ಬೆಂಗಳೂರು, (ಆ.13):  ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಭಯ ಹುಟ್ಟಿಸುವ ಭಯೋತ್ಪಾದಕರ ಪರವಾಗಿಯೊ? ದಲಿತರ ಪರವಾಗಿಯೊ? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನಳಿನ್ ಕುಮಾರ್ ಅವರೇ, ನಾವು ಮನುಷ್ಯರ ಪರ, ಮನುಷ್ಯವಿರೋಧಿಗಳ ಪರ ಅಲ್ಲ, ನಾವು ದೀಪ ಹಚ್ಚುವವರ ಪರ, ಬೆಂಕಿ ಹಚ್ಚುವವರ ಪರ ಅಲ್ಲ, ನಾವು ಕಟ್ಟುವವರ ಪರ, ಕೆಡವುವವರ ಪರ ಅಲ್ಲ. ನಮ್ಮನ್ನು ಮತ್ತು ನಿಮ್ಮನ್ನು ಇದಕ್ಕಿಂತ ಚೆನ್ನಾಗಿ ಹೇಗೆ ಪರಿಚಯಿಸಲಿ ಹೇಳಿ? ಎಂದು ಪ್ರಶ್ನಿಸಿದ್ದಾರೆ.

 ಬಿಜೆಪಿ ನಾಯಕರ ವ್ಯಂಗ್ಯ: ನನ್ನ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ತಿವಿದ ಸಿದ್ದರಾಮಯ್ಯ..!

ಅಲ್ಲದೇ ನೀವು ದಲಿತರ ಪರವೋ? ಹಿಂದೂಗಳ ಪರವೋ? ನೀವೊಬ್ಬ ಹಿಂದುವಾದರೆ, ಅಖಂಡ ಶ್ರೀನಿವಾಸಮೂರ್ತಿ ಯಾಕೆ ಹಿಂದು ಅಲ್ಲ? ಅವರು ಯಾಕೆ ಹಿಂದು ಆಗದೆ ಕೇವಲ ದಲಿತ ಆಗಿಬಿಟ್ಟರು? ಹಿಂದುತ್ವದ ಸರಿಯಾದ ವ್ಯಾಖ್ಯಾನ ಏನೆಂದು ನಿಮ್ಮ ಹಿರಿಯರಿಂದ ಕೇಳಿ ತಿಳಿದುಕೊಂಡು ಸ್ಪಷ್ಟಪಡಿಸುವಿರಾ? ಎಂದಿದ್ದಾರೆ.

ಬೆಳಗ್ಗೆ ಕೊಪ್ಪಳದಲ್ಲಿ ಮಾತನಾಡಿದ್ದ ನಳಿನ್ ಕುಮಾರ್ ಕಟೀಲ್ ಅವರು, ಕಾಂಗ್ರೆಸ್‌ನ ಓಲೈಕೆ ರಾಜಕಾರಣದಿಂದಲೇ ಈ ಜನರು ಬೆಳೆಯುತ್ತಿದ್ದಾರೆ. ಪೊಲೀಸರು, ಮಾಧ್ಯಮದವರಿಗೆ, ಸಾರ್ವಜನಿಕರಿಗೆ ಹಾಗೂ ಜನಪ್ರತಿನಿಧಿಗಳಲ್ಲಿ ಭಯ ಸೃಷ್ಟಿಸುತ್ತಿದ್ದಾರೆ. ಭಯ ಸೃಷ್ಟಿಸುತ್ತಿರುವ ಭಯೋತ್ಪಾದಕರ ಪರವಾಗಿ ನಿಲ್ಲುತ್ತೀರೊ? ದಲಿತ, ಸಜ್ಜನ ಶಾಸಕರ ಪರವಾಗಿ ನಿಲ್ಲುತ್ತೀರಾ ಎನ್ನುವುದನ್ನು ಸಿದ್ದರಾಮಯ್ಯನವರೇ ಹೇಳಬೇಕು ಎಂದು ಹೇಳಿದ್ದರು.

ಇದಕ್ಕೆ ಇದೀಗ ಸಿದ್ದರಾಮಯ್ಯ, ನಳಿನ್ ಕುಮಾರ್ ಕಟೀಲ್ ಅವರ ಈ ಹಿಂದಿನ ಬೆಂಕಿ ಹಚ್ಚುತ್ತೇನೆ ಎನ್ನುವ ಹೇಳಿಕೆಯನ್ನು ಪ್ರಸ್ತಾಪಿಸಿ ಟಾಂಗ್ ಕೊಟ್ಟಿದ್ದಾರೆ.