ಡಿಕೆಶಿ ವಿರುದ್ಧ ತನಿಖೆಗೆ ಸ್ಪೀಕರ್ ಅನುಮತಿ ಬೇಕಿರಲಿಲ್ಲ: ಕಾಗೇರಿ
ಸಚಿವ ಸಂಪುಟ ಕೈಗೊಂಡಿರುವ ತೀರ್ಮಾನ ಸರಿಯಲ್ಲ. ಡಿ.ಕೆ.ಶಿವಕುಮಾರ್ ಬಗ್ಗೆ ಸಿಬಿಐ ತನಿಖೆ ಮುಂದುವರಿಯಬೇಕು. ಪ್ರಕರಣದಲ್ಲಿ ಸಭಾಧ್ಯಕ್ಷರ ಪಾತ್ರ ಏನೂ ಇಲ್ಲ. ಆದರೂ ಕಾಂಗ್ರೆಸ್ ಆ ಸ್ಥಾನ ಕುರಿತು ಹೇಳಿಕೆ ನೀಡಿದೆ: ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ
ಬೆಂಗಳೂರು(ನ.26): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಸಭಾಧ್ಯಕ್ಷ ಸ್ಥಾನದ ಕುರಿತು ಕಾಂಗ್ರೆಸ್ ಪ್ರಸ್ತಾಪಿಸಿರುವುದು ದುರ್ದೈವದ ಸಂಗತಿಯಾಗಿದ್ದು, ಸಿಬಿಐ ತನಿಖೆಗೆ ವಹಿಸಿರುವ ವಿಷಯ ಸಭ್ಯಾಧ್ಯಕ್ಷರ ವ್ಯಾಪ್ತಿಗೆ ಬರುವುದಿಲ್ಲ ಎಂದು ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ಸಂಪುಟ ಕೈಗೊಂಡಿರುವ ತೀರ್ಮಾನ ಸರಿಯಲ್ಲ. ಡಿ.ಕೆ.ಶಿವಕುಮಾರ್ ಬಗ್ಗೆ ಸಿಬಿಐ ತನಿಖೆ ಮುಂದುವರಿಯಬೇಕು. ಪ್ರಕರಣದಲ್ಲಿ ಸಭಾಧ್ಯಕ್ಷರ ಪಾತ್ರ ಏನೂ ಇಲ್ಲ. ಆದರೂ ಕಾಂಗ್ರೆಸ್ ಆ ಸ್ಥಾನ ಕುರಿತು ಹೇಳಿಕೆ ನೀಡಿದೆ ಎಂದರು.
ಸಿಬಿಐ ತನಿಖೆ ರದ್ದು ತೀರ್ಮಾನ ರಾಜ್ಯ ಸರ್ಕಾರದ್ದು: ಕೊನೆಗೂ ಮೌನ ಮುರಿದ ಡಿಕೆಶಿ
ಸಚಿವ ಸಂಪುಟದ ನಿರ್ಣಯವನ್ನು ಖಂಡಿಸುತ್ತೇನೆ ಮತ್ತು ಆ ನಿರ್ಣಯ ಕೈಗೊಳ್ಳಲು ಸಭಾಧ್ಯಕ್ಷ ಸ್ಥಾನವನ್ನು ಅವರು ಬಳಕೆ ಮಾಡಿಕೊಂಡಿರುವುದು ದುರ್ದೈವದ ಸಂಗತಿ. ಸಭಾಧ್ಯಕ್ಷರ ಅನುಮತಿಯ ವ್ಯಾಪ್ತಿಯಲ್ಲಿ ಬಾರದೆ ಇರುವ ವಿಷಯಕ್ಕೆ ಸಭಾಧ್ಯಕ್ಷರು ಅನುಮತಿ ಕೊಟ್ಟಿಲ್ಲ ಎಂಬ ಕಾರಣ ಹೇಳಿ ಸಚಿವ ಸಂಪುಟ ನಿರ್ಣಯ ಮಾಡಿದ್ದು ಕಾಂಗ್ರೆಸ್ ಸರ್ಕಾರದ ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ದೇಶದಲ್ಲಿಯೇ ಕರ್ನಾಟಕವು ತಲೆತಗ್ಗಿಸುವಂತಹ ನಿರ್ಣಯ ಅಂಗೀಕರಿಸಿದ್ದಾರೆ. ಡಿ.ಕೆ.ಶಿವಕುಮಾರ್ ಗಳಿಸಿದ ಅಕ್ರಮ ಆಸ್ತಿ ಸಂಬಂಧ ಸಿಬಿಐ ತನಿಖೆ ನಡೆಯುತ್ತಿದೆ. ಸಿಬಿಐ ಆರೋಪಪಟ್ಟಿ ಸಲ್ಲಿಸುವ ಪ್ರಕ್ರಿಯೆ ನಡೆಸುತ್ತಿದೆ. ಈ ಹಂತದಲ್ಲಿ ತನಿಖೆಗೆ ನೀಡಿದ್ದ ಅನುಮತಿ ಹಿಂತೆಗೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿತನ ಉಳ್ಳವರು. ಅವರು ಯಾವ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ವ್ಯಕ್ತವಾಗುತ್ತದೆ. ಅವರು ಆತ್ಮಸಾಕ್ಷಿಗನುಗುಣವಾಗಿ ಕೆಲಸ ಮಾಡಬೇಕು. ಅವರ ಹಿರಿತನ, ಅನುಭವಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಈ ರೀತಿಯ ಒತ್ತಡಕ್ಕೆ ಮಣಿದು, ಅಸಹಾಯಕರಾಗಿ ಅಥವಾ ಬಿಜೆಪಿ ಮೇಲೆ ಇನ್ನೇನೋ ಸಿಟ್ಟು, ದ್ವೇಷ ಸಾಧನೆಗೆ ಈ ರೀತಿ ರಾಜ್ಯದ ಜನರು, ನಮ್ಮ ವ್ಯವಸ್ಥೆಯೇ ತಲೆತಗ್ಗಿಸುವಂಥ ನಿರ್ಣಯವನ್ನು ಕೈಗೊಳ್ಳಬಾರದು ಎಂದು ಒತ್ತಾಯಿಸಿದರು.