ನವದೆಹಲಿ[ಅ.09]: ಅಸೋಸಿಯೇಷನ್‌ ಆಫ್‌ ಡೆಮಾಕ್ರೆಟಿಕ್‌ ರಿಫಾಮ್‌ರ್‍ (ಎಡಿಆರ್‌) ಸಂಸ್ಥೆ 2017-18ನೇ ಸಾಲಿನಲ್ಲಿ ವಿವಿಧ ಪ್ರಾದೇಶಿಕ ಪಕ್ಷಗಳು ಹೊಂದಿರುವ ಒಟ್ಟು ಆಸ್ತಿಯ ಕುರಿತ ವರದಿಯೊಂದನ್ನು ಬಿಡುಗಡೆ ಮಾಡಿದ್ದು, 583 ಕೋಟಿ ರು. ಆಸ್ತಿಯೊಂದಿಗೆ ಉತ್ತರಪ್ರದೇಶದ ಸಮಾಜವಾದಿ ಪಕ್ಷ ಅತ್ಯಂತ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. ಕಳೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿನ ಪಕ್ಷದ ಹೀನಾಯ ಸೋಲಿನ ಹೊರತಾಗಿಯೂ, 2016-17ನೇ ಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಪಕ್ಷದ ಒಟ್ಟು ಆದಾಯದಲ್ಲಿ ಶೇ.2.13ರಷ್ಟುಏರಿಕೆ ಕಂಡುಬಂದಿದೆ.

ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ತಮಿಳುನಾಡಿನ ಡಿಎಂಕೆ 191.64 ಕೋಟಿ ರು. ಆಸ್ತಿ ಹೊಂದಿದ್ದರೆ, 189.54 ಕೋಟಿ ರು. ಆಸ್ತಿ ಹೊಂದಿರುವ ತಮಿಳುನಾಡಿನ ಇನ್ನೊಂದು ಪ್ರಾದೇಶಿಕ ಪಕ್ಷವಾದ ಎಐಎಡಿಎಂಕೆ 3ನೇ ಸ್ಥಾನದಲ್ಲಿದೆ. 2016-17ನೇ ಸ್ಥಾನಕ್ಕೆ ಹೋಲಿಸಿದರೆ ಎಸ್ಪಿ, ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷ ಆಸ್ತಿ ಕ್ರಮವಾಗಿ ಶೇ.2.1, ಶೇ.4.5, ಶೇ.1 ರಷ್ಟುಏರಿಕೆಯಾಗಿದೆ.

2017-18ನೇ ಸಾಲಿನಲ್ಲಿ ಒಟ್ಟು 41 ಪ್ರಾದೇಶಿಕ ಪಕ್ಷಗಳು ತಮ್ಮ ಆಸ್ತಿ, ಸಾಲದ ಘೋಷಣೆ ಮಾಡಿದ್ದು, ಅದರನ್ವಯ ಪ್ರಾದೇಶಿಕ ಪಕ್ಷಗಳ ಒಟ್ಟು ಆಸ್ತಿ 1320 ಕೋಟಿ ರು.ನಷ್ಟಿದೆ. ಪಟ್ಟಿಯಲ್ಲಿರುವ ಟಾಪ್‌ 10 ಶ್ರೀಮಂತ ಪಕ್ಷಗಳ ಸರಾಸರಿ ಆಸ್ತಿ 117 ಕೋಟಿ ರು.ನಷ್ಟಿದೆ ಎಂದು ವರದಿ ಹೇಳಿದೆ.

ಅತಿ ಹೆಚ್ಚು ಏರಿಕೆ: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಜೆಡಿಯು (ಶೇ.298), ವೈಎಸ್‌ಆರ್‌ ಕಾಂಗ್ರೆಸ್‌ (ಶೇ.225) ಜೆಡಿಎಸ್‌ (ಶೇ.102) ಅತಿ ಹೆಚ್ಚು ಏರಿಕೆ ದಾಖಲಿಸಿವೆ.

ಇನ್ನು 22.71 ಕೋಟಿ ರು. ಸಾಲದೊಂದಿಗೆ ಟಿಡಿಪಿ ಅತಿ ಹೆಚ್ಚು ಸಾಲ ಹೊಂದಿದ ಪಕ್ಷವಾಗಿ ಹೊರಹೊಮ್ಮಿದೆ. ಟಿಡಿಪಿಯ ಒಟ್ಟು 114 ಕೋಟಿ ರು. ಆಸ್ತಿ ಹೊಂದಿದೆ.