Asianet Suvarna News Asianet Suvarna News

‘ಆಡಿಯೋ ಬಾಂಬ್‌’ ಪ್ರಕರಣ: ಸದನ ನಾಯಕರ ಸಂಧಾನ ಸಭೆ ವಿಫಲ!

ಅಧಿವೇಶನದಲ್ಲಿ ಅತ್ಯರ್ಥವಾಗದ 'ಆಡಿಯೋ ಬಾಂಬ್' ಪ್ರಕರದ ತನಿಖೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಸ್ಪೀಕರ್ ನೇತೃತ್ವದಲ್ಲಿ ಸದನ ನಾಯಕರ ಸಭೆ ಆಯೋಜಿಸಲಾಗಿತ್ತು. ಆದರೀಗ ಆ ಸಭೆ ವಿಫಲಗೊಂಡಿದೆ.

speaker negotiation meet with BSY and alliance parties about Operation audio failed
Author
Bangalore, First Published Feb 13, 2019, 12:16 PM IST

ಬೆಂಗಳೂರು[ಫೆ,13]: ‘ಆಡಿಯೋ ಬಾಂಬ್‌’ ಪ್ರಕರಣವು ಭಾರೀ ಕುತೂಹಲ ಮೂಡಿಸಿದೆ. ತಮ್ಮ ರೂಲಿಂಗ್‌ ಕುರಿತು ಪುನರ್‌ಪರಿಶೀಲನೆ ನಡೆಸುವ ಸಂಬಂಧ ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ಮನವಿ ಮೇರೆಗೆ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಇಂದು ಸದನ ನಾಯಕರ ಸಭೆ ಕರೆದಿದ್ದರು. ಆದರೀಗ ಬಿಜೆಪಿ ನಾಯಕರು ಸ್ಪೀಕರ್ ನಡೆಸುತ್ತಿದ್ದ ಸಭೆಯಿಂದ ಅರ್ಧಕ್ಕೆ ಹೊರಬಂದಿದ್ದರು. ಇದಾದ ಬಳಿಕ ಎರಡನೇ ಸುತ್ತಿನ ಸಭೆ ಕರೆಯಲಾಗಿದ್ದು, ಈ ಸಭೆಯೂ ವಿಫಲವಾಗಿ ಈ ಮೂಲಕ ಸಂಧಾನ ಸಭೆ ವಿಫಲವಾಗಿದೆ.

ಹೌದು ಸಂಧಾನ ಸಭೆಯಲ್ಲಿ ಬಿಜೆಪಿಯು ಆಡಿಯೋ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸಲು ತೀವ್ರ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಸ್ಪೀಕರ್ ನೇತೃತ್ವದ ಸಂಧಾನ ಸಭೆ ವಿಫಲವಾಗಿದೆ ಎನ್ನಲಾಗಿದೆ.

ಬಿಎಸ್‌ವೈ ಮನವಿಗೆ ಸ್ಪಂಧಿಸಿ ಸಭೆ:

ಸೋಮವಾರ ಕಲಾಪದಲ್ಲಿ ಮೌನಕ್ಕೆ ಶರಣಾಗಿದ್ದ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಅವರು ಮಂಗಳವಾರ ವಿಧಾನಸಭೆಯಲ್ಲಿ ಪ್ರಕರಣದ ಬಗೆಗಿನ ಚರ್ಚೆ ವೇಳೆ ಮೌನ ಮುರಿದು ಮಾತನಾಡಿದ್ದರು.

ಸಾಮಾನ್ಯವಾಗಿ ಸದನದಲ್ಲಿ ಪ್ರಮುಖ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಕಲಾಪಕ್ಕೂ ಮೊದಲು ಸಭಾಧ್ಯಕ್ಷರು ವಿರೋಧಪಕ್ಷದ ನಾಯಕರನ್ನೂ ತಮ್ಮ ಕೊಠಡಿಗೆ ಕರೆಸಿ ಚರ್ಚಿಸುವ ಸತ್‌ಸಂಪ್ರದಾಯ ಇದೆ. ಆದರೆ ಈ ಪ್ರಕರಣದಲ್ಲಿ ಸಭಾಧ್ಯಕ್ಷರು ಏಕಾಏಕಿ ಚರ್ಚೆಗೆ ಅವಕಾಶ ಕಲ್ಪಿಸಿ ಎಸ್‌ಐಟಿ ತನಿಖೆಗೆ ವಹಿಸಿದ್ದೀರಿ. ಪ್ರಕರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿಗಳ ಅಡಿಯಲ್ಲೇ ಬರುವ ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಇದನ್ನು ಪುನರ್‌ಪರಿಶೀಲನೆ ನಡೆಸಬೇಕು ಎಂದು ಒತ್ತಾಯ ಮಾಡಿದ್ದರು.

