ಸಿದ್ದರಾಮಯ್ಯ ಅವರು ಚುನಾವಣೆಗೋಸ್ಕರ ಕುಕ್ಕರ್‌ ಕೊಟ್ಟಿದ್ದಾರೆ ಅಂತ ನಾನು ಎಲ್ಲೂ ಹೇಳಿಲ್ಲ. ನಾನು ಹೇಳಿರುವುದೇ ಒಂದು, ಮಾಧ್ಯಮಗಳು ತೋರಿಸುತ್ತಿರುವುದೇ ಇನ್ನೊಂದು ಎಂದು ಮಾಜಿ ಶಾಸಕ ಹಾಗೂ ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. 

ಮೈಸೂರು (ಸೆ.23): ಸಿದ್ದರಾಮಯ್ಯ ಅವರು ಚುನಾವಣೆಗೋಸ್ಕರ ಕುಕ್ಕರ್‌ ಕೊಟ್ಟಿದ್ದಾರೆ ಅಂತ ನಾನು ಎಲ್ಲೂ ಹೇಳಿಲ್ಲ. ನಾನು ಹೇಳಿರುವುದೇ ಒಂದು, ಮಾಧ್ಯಮಗಳು ತೋರಿಸುತ್ತಿರುವುದೇ ಇನ್ನೊಂದು ಎಂದು ಮಾಜಿ ಶಾಸಕ ಹಾಗೂ ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 26 ರಂದು ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ಅವರ ಹುಟ್ಟುಹಬ್ಬದ ಪ್ರಯಕ್ತ ಕುಕ್ಕರ್ ಹಾಗೂ ಐರನ್ ಬಾಕ್ಸ್‌ ವಿತರಣೆ ಮಾಡಲಾಗಿದೆ. 

ನನ್ನ ತಂದೆ ಸ್ವತಃ ಅವರ ಕೈಯಿಂದ ಕೂಡ ಇದನ್ನು ಕೊಟ್ಟಿಲ್ಲ. ಇದರ ಬಗ್ಗೆಯಷ್ಟೆ ನಾನು ಮಾತನಾಡಿದ್ದು, ಆದರೆ ಮಾಧ್ಯಮಗಳಲ್ಲಿ ಚುನಾವಣೆಗಾಗಿ ಹಂಚಿಕೆ ಮಾಡಲಾಗಿದೆ ಎಂದು ಬರುತ್ತಿದೆ. ಆ ಕಾರ್ಯಕ್ರಮದ ವೀಡಿಯೋ, ಪೋಟೋಗಳೂ ಇವೆ. ನಮ್ಮ ತಂದೆ ಅವರ ಕೈಯಿಂದ ದುಡ್ಡು ಕೊಟ್ಟು ಎಲ್ಲಿಯೂ ಹಂಚಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನಾನು ಮಾತನಾಡುವಾಗ ಸರಿಯಾಗಿ ಮಾತನಾಡದೇ ಇರಬಹುದು. ನನ್ನ ಹೇಳಿಕೆ ಆ ರೀತಿಯ ಅರ್ಥವನ್ನೂ ಕೊಟ್ಟಿರಬಹುದು. ಆದರೆ, ಈ ಘಟನೆ ನಡೆದಿರೋದು ಚುನಾವಣೆ ನೀತಿ ಸಂಹಿತೆಗೂ ಮುಂಚೆ ಎಂದರು.

ಸಿದ್ದರಾಮಯ್ಯ ಈ ದೇಶದ ಬೆಸ್ಟ್‌ ಸಿಎಂ: ಶಾಸಕ ಬಸವರಾಜ ರಾಯರೆಡ್ಡಿ

ಆಯೋಗಕ್ಕೆ ಬಿಜೆಪಿ ದೂರು: ವಿಧಾನಸಭಾ ಚುನಾವಣೆ ಸಮಯದಲ್ಲಿ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಬಿಜೆಪಿ ನಿಯೋಗ ದೂರು ನೀಡಿದೆ. ಆಯೋಗ ಕಚೇರಿಗೆ ಭೇಟಿ ನೀಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ರೆಡ್ಡಿ ನೇತೃತ್ವದ ನಿಯೋಗವು ದೂರು ಸಲ್ಲಿಸಿ ಆಗ್ರಹಿಸಿದೆ. 

ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ವಿಧಾನಸಭೆ ಚುನಾವಣೆ ವೇಳೆ ವರುಣ ಕ್ಷೇತ್ರದಲ್ಲಿ ಸಾವಿರಾರು ಕುಕ್ಕರ್‌, ಇಸ್ತ್ರಿ ಪೆಟ್ಟಿಗೆಗಳನ್ನು ಹಂಚಿಕೆ ಮಾಡಿದ್ದು ಗೆಲುವಿಗೆ ಸಹಕಾರಿಯಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಇದು ಚುನಾವಣಾ ಅಕ್ರಮವನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ. ಭ್ರಷ್ಟಾಚಾರದ ಮೂಲಕ ಸಿದ್ದರಾಮಯ್ಯ ಗೆಲುವು ಸಾಧಿಸಿರುವುದರಿಂದ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು. ಆಯೋಗಕ್ಕೆ ಇರುವ ಪರಮಾಧಿಕಾರವನ್ನು ಬಳಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಆಯೋಗಕ್ಕೆ ದೂರು ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರವಿಕುಮಾರ್‌, ಮತದಾರರಿಗೆ ಆಮಿಷವೊಡ್ಡಿ ಗೆದ್ದಿರುವ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. 

ಬಿಜೆಪಿ ಜತೆ ಮೈತ್ರಿಗೆ ವಿರೋಧ: ಜೆಡಿಎಸ್‌ಗೆ ಮುಸ್ಲಿಂ ನಾಯಕರ ರಾಜೀನಾಮೆ

ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ನಿರ್ದೇಶಿಸಲು ಚುನಾವಣಾಧಿಕಾರಿಯನ್ನು ಕೋರಲಾಗಿದೆ ಎಂದು ಹೇಳಿದರು. ಮತದಾರರಿಗೆ ಆಸೆ, ಆಮಿಷ, ಅಭಿಲಾಷೆ, ಒತ್ತಡ ವಿಧಿಸಬಾರದೆಂದು ಕಾನೂನಿದೆ. ಆದರೆ, ಮಡಿವಾಳ ಸಮುದಾಯಕ್ಕೆ ಇಸ್ತ್ರಿ ಪೆಟ್ಟಿಗೆ ಮತ್ತು ಮನೆಮನೆಗೆ ಕುಕ್ಕರ್, ಹಣ ಹಂಚಿದ ಬಗ್ಗೆ ಸಿದ್ದರಾಮಯ್ಯ ಪುತ್ರ ಮತ್ತು ಮಾಜಿ ಶಾಸಕ ಯತೀಂದ್ರ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಸಿದ್ದರಾಮಯ್ಯನವರು ನೈತಿಕತೆ ಕುರಿತು ಮತ್ತು ಡಾ. ಅಂಬೇಡ್ಕರರ ಸಂವಿಧಾನದ ಬಗ್ಗೆ ಬಹಳ ಮಾತನಾಡುತ್ತಾರೆ. ಅದೇ ಸಂವಿಧಾನ, ಅದೇ ಚುನಾವಣೆ ನೀತಿಸಂಹಿತೆ ಪ್ರಕಾರ ಸಿದ್ದರಾಮಯ್ಯನವರು ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಪರಿಣಾಮವಾಗಿ ಅವರು ಗೆದ್ದಿದ್ದಾಗಿ ಅವರ ಮಗನೇ ಹೇಳಿದ್ದಾರೆ. ಸಿದ್ದರಾಮಯ್ಯನವರೂ ಈ ಸಭೆಯಲ್ಲಿದ್ದರು ಎಂದು ತಿಳಿಸಿದರು.