್ನ ಸುದ್ದಿಗೊಷ್ಠಿ ನಡೆಸಿ, ಬಿಜೆಪಿ ರಾಜ್ಯ ಅಧ್ಯಕ್ಷ ಯಡಿಯೂರಪ್ಪ ಅವರು ಸ್ಪೀಕರ್​ ರಮೇಶ್ ಕುಮಾರ್ ಅವರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಳ್ಳಲು ಹಣ ನೀಡಿದ್ದಾರೆ ಎಂದು ಸಿ.ಡಿ ಒಂದನ್ನು ಬಿಡುಗಡೆ ಮಾಡಿದ್ದರು.