ಬುಧವಾರ ಇಡೀ ದಿನ ದೆಹಲಿಯಲ್ಲಿ ಹಲವು ಸುತ್ತಿನ ಹೈವೋಲ್ಟೇಜ್ ಸಭೆಗಳು ನಡೆದವು. ರಾಹುಲ್ ಗಾಂಧಿ ಅವರೇ ಖುದ್ದಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು.
ಬೆಂಗಳೂರು (ಮೇ.18): ರಾಜ್ಯ ಕಾಂಗ್ರೆಸ್‌ನ ಮೇರು ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ‘ಮುಖ್ಯಮಂತ್ರಿ ಹುದ್ದೆ ದಂಗಲ್’ ಪರಿಹಾರಕ್ಕೆ ಬುಧವಾರವಿಡೀ ಹೈಕಮಾಂಡ್‌ನ ದಿಗ್ಗಜರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್ ಅವರು ಹಲವು ಸುತ್ತಿನ ಹೈವೋಲ್ಟೇಜ್ ಸಭೆಗಳನ್ನು ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪೂರ್ಣಾವಧಿ ಮುಖ್ಯಮಂತ್ರಿ ಹುದ್ದೆಗೆ ಇಬ್ಬರೂ ನಾಯಕರು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಮಧ್ಯಪ್ರವೇಶ ಅನಿವಾರ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬುಧವಾರ ಇಡೀ ದಿನ ದೆಹಲಿಯಲ್ಲಿ ಹಲವು ಸುತ್ತಿನ ಹೈವೋಲ್ಟೇಜ್ ಸಭೆಗಳು ನಡೆದವು. ರಾಹುಲ್ ಗಾಂಧಿ ಅವರೇ ಖುದ್ದಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು. ಒಂದು ಹಂತದಲ್ಲಿ ‘ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಯನ್ನು ಸಿದ್ದರಾಮಯ್ಯ ಅವರಿಗೆ ನೀಡಲು ನಿರ್ಧರಿಸಿದೆ ಹಾಗೂ ಉಪ ಮುಖ್ಯಮಂತ್ರಿ ಹುದ್ದೆ ಒಪ್ಪುವಂತೆ ಡಿ.ಕೆ.ಶಿವಕುಮಾರ್ ಮನವೊಲಿಸುವ ಪ್ರಯತ್ನ ನಡೆದಿದೆ’ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ, ಸಿದ್ದರಾಮಯ್ಯ ಬಣ ಸಂಭ್ರಮಾಚರಣೆಯಲ್ಲಿ ತೊಡಗುವಂತೆಯೂ ಮಾಡಿತು.
ಚಿಕ್ಕಮಗಳೂರಿನಲ್ಲಿ ಜನಸ್ನೇಹಿ ಆಡಳಿತ ನೀಡುವೆ: ಶಾಸಕ ಎಚ್.ಡಿ.ತಮ್ಮಯ್ಯ
ಆದರೆ, ಮನವೊಲಿಕೆ ವೇಳೆ ಡಿ.ಕೆ.ಶಿವಕುಮಾರ್ ತಾವೇ ಮುಖ್ಯಮಂತ್ರಿಯಾಗಬೇಕು ಎಂದು ಗಟ್ಟಿಯಾಗಿ ಪಟ್ಟು ಹಿಡಿದ ಕಾರಣ ತಡರಾತ್ರಿವರೆಗೂ ಹಲವು ಸುತ್ತಿನ ಸಭೆ ನಡೆದರೂ ಯಾವುದೇ ಫಲಿತಾಂಶ ಕಾಣಲಿಲ್ಲ. ಶಿವಕುಮಾರ್ ಪೂರ್ಣ ಅವಧಿಗೆ ತಾವೇ ಮುಖ್ಯಮಂತ್ರಿಯಾಗಬೇಕು ಎಂಬ ಪಟ್ಟು ಸಡಿಲಿಸಲಿಲ್ಲ. ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿದರೆ ಸಿದ್ದರಾಮಯ್ಯ ಅವರಿಗೆ ಯಾವ ಸ್ಥಾನ ನೀಡಬೇಕು ಎಂಬ ಪ್ರಶ್ನೆಗೆ ಹೈಕಮಾಂಡ್ ಬಳಿ ಯಾವುದೇ ಉತ್ತರವಿಲ್ಲದ ಕಾರಣ ಅಧಿಕಾರ ಹಂಚಿಕೆಯ ಫಾರ್ಮುಲಾವನ್ನು ಉಭಯ ನಾಯಕರಿಗೆ ನೀಡುವ ಮನಸ್ಥಿತಿಯಲ್ಲಿ ಹೈಕಮಾಂಡ್ ಇದೆ ಎನ್ನಲಾಗಿದೆ.
