ಬೆಂಗಳೂರು (ನ.13):  ಸಚಿವ ಸಂಪುಟ ಪುನಾರಚನೆ ಮಾಡಿದರೆ ಒಳ್ಳೆಯದಾಗಿದ್ದು, ಹಿರಿಯನಾಗಿರುವ ಕಾರಣ ಸಚಿವ ಸ್ಥಾನ ಕೇಳಿದ್ದೇನೆ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಗೆ ವೈದ್ಯಕೀಯ ಕಾಲೇಜು ನೀಡಲು ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರು ಗುರುವಾರ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿದರು. 

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಂಪುಟ ಪುನಾರಚನೆ ಮಾಡಿದರೆ ಒಳ್ಳೆಯದು. ಹಿರಿಯ ಶಾಸಕನಾಗಿರುವ ಕಾರಣ ಸಚಿವ ಸ್ಥಾನ ಕೇಳಿದ್ದೇನೆ. ಆದರೆ, ಈಗ ನಮಗೆ ಅದು ಮುಖ್ಯವಲ್ಲ. ಯಾಕೆಂದರೆ ನಮಗೆ ವೈದ್ಯಕೀಯ ಕಾಲೇಜು ಬಂದಿರುವುದು ಸಚಿವ ಸ್ಥಾನ ಸಿಕ್ಕಿದಷ್ಟೇ ಖುಷಿ ತಂದಿದೆ’ ಎಂದಿದ್ದಾರೆ.

ವೈರಲ್ ಆಯ್ತು ಸಿಎಂ BSY‌ ಭಾಷಣದ ತುಣುಕು : ಅದರಲ್ಲೇನಿತ್ತು..?

ನಾನು ಪದೇ ಪದೇ ಹೋಗಿ ಮುಖ್ಯಮಂತ್ರಿಗೆ ಮುಜುಗರ ಮಾಡಲ್ಲ. ನನ್ನ ಹಿರಿತನದ ಆಧಾರದ ಮೇಲೆ ನನಗೆ ಸಚಿವ ಸ್ಥಾನ ಕೊಡುವ ಭರವಸೆ ಇದೆ’ ಎಂದರು.

ಶಾಸಕಿ ಪೂರ್ಣಿಮಾ ಶ್ರೀನಿವಾಸ ಮಾತನಾಡಿ, ‘ಸಚಿವರಾಗಬೇಕು ಎಂಬುದು ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ಆದರೆ, ಯಾರನ್ನು ಸಚಿವರನ್ನಾಗಿ ಮಾಡಬೇಕು ಎನ್ನುವುದು ಪಕ್ಷ ತೀರ್ಮಾನ ಮಾಡಲಿದೆ. ಪಕ್ಷ ಏನೇ ತೀರ್ಮಾನ ಮಾಡಿದರೂ ಅದಕ್ಕೆ ನಾನು ಬದ್ಧನಾಗಿರುತ್ತೇನೆ’ ಎಂದರು.