ಬೆಂಗಳೂರು [ನ.01]:  ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್‌ ಗೆಲುವು ಎಷ್ಟುಸತ್ಯವೋ ಅವರು ಸಚಿವರಾಗುವುದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಯಶವಂತಪುರದ ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್‌ ಅವರ ಪರ ಹೆಮ್ಮಿಗೆಪುರ, ಉಲ್ಲಾಳು ಸೇರಿದಂತೆ ಅನೇಕ ಕಡೆ ರೋಡ್‌ ಶೋ ನಡೆಸಿ ಅವರು ಮಾತನಾಡಿದರು.

ಯಶವಂತಪುರದಿಂದ ಕೇವಲ ಒಬ್ಬ ಶಾಸಕನನ್ನು ಮಾತ್ರ ಆಯ್ಕೆ ಮಾಡುತ್ತಿಲ್ಲ. ಎಸ್‌.ಟಿ.ಸೋಮಶೇಖರ್‌ ಗೆದ್ದ 48 ಗಂಟೆಯೊಳಗೆ ಮಂತ್ರಿಯಾಗುತ್ತಾರೆ. ಇಂತಹ ಸದಾವಕಾಶವನ್ನು ಈ ಕ್ಷೇತ್ರದ ಜನತೆ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದರು.

ಕಾಂಗ್ರೆಸ್‌-ಜೆಡಿಎಸ್‌ ಎಷ್ಟೇ ಆಮಿಷವೊಡ್ಡಿದರೂ ನೀವು ಮಾತ್ರ ಬಿಜೆಪಿಗೆ ಮತ ಹಾಕುವುದನ್ನು ಮರೆಯಬಾರದು. ಮತದಾನ ನಡೆಯುವ ಡಿ.5ರಂದು ನಿಮ್ಮ ಜೊತೆಗೆ ನಿಮ್ಮ ಕುಟುಂಬದ ಸದಸ್ಯರು ಹಾಗೂ ನೆರೆ ಹೊರೆಯವರನ್ನು ಮತಗಟ್ಟೆಗೆ ಕರೆ ತಂದು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಸಬೇಕು. ಈ ಕ್ಷೇತ್ರಕ್ಕೆ ನಾನು ಈಗಾಗಲೇ ನೂರಾರು ಕೋಟಿ ಅನುದಾನ ನೀಡಿದ್ದೇನೆ. ಚುನಾವಣೆ ಮುಗಿಯುತ್ತಿದ್ದಂತೆ ಸೋಮಶೇಖರ್‌ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವ್ಯಾವ ಬೇಡಿಕೆಗಳನ್ನು ಮುಂದಿಟ್ಟಿದ್ದಾರೋ ಅವೆಲ್ಲವನ್ನೂ ಕೆಲವೇ ದಿನಗಳಲ್ಲಿ ಮಾಡಿ ಕೊಡುತ್ತೇನೆ. ಎಸ್‌.ಟಿ.ಸೋಮಶೇಖರ್‌ ಇಡೀ 15 ಕ್ಷೇತ್ರದಲ್ಲಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆದ್ದು ವಿಧಾನಸಭೆಗೆ ಬರಬೇಕೆಂದು ಹಾರೈಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ಯಶವಂತಪುರದಲ್ಲಿ ಜಾತಿ ಆಧಾರದ ಮೇಲೆ ಚುನಾವಣೆ ನಡೆಯುವುದಿಲ್ಲ. ಒಂದು ಜಾತಿಯನ್ನು ನಂಬಿಕೊಂಡು ನಾನು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ನನಗೆ ಎಲ್ಲ ಧರ್ಮ, ಜಾತಿ, ಸಮಾಜದವರು ಒಂದೇ. ನನ್ನ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗುತ್ತಿದೆ. ವಿರೋಧ ಪಕ್ಷದವರ ಟೀಕೆಗೆ ನಾನು ಮಾತನಾಡುವುದಿಲ್ಲ ಎಂದರು.

ನಾನು ಕೂಡ ಒಬ್ಬ ಒಕ್ಕಲಿಗ. ನನ್ನ ಸಮುದಾಯದವರು ನನಗೆ ಮತ ಹಾಕುವುದಿಲ್ಲವೇ? ಪ್ರತಿ ಚುನಾವಣೆಯಲ್ಲೂ ನನಗೆ ಜಾತ್ಯತೀತವಾಗಿ ಮತ ಹಾಕಿದ್ದಾರೆ. ಈ ಬಾರಿ ನಾನು ಗೆಲ್ಲುವುದರಲ್ಲಿ ಯಾವ ಸಂಶಯವೂ ಇಲ್ಲ. ಜನಪರವಾದ ಆಡಳಿತ ಮತ್ತು ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದು ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಎಂ.ಕೃಷ್ಣಪ್ಪ ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು.

ಡಿಸೆಂಬರ್ 5 ರಂದು ಉಪ ಚುನಾವಣೆ ನಡೆಯಲಿದ್ದು, 9 ರಂದು ಫಲಿತಾಂಶ ಪ್ರಕಟವಾಗಲಿದೆ