ಸಿದ್ದರಾಮೋತ್ಸವ ಜೀವಂತವಾಗಿಡಲು ಪ್ರಯತ್ನ: ಶಾಸಕ, ಎಂಎಲ್‌ಸಿ, ಕಾರ್ಯಕರ್ತರಿಗೆ ಸಿದ್ದು ಔತಣ
Siddaramaiah News in Kannada: ಸಿದ್ದರಾಮೋತ್ಸವ ಕ್ರೇಜ್ ಜೀವಂತವಾಗಿಡಲು ಸಿದ್ದರಾಮಯ್ಯ ಫ್ಲ್ಯಾನ್ ಮಾಡಿದ್ದು, ಶಾಸಕರಿಗೆ, ಎಂಎಲ್ಸಿ, ಕಾಂಗ್ರೆಸ್ ಕಾರ್ಯಕರ್ತರಿಗೆ ಔತಣಕೂಟ ವ್ಯವಸ್ಥೆ ಮಾಡಿದ್ದಾರೆ. ಔತಣಕೂಟ ಆಯೋಜನೆ ಮಾಡಿರುವ ಸಿದ್ದರಾಮಯ್ಯ ಕೊಡವ ಸಮಾಜದ ಹಾಲ್‌ನಲ್ಲಿ ಎಲ್ಲರಿಗೂ ಊಟಕ್ಕಾಗಿ ಆಹ್ವಾನಿಸಿದ್ದಾರೆ.
ಬೆಂಗಳೂರು: ಸಿದ್ದರಾಮೋತ್ಸವ ಕಾರ್ಯಕ್ರಮ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಮಾಡಿದ ಸಮಾವೇಶಗಳಲ್ಲಿ ಅತ್ಯಂತ ಯಶಸ್ವಿ ಕಾರ್ಯಕ್ರಮಗಳಲ್ಲೊಂದು. ಈ ಕಾರ್ಯಕ್ರಮದ ಯಶಸ್ಸನ್ನು ಜೀವಂತವಾಗಿಡಲು ಸಿದ್ದರಾಮಯ್ಯ ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ ಶಾಸಕರು, ಎಂಎಲ್ಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಔತಣಕೂಟದ ವ್ಯವಸ್ಥೆ ಮಾಡಲಾಗಿದ್ದು, ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಮತ್ತೆ ನಾಯಕರು ಮತ್ತು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ. ಕೊಡವ ಸಮಾಜದ ಹಾಲ್ ನಲ್ಲಿ ಆಯೋಜನೆ ಔತಣಕೂಟ ಆಯೋಜನೆ ಮಾಡಲಾಗಿದೆ.
ಅಧಿವೇಶನ ನಡೆಯುವಾಗ ಶಾಸಕರಿಗೆ ಔತಣಕೂಟ ಆಯೋಜನೆ ಮಾಡುವುದು ಸಂಪ್ರದಾಯದಂತೆ ನಡೆದು ಬಂದಿದೆ. ಈ ಹಿಂದೆಯೂ ಅನೇಕ ಬಾರಿ ನಡೆದಿದೆ. ಆದರೆ ಈ ಬಾರಿಯ ಔತಣಕೂಟಕ್ಕೆ ಸಿದ್ದರಾಮೋತ್ಸವದ ಹೆಸರು ನೀಡಲಾಗಿದ್ದು, ಸಿದ್ದರಾಮೋತ್ಸವ ಯಶಸ್ವಿ ಹಿನ್ನೆಲೆಯಲ್ಲಿ ಔತಣಕೂಟ ಆಯೋಜನೆ ಎಂದು ಸಿದ್ದರಾಮಯ್ಯ ಬೆಂಬಲಿಗರು ಹೇಳುತ್ತಿದ್ದಾರೆ. ಔತಣಕೂಟದಂತಹ ಹಳೆ ಸಂಪ್ರದಾಯಕ್ಕೆ ಸಿದ್ದರಾಮೋತ್ಸವ ಯಶಸ್ವಿ ಲೇಪನ ಯಾಕೆ ಎಂಬುದು ಪಕ್ಷದೊಳಗೇ ಕೆಲವರಿಗೆ ಕಸಿವಿಸಿ ಉಂಟುಮಾಡಿದೆ ಎನ್ನಲಾಗಿದೆ.