ಪ್ರಕರಣದ ತನಿಖೆಗೆ ಯಾವುದೇ ವಿರೋಧ ವ್ಯಕ್ತಪಡಿಸುತ್ತಿಲ್ಲ. ಸಭಾಧ್ಯಕ್ಷರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಎಸ್‌ಐಟಿ ತನಿಖೆಗೆ ವಹಿಸಲು ಸಭಾಧ್ಯಕ್ಷರಿಗೆ ಅಧಿಕಾರ ಇಲ್ಲ. ಹೀಗಾಗಿ ಸದನ ಸಮಿತಿಗೆ ವಹಿಸಬೇಕು. ಈ ಬಗ್ಗೆ ಸಭಾಧ್ಯಕ್ಷರ ಕೊಠಡಿಯಲ್ಲಿ ಚರ್ಚೆ ನಡೆಯಬೇಕು. ಯಾವುದೇ ಚರ್ಚೆ ನಡೆಸದೆ ಬಲಾತ್ಕಾರವಾಗಿ ಎಸ್‌ಐಟಿ ತನಿಖೆಗೆ ಆದೇಶಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ವೇಳೆ ಸ್ಪೀಕರ್‌ ರಮೇಶ್‌ ಕುಮಾರ್‌, ಫೆ.6ರಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ಕಲಾಪ ಶುರುವಾಗುವ ಮೊದಲು ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಗೆ ತಮ್ಮನ್ನು ಆಹ್ವಾನಿಸಲಾಗಿತ್ತು. ಆದರೆ, ತಮ್ಮ ಪಕ್ಷದ ಮುಖ್ಯ ಸಚೇತಕರು ತಾವು ಬಿಎಸಿಗೆ ಹಾಜರಾಗುವುದಿಲ್ಲ ಎಂಬ ಮಾಹಿತಿ ನೀಡಿದ್ದರು. ಸಂಸದೀಯ ವ್ಯವಸ್ಥೆಯ ಇತಿಹಾಸದಲ್ಲಿ ಬಿಎಸಿ ಬಹಿಷ್ಕರಿಸುವ ಸಂಪ್ರದಾಯವಿಲ್ಲ. ನೀವು ಬಹಿಷ್ಕರಿಸುವ ಮೂಲಕ ಸಭಾಧ್ಯಕ್ಷನಾದ ನನ್ನ ಮನಸಿಗೆ ಘಾಸಿ ಉಂಟುಮಾಡಿದ್ದೀರಿ. ನಾನು ನೋವು ನುಂಗಿಕೊಂಡಿದ್ದೆ. ಅದನ್ನು ಹೇಳಲಾಗಿರಲಿಲ್ಲ. ಹೀಗಾಗಿ ಚರ್ಚೆಗೆ ಕರೆದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.

ಈ ವೇಳೆ ಮಾತು ಮುಂದುವರೆಸಿದ ಯಡಿಯೂರಪ್ಪ, ನಾವು ಪಕ್ಷದ ವೈಯಕ್ತಿಕ ಕಾರಣಗಳಿಗೆ ಬಿಎಸಿಗೆ ಭಾಗವಹಿಸಿರಲಿಲ್ಲ. ಬಿಎಸಿಗೆ ಭಾಗವಹಿಸದೆ ಇರುವುದಕ್ಕೂ ಈ ಪ್ರಕರಣಕ್ಕೂ ಸಬಂಧವಿಲ್ಲ. ನಮ್ಮನ್ನು ಕರೆದು ಮಾತನಾಡಿ ಸದನ ಸಮಿತಿಗೆ ವಹಿಸಬೇಕು. ಎಸ್‌ಐಟಿಗೆ ವಹಿಸಲು ನಾವು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಹೀಗಾಗಿ ಸಭಾಧ್ಯಕ್ಷರಾದ ರಮೇಶ್‌ ಕುಮಾರ್‌ ಅವರು ಬುಧವಾರ ಬೆಳಗ್ಗೆ 10.30 ಗಂಟೆಗೆ ಪ್ರಕರಣದ ಬಗ್ಗೆ ಸಭಾಧ್ಯಕ್ಷರ ಕೊಠಡಿಯಲ್ಲಿ ಚರ್ಚೆಗೆ ಸಭೆ ಏರ್ಪಡಿಸುವುದಾಗಿ ಘೋಷಿಸಿದರು. ಜತೆಗೆ ಬೆಳಗ್ಗೆ 11.30 ಗಂಟೆಯಿಂದ ಕಲಾಪ ಶುರುವಾಗಲಿದೆ ಎಂದು ಸದನಕ್ಕೆ ಮಾಹಿತಿ ನೀಡಿದ್ದರು.

ಮುಂದೇನು?

ಇಂದಿನ ಸಭೆ ವಿಫಲವಾದ ಪರಿಣಾಮ ಈ ವಿಚಾರ ಮತ್ತೊಮ್ಮೆ ಅಧಿವೇಶನದಲ್ಲಿ ಸದ್ದು ಮಾಡುವ ಸಾಧ್ಯತೆಗಳಿವೆ. ಆದರೆ ಅಲ್ಲೂ ಈ ಆಡಿಯೋ ಪ್ರಕರಣ ಇತ್ಯರ್ಥವಾಗದಿದ್ದಲ್ಲಿ ಸ್ಪೀಕರ್ ನೇತೃತ್ವದಲ್ಲಿ ಮತ್ತೊಂದು ಸಭೆ ಕರೆಯುವ ಸಾಧ್ಯತೆಗಳಿವೆ.

Follow Us:
Download App:
  • android
  • ios