ಬೆಂಗಳೂರು [ಜ.25]:  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವಿದೇಶ ಪ್ರವಾಸದಿಂದ ವಾಪಸಾದ ಬೆನ್ನಲ್ಲೇ ಸಂಪುಟ ವಿಸ್ತರಣೆ ಕುರಿತ ಚಟುವಟಿಕೆಗಳು ಗರಿಗೆದರಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ತೊರೆದು ಬಂದವರ ಪೈಕಿ ಎಷ್ಟುಮಂದಿಗೆ ಸಚಿವ ಸ್ಥಾನ ನೀಡಬೇಕು ಎಂಬ ಚರ್ಚೆ ತಾರಕಕ್ಕೇರಿದೆ.

ಕಳೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಅರ್ಹ ಶಾಸಕರಿಗೂ ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಅವರು ಪದೇ ಪದೇ ಸ್ಪಷ್ಟಪಡಿಸುತ್ತಿದ್ದರೂ ಆ ಪೈಕಿ ಅರ್ಧದಷ್ಟುಮಂದಿಗೆ ಮಾತ್ರ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆಯನ್ನು ಆಡಳಿತಾರೂಢ ಬಿಜೆಪಿಯ ಮತ್ತೊಂದು ಬಣ ಪಕ್ಷದ ವರಿಷ್ಠರ ಮುಂದಿಟ್ಟಿರುವುದರಿಂದ ಗೊಂದಲ ಶುರುವಾಗಿದೆ.

ದಾವೋಸ್ ಸಂಭ್ರಮ ಮುಗಿಯಿತು: ಬಿಎಸ್‌ವೈಗೆ ಶುರುವಾಯ್ತು ಸಂಪುಟ ಸಂಕಟ.

ಈ ಬೆಳವಣಿಗೆಯಿಂದ ಸಹಜವಾಗಿಯೇ ಆತಂಕಕ್ಕೀಡಾಗಿರುವ ಅರ್ಹ ಶಾಸಕರು, ಎಲ್ಲರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ಹಿಂದೆ ಭರವಸೆ ನೀಡಿರುವ ಕುರಿತು ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಒತ್ತಡ ಹೇರುತ್ತಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಂಪರ್ಕಿಸಿ ಹಿಂದಿನ ಭರವಸೆ ನೆನಪಿಸುವುದರಲ್ಲಿ ನಿರತರಾಗಿದ್ದಾರೆ.

ನಡ್ಡಾ, ಶಾ ಭೇಟಿ ಬಳಿಕ ಚಿತ್ರಣ:

ಇದೀಗ ಯಡಿಯೂರಪ್ಪ ಅವರು ಖುದ್ದಾಗಿ ದೆಹಲಿಗೆ ತೆರಳಿ ಅಥವಾ ದೂರವಾಣಿ ಮೂಲಕ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಹಿಂದಿನ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ಮಾತುಕತೆ ನಡೆಸಿದ ನಂತರವೇ ಸಂಪುಟ ವಿಸ್ತರಣೆ ಸ್ವರೂಪದ ಬಗ್ಗೆ ಸ್ಪಷ್ಟಚಿತ್ರಣ ಹೊರಬೀಳುವುದು ನಿಶ್ಚಿತವಾಗಿದೆ. ಬರುವ ಫೆ.8ರಂದು ದೆಹಲಿ ವಿಧಾನಸಭೆ ಚುನಾವಣೆ ಇರುವುದರಿಂದ ಪಕ್ಷದ ವರಿಷ್ಠರು ಅಷ್ಟರೊಳಗಾಗಿ ಮಾತುಕತೆಗೆ ಲಭ್ಯವಾಗುತ್ತಾರಾ ಎಂಬುದು ಕುತೂಹಲಕರವಾಗಿದೆ.

ಬಿಜೆಪಿಗೆ ಸೇರ್ಪಡೆಯಾದ ಎಲ್ಲರಿಗೂ ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಸೇರಿದಂತೆ ಎಲ್ಲ ಬಿಜೆಪಿ ನಾಯಕರೂ ಉಪಚುನಾವಣೆ ವೇಳೆ ಬಹಿರಂಗವಾಗಿಯೇ ಘೋಷಿಸಿದ್ದರು. ರೋಷನ್‌ ಬೇಗ್‌ ಅವರೊಬ್ಬರನ್ನು ಹೊರತುಪಡಿಸಿ ಇನ್ನುಳಿದ 16 ಮಂದಿ ಅನರ್ಹ ಶಾಸಕರು ಬಿಜೆಪಿ ಸೇರಿದ್ದರು. ಅದನ್ನು ದೃಷ್ಟಿಯಲ್ಲಿರಿಸಿಕೊಂಡೇ ಯಡಿಯೂರಪ್ಪ ಅವರು ತಮ್ಮ ಸಂಪುಟದಲ್ಲಿ 16 ಸ್ಥಾನಗಳನ್ನು ಖಾಲಿ ಉಳಿಸಿಕೊಂಡಿದ್ದಾರೆ.

