ಮಂಗಳೂರು (ನ.13):  ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಸೋಲು ಕಂಡ ಬಳಿಕ ಈಗ ಕಾಂಗ್ರೆಸ್‌ಗೆ ಮತಯಂತ್ರದ ಬಗ್ಗೆ ಮತ್ತೆ ಅನುಮಾನ ಬರಲಾರಂಭಿಸಿದೆ. ಸ್ವತಃ ಕೆಪಿಸಿಸಿ ಅಧ್ಯಕ್ಷರೇ ಮತಯಂತ್ರದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ಎಲ್ಲ ಆಯಾಮಗಳಲ್ಲಿ ವ್ಯಾಪಕ ತನಿಖೆಗೆ ಮುಂದಾಗುವುದಾಗಿ ಹೇಳಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರಿಗೆ ಮಾತೃವಿಯೋಗ ಹಿನ್ನೆಲೆಯಲ್ಲಿ ಬುಧವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕೇರಳದ ಕಣ್ಣೂರಿಗೆ ತೆರಳಿದ್ದರು. ಅಲ್ಲಿಂದ ತಡರಾತ್ರಿ ಮಂಗಳೂರಿಗೆ ಆಗಮಿಸಿ ತಂಗಿದ್ದರು. ಮರುದಿನ ಗುರುವಾರ ಬೆಂಗಳೂರಿಗೆ ಹೊರಡುವ ಮುನ್ನ ಡಿಕೆಶಿ ಸುದ್ದಿಗಾರರಲ್ಲಿ ಮಾತನಾಡಿದರು.

ನಾನು ಹಿರಿಯ, ಸಚಿವ ಸ್ಥಾನ ಬೇಕು : ಬಿಜೆಪಿ ಮುಖಂಡ

ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲು ಪ್ರಜಾಪ್ರಭುತ್ವದ ಸೋಲು. ಉಪಚುನಾವಣೆಯಲ್ಲಿ ಹಣದ ದುರುಪಯೋಗ ನಡೆದಿದ್ದು, ಎಲ್ಲೆಲ್ಲಿ ಹಣ ಹಂಚಿಕೆ ನಡೆದಿದೆ ಎಂಬ ಬಗ್ಗೆ ನಮ್ಮಲ್ಲಿ ಮಾಹಿತಿ ಇದೆ. ಮತಗಳ ಅಂತರ ವಿಚಾರದಲ್ಲಿ ನಾವು ಸೋಲನ್ನು ಒಪ್ಪಿಕೊಳ್ಳುತ್ತೇವೆ. ವಿದ್ಯಾವಂತರು, ಯುವಕರು, ಮಹಿಳೆಯರು ಕಾಂಗ್ರೆಸ್‌ಗೆ ಮತಹಾಕಿದ್ದೇವೆ ಎಂದು ಹೇಳಿದ್ದಾರೆ. 

ಆರ್‌ ಆರ್‌ ನಗರದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಮತಗಳು ನಮಗೆ ಬರಬೇಕಾಗಿತ್ತು. ಆದರೆ ಅಲ್ಲಿ ನಾವು ಸೋಲಿನ ನಿರೀಕ್ಷೆ ಮಾಡಿರಲಿಲ್ಲ. ಈಗ ಮತದಾರರು ಹೇಳಿದ್ದು ತಪ್ಪಿದೆಯಾ, ಮತ ಬಿದ್ದಿರೋದು ತಪ್ಪಿದೆಯಾ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ. ಮತಯಂತ್ರದ ಬಗ್ಗೆ ಸಾಕಷ್ಟುಜನರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಮ್ಮ ತಜ್ಞರನ್ನು ಕರೆಸಿ ಮಾತುಕತೆ ನಡೆಸುತ್ತೇನೆ. ಇದು ಚುನಾವಣೆಯಲ್ಲಿ ಸೋತ ಕಾರಣಕ್ಕೆ ಅಲ್ಲ, ಯಾವೆಲ್ಲ ಬೂತ್‌ಗಳಲ್ಲಿ ಕಾಂಗ್ರೆಸ್‌ ಮತಗಳು ಹೆಚ್ಚಿನ ರೀತಿಯಲ್ಲಿ ಏರುಪೇರಾಗಿದೆಯೋ ಅಂತಹ ಕಡೆಗಳಲ್ಲಿ ಮತಯಂತ್ರದ ಲೋಪ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಡಿಕೆಶಿ ಹೇಳಿದರು.