ಕೆ.ಇ.ಕಾಂತೇಶ, ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವರು ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸುವ ಅಪೇಕ್ಷೆ ಹೊಂದಿದ್ದಾರೆ.

ಹಾವೇರಿ (ಜೂ.25): ಕೆ.ಇ.ಕಾಂತೇಶ, ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವರು ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸುವ ಅಪೇಕ್ಷೆ ಹೊಂದಿದ್ದಾರೆ. ಟಿಕೆಟ್‌ ನೀಡುವಾಗ ಪಕ್ಷದ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ನೋಡಬೇಕಿದೆ. ಸಂಸದ ಶಿವಕುಮಾರ ಉದಾಸಿ ಅವರು ವೈಯಕ್ತಿಕ ಕಾರಣಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ಕಾಂತೇಶ ಇಲ್ಲಿಂದ ಸ್ಪರ್ಧಿಸಲು ಇಚ್ಛಿಸಿದ್ದಾರೆ. ಹಲವು ನಾಯಕರು ಹಾಗೂ ಮುಖಂಡರಿಗೂ ಕಾಂತೇಶ ಸ್ಪರ್ಧಿಸಲಿ ಎಂಬ ಬಯಕೆಯಿದೆ ಎಂದು ಹೇಳಿದರು.

ಪಕ್ಷದ್ರೋಹ ಭಗವಂತ ನೋಡಿಕೊಳ್ಳಲಿ: ಪಕ್ಷಕ್ಕೆ ದ್ರೋಹಿ ಮಾಡಿದವರನ್ನು ಭಗವಂತ ನೋಡಿಕೊಳ್ಳಲಿ. ಆದರೆ, ನಾವು ಪಕ್ಷ ಸಂಘಟನೆಗೆ ಆದ್ಯತೆ ನೀಡಿ ಮಂಬರುವ ಲೋಕಸಭೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಭರ್ಜರಿ ಜಯ ಸಾಧಿಸಬೇಕು ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು. ತಾಲೂಕಿನ ಮೋಟೆಬೆನ್ನೂರು ಬಿಆರ್‌ಇ ಕಾಲೇಜ್‌ ಸಭಾಭವನದಲ್ಲಿ ಶನಿವಾರ ಜರುಗಿದ ಜಿಲ್ಲಾಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

ವೃದ್ಧರಿಗೆ ದೇಗುಲಗಳಲ್ಲಿ ಶೀಘ್ರ ದರ್ಶನ ವ್ಯವಸ್ಥೆ ಶುರು: ಸಚಿವ ರಾಮಲಿಂಗಾರೆಡ್ಡಿ

1992ರಲ್ಲಿ 116 ಸೀಟು ಕೊಟ್ಟಿದ್ದೇವು. ಆಗ ಟಿಕೆಟ್‌ ಕೇಳುವವರು ಇರಲಿಲ್ಲ. 4 ಸೀಟ್‌ನಿಂದ 40 ಸೀಟು ಗೆದ್ದಿದ್ದೇವೆ. ಲೋಕಸಭೆಯಲ್ಲಿ 2 ಸೀಟಿನಿಂದ ಈಗ 300 ದಾಟಿದ್ದೇವೆ ಎಂದ ಅವರು, ಕೇಂದ್ರ ಹಾಗೂ ರಾಜ್ಯ ನಾಯಕರನ್ನು ಗೌರವಿಸುವ ಜತೆಗೆ ಅವರ ತೀರ್ಮಾನಕ್ಕೆ ಬದ್ಧರಾಗಿ ಹೋರಾಡಿ ಅಭ್ಯರ್ಥಿ ಗೆಲ್ಲಿಸಬೇಕು ಎಂದರು. ಜನವರಿಯಲ್ಲಿ ಅಯೋಧ್ಯೆ ಮಂದಿರ ಉದ್ಘಾಟನೆಯಾಗಲಿದೆ. ಏಕನಾಗರಿಕ ಕಾಯ್ದೆ ಜಾರಿಗೊಳಿಸಬೇಕಿದೆ. ದೇಶ ಉಳಿಸಲು ಬಿಜೆಪಿಗೆ ಮತ ನೀಡಬೇಕು. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಮಾಡಬೇಕು ಎಂದು ಹೇಳಿದರು.

ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಸೋಲಿನಿಂದ ನಾವು ಎದೆಗುಂದುವುದು ಬೇಡ. ಮುಂದಿನ ಎಲ್ಲ ಚುನಾವಣೆಗಳಲ್ಲಿ ನಾವು ಗೆಲ್ತೇವೆ. ಕಾಂಗ್ರೆಸ್‌ ಗ್ಯಾರಂಟಿ ಭರವಸೆ, ಒಳಮೀಸಲಾತಿ ಜಾರಿ, ಕೆಲವು ಸಮುದಾಯಗಳ ಬೆಂಬಲ ಸಿಗದಿರುವುದು ಹಾಗೂ ಇತರ ಕಾರಣಗಳಿಂದ 30ರಿಂದ 40 ಸೀಟು ಕಳೆದುಕೊಂಡು ಅಧಿಕಾರ ತಪ್ಪಿಹೊಯಿತು. ಬಿಟ್ಟಿಭಾಗ್ಯಗಳ ನಿರ್ಲಕ್ಷ್ಯ, ನಮ್ಮ ಪಕ್ಕದಲ್ಲಿರುವ ಮೀರ್‌ಸಾಧಕರಿಂದ ಸೋಲಾಗಿದೆ ಎಂದರು.

