ಬೆಂಗಳೂರು(ಉ.06): ‘ಬಿ. ಶ್ರೀರಾಮುಲು ಅವರೇ ಬಳ್ಳಾರಿಯ ನಿಮ್ಮ ಅಣ್ಣ-ತಮ್ಮಂದಿರು ಇದೇ ರೀತಿ ನನ್ನ ಬಳಿ ಸವಾಲು ಹಾಕಿ ಕೊನೆಗೆ ದಾಖಲೆ ಬಿಡುಗಡೆ ಮಾಡಿದಾಗ ಜೈಲು ಸೇರಿದರು. ಸವಾಲೆಸೆಯುವಾಗ ಇದು ನಿಮ್ಮ ಗಮನದಲ್ಲಿರಲಿ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಗುಡುಗಿದ ಸಚಿವ ಶ್ರೀರಾಮುಲು

‘ಕೊರೋನಾ ನಿಯಂತ್ರಣದಲ್ಲಿ ಸರ್ಕಾರ ಲೂಟಿ ಹೊಡೆದಿದ್ದರೆ ದಾಖಲೆ ಬಿಡುಗಡೆ ಮಾಡಲಿ’ ಎಂದಿರುವ ಆರೋಗ್ಯ ಸಚಿವ ಶ್ರೀರಾಮುಲು ಅವರ ಹೇಳಿಕೆಗೆ ಉತ್ತರಿಸಿರುವ ಅವರು, ಕೊರೋನಾ ನಿಯಂತ್ರಣದ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಸತ್ಯ. ದಾಖಲೆ ಬಿಡುಗಡೆ ಮಾಡಲಿ ಎಂದು ಹೇಳಿದ್ದೀರಿ. ಬಳ್ಳಾರಿಯ ನಿಮ್ಮ ಅಣ್ಣ-ತಮ್ಮಂದಿರು ಇದೇ ರೀತಿ ಸವಾಲು ಹಾಕಿ ಕೊನೆಗೆ ದಾಖಲೆ ಬಿಡುಗಡೆ ಮಾಡಿದಾಗ ಜೈಲು ಸೇರಿದ್ದರು. ಸವಾಲೆಸೆಯುವಾಗ ಇದು ನಿಮ್ಮ ಗಮನದಲ್ಲಿರಲಿ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಆರೋಪಕ್ಕೆ ಯಾವ ತನಿಖೆಗೂ ಸಿದ್ಧ ಎಂದ ಮಾಜಿ ಶಿಷ್ಯ

ತ್ರಿಮೂರ್ತಿಗಳ ಕಾರ್ಯವೇನು?:

ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ತ್ರಿಮೂರ್ತಿ ಸಚಿವರನ್ನು ನೇಮಿಸಿರುವ ಬಗ್ಗೆಯೂ ವ್ಯಂಗ್ಯವಾಡಿರುವ ಸಿದ್ದರಾಮಯ್ಯ, ತ್ರಿಮೂರ್ತಿಗಳ ನೇಮಕ ಸೋಂಕಿತರಿಗೆ ನೆರವಾಗಲಿಕ್ಕಾ ಅಥವಾ ಭಿನ್ನಾಭಿಪ್ರಾಯವವನ್ನು ಶಮನ ಮಾಡಲಿಕ್ಕಾ ಎಂದು ಪ್ರಶ್ನೆ ಮಾಡಿದ್ದಾರೆ. ಸೃಷ್ಟಿ, ಪಾಲನೆ, ಲಯ ಇವು ಆ ತ್ರಿಮೂರ್ತಿಗಳ ಕರ್ತವ್ಯವಂತೆ. ಈ ಮೂವರು ಇವುಗಳಲ್ಲಿ ಯಾವ ಕೆಲಸ ಮಾಡಲಿದ್ದಾರಂತೆ ಎಂದು ವ್ಯಂಗ್ಯವಾಡಿದರು.