ಆಗಸ್ಟ್ 3 ರಂದು ಸಿದ್ದರಾಮೋತ್ಸವ ವಿಜ್ರಂಭಣೆಯಿಂದ ದಾವಣಗೆರೆಯಲ್ಲಿ ನಡೆದಿತ್ತು. ಸಿದ್ದರಾಮೋತ್ಸವಕ್ಕೆ ನಿರೀಕ್ಷೆಗೂ ಮೀರಿ ಜನಸಾಗರದ ಬೆಂಬಲ ಸಿಕ್ಕಿತ್ತು. ಇದರಿಂದ ಪಕ್ಷದಲ್ಲಿ ಸಿದ್ದರಾಮಯ್ಯ ವರ್ಚಸ್ಸು ಹೆಚ್ಚಾಗಿದ್ದು, ಮುಂದಿನ ಮುಖ್ಯಮಂತ್ರಿ ಆಸೆಗೆ ಇನ್ನಷ್ಟು ಬಲ ಬಂದತ್ತಾಗಿದೆ. ಸಿದ್ದರಾಮೋತ್ಸವ ಬಳಿಕ ಪ್ರತಿ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಎಂದು ಪಕ್ಷದ ಹಾಲಿ ಮತ್ತು ಮಾಜಿ ಶಾಸಕರು ಸಿದ್ದರಾಮಯ್ಯ ಅವರ ಬೆನ್ನು ಬಿದ್ದಿದ್ದಾರೆ. ಸಿದ್ದರಾಮಯ್ಯ ಅವರಿಗೆ ದುಂಬಾಲು ಬಿದ್ದಿರುವ ಹಿನ್ನೆಲೆಯಲ್ಲಿ ಬಸ್ ಯಾತ್ರೆ ನಡೆಸಲು ಸಿದ್ದರಾಮಯ್ಯ ಬೆಂಬಲಿಗರು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಅಲ್ಲದೇ ಸಿದ್ದರಾಮೋತ್ಸವ ಬಳಿಕ ಹೈಕಮಾಂಡ್ ಗೆ ಸಿದ್ದರಾಮಯ್ಯ ಬಗ್ಗೆ ಉತ್ತಮ ಸಂದೇಶ ರವಾನೆ ಆಗಿದೆ. ಅದ್ದರಿಂದ ಚುನಾವಣಾ ವರ್ಷದಲ್ಲಿ ಸಿದ್ದರಾಮೋತ್ಸವ ಹವಾ ಜೀವಂತವಾಗಿ ಇಡಲು ಪ್ಲ್ಯಾನ್ ಮಾಡಲಾಗಿದೆ ಎನ್ನಲಾಗುತ್ತಿದೆ. ಇದರಿಂದ ಸಿದ್ದರಾಮಯ್ಯ ಹಾಗೂ ಬೆಂಬಲಿಗರಿಗೆ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಸಿದ್ದರಾಮೋತ್ಸವ ಹವಾ ಮುಂದುವರಿದರೆ ಮುಂದಿನ ಸಿಎಂ ದಾರಿಗೆ ಸುಲಭವಾಗಲಿದೆ. ಇದರ ಜೊತೆಗೆ ಶಾಸಕರ ಹಾಗೂ ಕಾರ್ಯಕರ್ತ ವಿಶ್ವಾಸ ಗಟ್ಟಿಗೊಳಿಸಿಕೊಳ್ಳಲು ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಬಣಕ್ಕೆ ಮತ್ತೆ ಡಿಚ್ಚಿಕೊಟ್ಟ ಡಿಕೆಶಿ; ಶಾಸಕರಿಗೆ ಖಡಕ್ ವಾರ್ನಿಂಗ್!
ಒಂದೆಡೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ತಾವೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಿದ್ದರೆ, ಸಿದ್ದರಾಮಯ್ಯ ಕೂಡ ಮುಂದಿನ ಬಾರಿ ನಾನೇ ಮುಖ್ಯಮಂತ್ರಿಯಾಗುವುದು ಎಂಬುದನ್ನು ಪದೇ ಪದೇ ಹೇಳುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಈ ಹಿಂದೆಯೂ ಸಿದ್ದರಾಮಯ್ಯ ಬಣ ಮತ್ತು ಡಿಕೆ ಶಿವಕುಮಾರ್ ಬಣ ವಿರೋಧವಿತ್ತು. ಅದು ಇತ್ತೀಚೆಗೆ ಇನ್ನೂ ಹೆಚ್ಚಾಗುತ್ತಿದೆ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟ ಚುನಾವಣೆ ಸಮೀಪಿಸುತ್ತಲೇ ಹೆಚ್ಚಾಗುತ್ತಿರುವುದು ಇದು ಮೊದಲೇನಲ್ಲ. ಕಳೆದ ವಿಧಾನ ಸಭಾ ಚುನಾವಣೆ ವೇಳೆಯೂ ಇಬ್ಬರೂ ಒಳಗಿಂದೊಳಗೇ ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಿದ್ದರು. ಡಿಕೆ ಶಿವಕುಮಾರ್ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶತಾಯ ಗತಾಯ ಮುಖ್ಯಮಂತ್ರಿ ಖುರ್ಚಿ ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಸಿದ್ದರಾಮಯ್ಯ ಕೂಡ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಗೆದ್ದರೆ ನಾನೇ ಮುಖ್ಯಮಂತ್ರಿ ಎಂದು ಹಲವಾರು ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮೋತ್ಸವಕ್ಕಿಂತ ಸ್ವಾತಂತ್ರ್ಯ ನಡಿಗೆ ಅಚ್ಚುಕಟ್ಟು: ಡಿಕೆಶಿ
ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಆಚರಣೆಗೆ ನಡೆದ ಅಮೃತ ಮಹೋತ್ಸವ ಸಂಭ್ರಮಾಚರಣೆಯಲ್ಲಿ ರಾಹುಲ್ ಗಾಂಧಿ ಭೇಟಿ ನೀಡಿದ್ದು ಸಹ ಡಿಕೆ ಶಿವಕುಮಾರ್‌ಗೆ ಆದ ಹಿನ್ನಡೆ ಎನ್ನಲಾಗುತ್ತಿದೆ. ಜತೆಗೆ ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಸೇರಿದ್ದ ಜನ ಸಾಗರ ನೋಡಿ ರಾಹುಲ್ ಗಾಂಧಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.