ವಿದ್ಯಾರ್ಥಿ ದೆಸೆಯಿಂದಲೂ ನನ್ನ ವಿರುದ್ಧ ಹುನ್ನಾರ: ಸಿಎಂ ಸಿದ್ದರಾಮಯ್ಯ

ನಾನು ಕಾನೂನು ಪದವಿ ವ್ಯಾಸಂಗ ಮಾಡುವುದನ್ನು ತಡೆಯಲು ಕೆಲವರು ಹುನ್ನಾರ ಮಾಡಿದ್ದರು. ಅದೇ ಮಾದರಿಯಲ್ಲಿ ಈಗ ನಾನು ಬಡವರ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುತ್ತಿರುವುದನ್ನು ಸಹಿಸದೇ ನನ್ನ ವಿರುದ್ಧ ಹುನ್ನಾರ ನಡೆಸಲಾಗುತ್ತಿದೆ. 

Some people had conspired to stop me from studying LLB Says CM Siddaramaiah gvd

ಬೆಂಗಳೂರು (ಆ.21): ನಾನು ಕಾನೂನು ಪದವಿ ವ್ಯಾಸಂಗ ಮಾಡುವುದನ್ನು ತಡೆಯಲು ಕೆಲವರು ಹುನ್ನಾರ ಮಾಡಿದ್ದರು. ಅದೇ ಮಾದರಿಯಲ್ಲಿ ಈಗ ನಾನು ಬಡವರ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುತ್ತಿರುವುದನ್ನು ಸಹಿಸದೇ ನನ್ನ ವಿರುದ್ಧ ಹುನ್ನಾರ ನಡೆಸಲಾಗುತ್ತಿದೆ. ನನಗೆ ಅಧಿಕಾರ ಇರಲಿ ಅಥವಾ ಇಲ್ಲದಿರಲಿ ಬಡವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ವಿದ್ಯಾರ್ಥಿಯಾಗಿದ್ದಾಗ ಕಾನೂನು ವ್ಯಾಸಂಗ ಮಾಡುತ್ತೇನೆಂದು ತಂದೆಯವರ ಬಳಿ ಹೇಳಿದರೆ, ಅದಕ್ಕೆ ಅವರು ಒಪ್ಪಲಿಲ್ಲ. 

ನಮ್ಮ ಊರಿನ ಶ್ಯಾನುಭೋಗರೊಬ್ಬರು ನಾನು ಕಾನೂನು ಪದವಿ ವ್ಯಾಸಂಗ ಮಾಡದಂತೆ ತಡೆಯಲು ನಮ್ಮ ತಂದೆಯವರಿಗೆ ತಪ್ಪು ಮಾಹಿತಿ ನೀಡಿ ಹುನ್ನಾರ ಮಾಡಿದ್ದರು. ಕೊನೆಗೆ ಹಿರಿಯರ ಮೂಲಕ ಪಂಚಾಯಿತಿ ನಡೆಸಿ ಕಾನೂನು ಪದವಿ ವ್ಯಾಸಂಗ ಮಾಡಿದೆ. ಒಂದು ವೇಳೆ ಕಾನೂನು ಪದವಿ ವ್ಯಾಸಂಗ ಮಾಡದಿದ್ದರೆ, ನಾನು ಸಿಎಂ ಆಗಲು ಆಗುತ್ತಿರಲಿಲ್ಲ. ನಾನು ಚಿಕ್ಕವನಿದ್ದಾಗಲೇ ನನ್ನ ವಿರುದ್ಧ ಹುನ್ನಾರಗಳು ನಡೆದಿವೆ. ಈಗಲೂ ನನ್ನ ವಿರುದ್ಧ ಷಡ್ಯಂತ್ರಗಳು ನಡೆಯುತ್ತಿವೆ. ಅದನ್ನು ಲೆಕ್ಕಿಸದೇ, ಅಧಿಕಾರದಲ್ಲಿ ಇರಲಿ ಅಥವಾ ಬಿಡಲಿ ಬಡವರ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುತ್ತೇನೆ ಎಂದರು.

 

ಸಿಎಂ ಸಿದ್ದರಾಮಯ್ಯರದ್ದು ಹೆದರುವ ರಕ್ತವಲ್ಲ: ಡಿ.ಕೆ.ಶಿವಕುಮಾರ್‌

ಬಡವರ ಪರವಾಗಿದ್ದೇನೆಂದು ಬಿಜೆಪಿ ಷಡ್ಯಂತ್ರ: ನಾನು ಸಾಮಾಜಿಕ ನ್ಯಾಯದ ಪರವಾಗಿದ್ದೇನೆ ಎಂಬುದನ್ನು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ನಾನು ದೇವರಾಜ ಅರಸು ಅವರಂತೆ ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡುತ್ತಿದ್ದೇನೆ, ಬಡವರ ಪರ ಇದ್ದೇನೆ ಎಂಬ ಕಾರಣಕ್ಕೆ ಬಿಜೆಪಿ ಅವರಿಗೆ ನನ್ನ ಮೇಲೆ ಕೋಪ. ಅದಕ್ಕಾಗಿಯೇ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಹುನ್ನಾರ ನಡೆಸುತ್ತಿದ್ದಾರೆ ಎಂದು ಸಿಎಂ ಆರೋಪಿಸಿದರು. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ತಪ್ಪು ಮಾಡಿಲ್ಲ. ನನ್ನ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಇಡುವ ಸಲುವಾಗಿಯೇ, ತಪ್ಪು ಮಾಡದಿದ್ದರೂ ರಾಜೀನಾಮೆ ಕೇಳಲಾಗುತ್ತಿದೆ. ಇಂತಹ ಷಡ್ಯಂತ್ರಗಳನ್ನು ಎಲ್ಲರೂ ಒಂದಾಗಿ ವಿರೋಧಿಸಬೇಕು. ಇಲ್ಲದಿದ್ದರೆ ನ್ಯಾಯ ಸಿಗುವುದಿಲ್ಲ ಎಂದು ಹೇಳಿದರು.