ಮೊದಲ ಅವಧಿಗೆ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಹುದ್ದೆ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಡಿಸಿಎಂ ಹುದ್ದೆ ನೀಡುವ ಬಗ್ಗೆ ಹೈಕಮಾಂಡ್‌ನಲ್ಲಿ ಚರ್ಚೆ ನಡೆದಿತ್ತು ಎಂದು ತಿಳಿದುಬಂದಿದೆ. ಆದರೆ, ಈ ವಿಚಾರ ತಮ್ಮ ಮುಂದೆ ಪ್ರಸ್ತಾಪವಾಗದಷ್ಟುಬಿಗಿಪಟ್ಟು ಹಿಡಿದ ಶಿವಕುಮಾರ್ ಅವರ ಮನವೊಲಿಸಲು ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡ್‌ನ ಎಲ್ಲ ನಾಯಕರು ಹರಸಾಹಸ ನಡೆಸಿದರು. ಒಂದು ಹಂತದಲ್ಲಿ ಪ್ರಿಯಾಂಕಾ ಗಾಂಧಿ ಕೂಡ ರಂಗ ಪ್ರವೇಶ ಮಾಡಿ, ಶಿವಕುಮಾರ್ ಅವರನ್ನು ಓಲೈಸಲು ಯತ್ನಿಸಿದರು ಎನ್ನಲಾಗಿದೆ. ಆದರೆ, ಇದ್ಯಾವುದಕ್ಕೂ ಬಗ್ಗದ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ಹೊಣೆಗಾರಿಕೆಯನ್ನು ನನಗೆ ನೀಡಿದ್ದ ಸೋನಿಯಾ ಗಾಂಧಿ ಅವರ ಜತೆ ಚರ್ಚಿಸದೆ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ವರಿಷ್ಠರಿಗೆ ತಿಳಿಸಿದರು.
ಹೀಗಾಗಿ, ಇದೀಗ ಸೋನಿಯಾ ರಂಗ ಪ್ರವೇಶ ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಗಳ ಪ್ರಕಾರ, ಕಾಂಗ್ರೆಸ್ ಹೈಕಮಾಂಡ್ ಮೊದಲ ಅವಧಿಗೆ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಮಾಡುವ ಚಿಂತನೆ ಹೊಂದಿದೆ. ಆದರೆ, ಈ ನಿರ್ಧಾರವನ್ನು ಶಿವಕುಮಾರ್ ಅವರನ್ನು ಎದುರು ಹಾಕಿಕೊಂಡು ಅಥವಾ ಅವರಿಗೆ ಬೇಸರವಾಗುವ ರೀತಿ ಕಾರ್ಯರೂಪಕ್ಕೆ ತರಲು ತಯಾರಿಲ್ಲ. ಹೀಗಾಗಿಯೇ ಮನವೊಲಿಸುವ ಹರಸಾಹಸ ನಡೆಸಿದೆ. ಹೈಕಮಾಂಡ್‌ನ ಈ ಮನವೊಲಿಕೆ ಫಾರ್ಮುಲಾ ಒಪ್ಪಲು ಶಿವಕುಮಾರ್ ತಯಾರಿಲ್ಲವಾದರೂ, ಅನಿವಾರ್ಯವಾಗಿ ಮೊದಲ ಅವಧಿಯ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಬೇಕಾಗಿ ಬಂದಲ್ಲಿ ಆ ಚರ್ಚೆ ಸೋನಿಯಾ ಗಾಂಧಿ ಅವರ ಮಧ್ಯಸ್ಥಿಕೆಯಲ್ಲಿ ನಡೆಯಲಿ ಎಂಬ ಇಂಗಿತವನ್ನು ಹೊಂದಿದ್ದಾರೆ ಎನ್ನಲಾಗಿದೆ.
ನಾವು ಸಿದ್ಧಾಂತದ ರಾಜಕಾರಣಕ್ಕಾಗಿ ಬಂದವರು: ಸಿ.ಟಿ.ರವಿ
ಈ ನಡುವೆ, ಕಾಂಗ್ರೆಸ್ ಹೈಕಮಾಂಡ್ ಒಂದು ಹಂತದಲ್ಲಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ನೇರ ಮಾತುಕತೆ ನಡೆಸಿ ಎಂದು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದು, ಅದಕ್ಕೆ ಅವರು ಸುತರಾಂ ಒಪ್ಪಲಿಲ್ಲ ಎನ್ನಲಾಗಿದೆ. ಹೀಗಾಗಿ ಉಭಯ ನಾಯಕರು ತಮ್ಮ ನಿಲುವಿಗೆ ಪಟ್ಟು ಹಿಡಿದಿದ್ದಾರೆ. ಅಧಿಕೃತವಾಗಿಯಂತೂ ಯಾವುದೇ ಒಪ್ಪಂದ ಅಥವಾ ಫಾರ್ಮುಲಾ ತಮ್ಮ ಎದುರು ಚರ್ಚೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ನಾಲ್ಕು ದಿನ ಕಳೆದರೂ ಮುಖ್ಯಮಂತ್ರಿ ಹುದ್ದೆ ದಂಗಲ್ ಕರಗದೇ ಐದನೇ ದಿನಕ್ಕೆ ಕಾಲಿಟ್ಟಿದೆ.
