ಅಧಿಕಾರಿಗೆ ಬೆದರಿಕೆ ಆರೋಪ, ಬಿಜೆಪಿ ಶಾಸಕನ ವಿರುದ್ಧ ಸಿಡಿದೆದ್ದ ಸಿದ್ದು
ಕಲಬುರಗಿ ಜಿಲ್ಲಾ ಬಿಸಿಎಂ ಅಧಿಕಾರಿ ರಮೇಶ್ ಸಂಗಾ ಅವರಿಗೆ ಬೆದರಿಕೆ ಮತ್ತು ಲಂಚ ಬೇಡಿಕೆ ಇಟ್ಟ ಬಿಜೆಪಿ ಶಾಸಕನ ವಿರುದ್ಧ ವಿರೋಧ ಪಕ್ಷದ ನಾಯಕ ಸಿಡಿದೆದ್ದಿದ್ದಾರೆ.
ಬೆಂಗಳೂರು/ಕಲಬುರಗಿ, (ಮೇ.29): ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರು (ಅಪ್ಪುಗೌಡ) ವಿರುದ್ಧ ಕ್ರಮ ಜರುಗಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕಲಬುರಗಿಯ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ರಮೇಶ್ ಸಂಗ ಅವರಿಗೆ ವರ್ಗಾವಣೆಯ ಬೆದರಿಕೆಯೊಡ್ಡಿ ಹಣಕ್ಕಾಗಿ ಪೀಡಿಸಿದ ಶಾಸಕ ದತ್ತಾತ್ರೇಯ ರೇವೂರ ವಿರುದ್ಧ ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಬಿಜೆಪಿಯಲ್ಲಿ ಅಸಮಧಾನ ಸ್ಫೋಟ: ಅತೃಪ್ತ ಸಭೆಯಲ್ಲಿ ಪಾಲ್ಗೊಂಡ ಶಾಸಕರ ಪಟ್ಟಿ
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ಶಾಸಕ ದತ್ತಾತ್ರೇಯ ಅವರು ತಾನು ಬೆದರಿಕೆಯೊಡ್ಡಿದ್ದು ಮಾತ್ರವಲ್ಲ ಹಾದಿಮನಿ ಎಂಬ ಕಾರ್ಪೋರೇಟರ್‌ನಿಂದಲೂ ಬೆದರಿಕೆ ಹಾಕಿಸಿದ್ದಾರೆ. ಇದು ಭ್ರಷ್ಟಾಚಾರ ಎಸಗಿದ ಮತ್ತು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಗಂಭೀರ ಆರೋಪವಾಗಿದೆ. ಈ ಬಗ್ಗೆ ಅಧಿಕಾರಿ ರಮೇಶ್ ಸಂಗ ನೀಡುವ ದೂರನ್ನು ದಾಖಲಿಸಿ ಕ್ರಮಕೈಗೊಳ್ಳಬೇಕು' ಎಂದಿದ್ದಾರೆ.
'ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮಿಷನರ್‌ಗೆ ಮಾತನಾಡಿದ್ದೇನೆ. ರಮೇಶ್ ಸಂಗ ಅವರ ದೂರನ್ನು ದಾಖಲಿಸಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದೇನೆ. ಬೆದರಿಕೆ ಹಾಕಿದ ಕಾರ್ಪೋರೇಟರನ್ನು ಸಹ ಬಂಧಿಸುವಂತೆ ತಿಳಿಸಿದ್ದೇನೆ' ಎಂದರು.
ಏನಿದು ಆರೋಪ..?
ಕಲಬುರಗಿ ಜಿಲ್ಲಾ ಬಿಸಿಎಂ ಅಧಿಕಾರಿ ರಮೇಶ್ ಸಂಗಾ ವರ್ಗಾವಣೆಗೆ ಕಲಬುರಗಿ ದಕ್ಷಿಣ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಒತ್ತಡ ಹಾಕಿದ್ದು, ಅಲ್ಲದೆ ಶಾಸಕರ ಬೆಂಬಲಿಗರು ಬೆದರಿಕೆ ಕರೆ ಮಾಡಿದ್ದಾರೆ ಎಂಬ ಸಂಗತಿ ಹೊರಬಿದ್ದಿದೆ. ಬಿಸಿಎಂ ಅಧಿಕಾರಿ ರಮೇಶ್ ಸಂಗಾ ದುರ್ನಡತೆಯಿಂದ ವರ್ತಿಸುತ್ತಿದ್ದಾರೆ ಹೀಗಾಗಿ ವರ್ಗಾವಣೆ ಮಾಡುವಂತೆ ಶಾಸಕ ಪತ್ರ ಬರೆದಿದ್ದು, ಶಾಸಕ ದತ್ತಾತ್ರೇಯ ಪಾಟೀಲ್ ಆಪ್ತ ದೇವಿಂದ್ರ ಬಿರಾದರ್ ಎನ್ನುವವರ ನೇಮಕಕ್ಕೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಹಣ ಕೊಡದಿದ್ದಕ್ಕೆ ವರ್ಗಾವಣೆ ಮಾಡಲು ಮುಂದಾಗುತ್ತಿದ್ದಾರೆ ಎಂದು ಶಾಸಕ ದತ್ತಾತ್ರೇಯ ಪಾಟೀಲ್ ವಿರುದ್ಧ ಅಧಿಕಾರಿ ರಮೇಶ್ ಸಂಗಾ ಗಂಭೀರ ಆರೋಪ ಮಾಡಿದ್ದಾರೆ.