ಹಿಂದುಳಿದವರ ಮೀಸಲಾತಿಗೆ ಅರಸು ಕಾರಣ: ಹಿಂದುಳಿದ ವರ್ಗದವರಿಗೆ ಶೇ. 32ರಷ್ಟು ಮೀಸಲಾತಿ ದೊರೆಯಲು ದೇವರಾಜ ಅರಸು ಕಾರಣ. ಹಾವನೂರು ಆಯೋಗ ರಚಿಸಿ, ಅವರಿಂದ ವರದಿ ಪಡೆದು, ಎಷ್ಟೇ ವಿರೋಧ ವ್ಯಕ್ತವಾದರೂ ಅದನ್ನು ಅನುಷ್ಠಾನಗೊಳಿಸಿದರು. ಹಾಗೆಯೇ, ಕೃಷಿಕರ ಮೇಲಾಗುತ್ತಿರುವ ಶೋಷಣೆ ತಪ್ಪಿಸಲು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದರು. ಸಾಮಾಜಿಕ ನ್ಯಾಯಕ್ಕಾಗಿ, ಶೋಷಣೆಗೊಳಗಾದವರನ್ನು ಮೇಲೆತ್ತಲು ಹಲವು ಯೋಜನೆಗಳನ್ನು ಜಾರಿಗೊಳಿಸಿದರು. ಅವರ ಹಾದಿಯಲ್ಲಿಯೇ ನಾನು ಸಾಗುತ್ತಿದ್ದೇನೆ. ಆದರೆ, ದೇವರಾಜು ಅರಸು ಅವರಿಗೆ ನನ್ನನ್ನು ಹೋಲಿಸುವುದು ತರವಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕಾಂತಾಗೆ ಅರಸು ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಮಾಜಿ ಕಾರ್ಮಿಕ ಸಚಿವ ಎಸ್‌.ಕೆ. ಕಾಂತಾ ಅವರಿಗೆ ಡಿ. ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್‌.ಕೆ. ಕಾಂತಾ, ಪ್ರಶಸ್ತಿ ಜತೆಗೆ ನೀಡಲಾದ ಪ್ರಶಸ್ತಿ ಮೊತ್ತ 5 ಲಕ್ಷ ರು.ಗಳನ್ನು ಕಾರ್ಮಿಕ ಕಲ್ಯಾಣಕ್ಕಾಗಿ ಬಳಸಿಕೊಳ್ಳುವಂತೆ ಸರ್ಕಾರಕ್ಕೆ ವಾಪಸು ನೀಡುವುದಾಗಿ ಘೋಷಿಸಿದರು.

ನ. 1ಕ್ಕೆ ಭುವನೇಶ್ವರಿ ಪ್ರತಿಮೆ ಅನಾವರಣ: ದೇವರಾಜ ಅರಸು ಅವರು ಸಿಎಂ ಆಗಿದ್ದಾಗ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಯಿತು. ಅವರ ಜಿಲ್ಲೆಯವನೇ ಆದ ನಾನು ಈಗ ಸಿಎಂ ಆಗಿದ್ದು, ಕರ್ನಾಟಕ ಹೆಸರು ನಾಮಕರಣವಾದ 50 ವರ್ಷದ ಸಂಭ್ರಮ ಆಚರಿಸುತ್ತಿದ್ದೇವೆ. ಅದಕ್ಕಾಗಿಯೇ ವಿಧಾನಸೌಧದ ಎದುರು ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಲಾಗುತ್ತಿದ್ದು, ನ. 1ರಂದು ಪ್ರತಿಮೆ ಅನಾವರಣಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ರಿಜ್ವಾನ್ ಅರ್ಷದ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ.ದಯಾನಂದ ಇತರರಿದ್ದರು

ವಿಮಾನ ನಾಪತ್ತೆ ಪ್ರಕರಣದಿಂದ ಸ್ಫೂರ್ತಿ ಪಡೆದ ಸಿನಿಮಾ ರುದ್ರ ಗರುಡ ಪುರಾಣ

ರಾಜ್ಯಪಾಲರ ವಿರುದ್ಧ ಸಚಿವರ ಆಕ್ರೋಶ: ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿರುವ ರಾಜ್ಯಪಾಲರ ಕ್ರಮದ ವಿರುದ್ಧ ಸಚಿವರಾದ ಡಾ. ಎಚ್‌.ಸಿ. ಮಹದೇವಪ್ಪ ಮತ್ತು ಶಿವರಾಜ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು. ದೇವರಾಜು ಅರಸು ಅವರ ವಿರುದ್ಧ ಕುತಂತ್ರ ಮಾಡಿದ ರೀತಿಯಲ್ಲೇ ಈಗ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪಟ್ಟಭದ್ರ ಹಿತಾಸಕ್ತಿಗಳು ಮುಂದಾಗಿವೆ ಎಂದರು.

Latest Videos
Follow Us:
Download App:
  • android
  • ios