ಶಕ್ತಿ ಯೋಜನೆಯಿಂದ ಬಸ್‌ ಪಂಕ್ಚರ್‌ ತೆಗೆಸೋಕೆ, ಡೀಸೆಲ್‌ ಹಾಕಿಸಲು ಆಗುತ್ತಿಲ್ಲ. ಗೃಹಲಕ್ಷ್ಮೀ ಅತ್ತೆಗೋ ಸೊಸೆಗೊ ಎಂಬ ಗೊಂದಲ, ಯುವಕರಿಗೆ ಭತ್ಯೆ ಕೊಡುವ ಮೋಸ ಬಹಳ ದಿನ ನಡೆಯದು. ಕಾಂಗ್ರೆಸ್‌ ವಿರುದ್ಧ ಜನರೇ ಬೀದಿಗಿಳಿಯುವ ದಿನಗಳು ದೂರವಿಲ್ಲ ಎಂದು ಹರಿಹಾಯ್ದರು. ಕೇಂದ್ರ ಸರ್ಕಾರ ಯಾವುದೇ ಗ್ಯಾರಂಟಿ ನೀಡದಿದ್ದರೂ ಕಿಸಾನ್‌ ಸಮ್ಮಾನ್‌, ಸಬ್ಸಿಡಿ ಸಿಲಿಂಡರ್‌ ನೀಡಿಲ್ಲವೇ? ಅರ್ಹ ಫಲಾನುಭವಿಗಳು ಸ್ವೀಕರಿಸಿದ್ದೀರಲ್ಲವೇ? ಎಂದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಕಳೆದುಕೊಂಡರೆ ದೇಶವನ್ನು ಕಳೆದುಕೊಂಡಂತೆ. ರಾಜ್ಯದ 26 ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಿಸಿ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಬಲಿಷ್ಠಗೊಳಿಸೋಣ ಎಂದು ಕರೆ ನೀಡಿದರು.

ಮಾಜಿ ಶಾಸಕ ಶಿವರಾಜ ಸಜ್ಜನ ಮಾತನಾಡಿ, ವಿಧಾನಸಭೆ ಚುನಾವಣೆ ವೇಳೆ 3 ದಿನ ಮುಂಚಿತವಾಗಿ ಟಿಕೆಟ್‌ ನೀಡಿದ ಪರಿಣಾಮ ಅಭ್ಯರ್ಥಿಗಳು ಸೋಲಿನ ರುಚಿ ಕಂಡರು. 6 ತಿಂಗಳು ಮೊದಲೆ ಲೋಕಸಭೆ ಅಭ್ಯರ್ಥಿಗಳ ಘೋಷಿಸಬೇಕು. ಆಸಕ್ತ ಆಕಾಂಕ್ಷಿಗಳಿಂದ . 5 ಲಕ್ಷವನ್ನು ಅರ್ಜಿಯೊಂದಿಗೆ ಪಡೆದು ಸಂಘಟನೆಗೆ ಬಳಸಿಕೊಳ್ಳಬೇಕು. ಇದನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ 9 ವರ್ಷಗಳ ಸಾಧನೆಗಳ ಕರಪತ್ರವನ್ನು ಮನೆ-ಮನೆಗೂ ತಲುಪಿಸಿ ದೇಶ ಸಮೃದ್ಧಿ ಹಾಗೂ ಶಾಂತಿ ನೆಮ್ಮದಿ ಜೀವನಕ್ಕೆ ಬಿಜೆಪಿ ಆಯ್ಕೆ ಮಾಡಬೇಕಿದೆ. 

ಗ್ರಾಪಂ ಮಟ್ಟದಲ್ಲಿ ಕೃಷಿ ಸಂಸ್ಕರಣೆ ಘಟಕ ಸ್ಥಾಪನೆಗೆ ಚಿಂತನೆ: ಸಚಿವ ಚಲುವರಾಯಸ್ವಾಮಿ

ಮೋದಿ ಸೋತರೆ, ದೇಶವೇ ಸೋತಂತೆ. ಈಗಲೇ ಎಚ್ಚೆತ್ತುಕೊಳ್ಳಿ. ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿರುವ ಪಕ್ಷದ್ರೋಹಿಗಳನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕಿ, ಸಂಘಟನೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಅರುಣಕುಮಾರ ಪೂಜಾರ, ಮುರಿಗೆಪ್ಪ ಶೆಟ್ಟರ, ಹಾಲೇಶ ಜಾಧವ, ಮಹೇಶ ಗಾಜೇರ ಇದ್ದರು.