ಉಪಚುನಾವಣೆ ನಡೆದದ್ದು 15 ಸ್ಥಾನಗಳಿಗೆ. ಇನ್ನುಳಿದ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ಬಾಕಿಯಿದೆ. ಈ ಪೈಕಿ ರೋಷನ್‌ ಬೇಗ್‌ ಅವರ ಶಿವಾಜಿನಗರ ಹೊರತುಪಡಿಸಿ ಇನ್ನುಳಿದ 14 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಅನರ್ಹ ಶಾಸಕರು ಗೆಲುವು ಸಾಧಿಸಿದ್ದಾರೆ. ಆರ್‌.ಶಂಕರ್‌ ಅವರು ಚುನಾವಣೆಗೆ ಸ್ಪರ್ಧಿಸಲಿಲ್ಲ. ಚುನಾವಣೆಗೆ ಸ್ಪರ್ಧಿಸಿದ್ದ ಎಂ.ಟಿ.ಬಿ.ನಾಗರಾಜ್‌ ಮತ್ತು ಎಚ್‌.ವಿಶ್ವನಾಥ್‌ ಅವರು ಸೋಲು ಅನುಭವಿಸಿದರು.

ಹೀಗಾಗಿ, ಗೆದ್ದ ಅರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಉಪಚುನಾವಣೆ ಫಲಿತಾಂಶ ಹೊರಬಿದ್ದ ದಿನದಿಂದಲೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪಷ್ಟಪಡಿಸುತ್ತಲೇ ಬಂದಿದ್ದಾರೆ. ಆದರೆ, ಸೋತವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಒಲವಿದ್ದರೂ ವಿಧಾನಪರಿಷತ್‌ ಸ್ಥಾನ ತೆರವಾಗಲು ಜೂನ್‌ವರೆಗೆ ಕಾಯಬೇಕಾಗಿ ಬರಬಹುದು.

3-4 ದಿನಗಳಲ್ಲಿ ನಿರ್ಧಾರ- ಬಿಎಸ್‌ವೈ:

ಸಚಿವ ಸಂಪುಟ ವಿಸ್ತರಣೆಯ ಬಗ್ಗೆ 3-4 ದಿನದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಇದೇ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಶುಕ್ರವಾರ ವಿದೇಶ ಪ್ರವಾಸದಿಂದ ವಾಪಸಾದ ಬಳಿಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿರುವುದು ನಿಜ. ಆದರೆ ಶೀಘ್ರದಲ್ಲಿಯೇ ವಿಸ್ತರಣೆ ನಡೆಯಲಿದೆ. 3-4 ದಿನದಲ್ಲಿ ನಿರ್ಧಾರ ಕೈಗೊಂಡು, ಇದೇ ತಿಂಗಳಲ್ಲಿಯೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಈಗಾಗಲೇ ನೀಡಿರುವ ಭರವಸೆಯಂತೆ ನಡೆದುಕೊಳ್ಳಲಾಗುವುದು. ಗೆದ್ದ ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡಲಾಗುವುದು. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.

ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದವರ ಬಗ್ಗೆ ಮಾತನಾಡುತ್ತಿದ್ದು, ಸೋತವರ ಬಗ್ಗೆ ಸದ್ಯಕ್ಕೆ ಯಾವುದೇ ಪ್ರಶ್ನೆ ಉದ್ಭವವಾಗುವುದಿಲ್ಲ. ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.

ಯಡಿಯೂರಪ್ಪ ಪಟ್ಟು ಏನು?

- ವಲಸೆ ಬಂದ ಶಾಸಕರ ತ್ಯಾಗದಿಂದಾಗಿಯೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಿದೆ

- ಬಂದ ಎಲ್ಲರಿಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದಾಗಿ ಮಾತು ನೀಡಿಯಾಗಿದೆ

- ಈಗಾಗಲೇ ಸಾಕಷ್ಟುವಿಳಂಬವಾಗಿದೆ. ಉಪಚುನಾವಣೆ ಗೆದ್ದವರ ಸಹನೆ ಪರೀಕ್ಷೆ ಸಲ್ಲದು

- ಹಾಗಾಗಿ ಗೆದ್ದ 11 ಶಾಸಕರನ್ನು ತಕ್ಷಣವೇ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲೇಬೇಕು

- ಸೋತ ಹಾಗೂ ಸ್ಪರ್ಧಿಸದವರಿಗೆ ಜೂನ್‌ನಲ್ಲಿ ಎಂಎಲ್‌ಸಿ ಮಾಡಿ ಸಚಿವ ಸ್ಥಾನ ನೀಡಬಹುದು

ಇನ್ನೊಂದು ಬಣ ವಾದಿಸುವುದೇನು?

- ಗುಂಪು ಮಾಡಿಕೊಂಡು ವಲಸೆ ಬಂದ ಶಾಸಕರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನೀಡಬಹುದು

- ವೈಯಕ್ತಿಕವಾಗಿ ಬಂದವರಿಗೆ ಸಚಿವ ಸ್ಥಾನ ಕೊಡಲು ಯಾವುದೇ ಅಡ್ಡಿಯಿಲ್ಲ

- ಇನ್ನುಳಿದ ಶಾಸಕರಿಗೆ ಪ್ರಮುಖ ನಿಗಮ- ಮಂಡಳಿಗಳ ಅಧ್ಯಕ್ಷಗಿರಿ ನೀಡಬಹುದು

- ಸೋತವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡುವ ಬಗ್ಗೆ ಪರಿಶೀಲಿಸಬಹುದು

- ಉಳಿಯುವ ಇತರ ಸಚಿವ ಸ್ಥಾನಗಳಿಗೆ ಪಕ್ಷ ಸಮರ್ಥ ಶಾಸಕರನ್ನು ಪರಿಗಣಿಸಬೇಕು

"