ಸರ್ಕಾರ ಘೋಷಣೆ ಮಾಡಿದ ಮೀಸಲಾತಿ ವಿಚಾರ ಇನ್ನೂ ಯಾರಿಗೂ ಅರ್ಥವಾಗಿಲ್ಲ. ಮೀಸಲಾತಿ ವಿಚಾರದಲ್ಲಿ ಎಲ್ಲವೂ ಸಂವಿಧಾನ ಬದ್ಧವಾಗಿ ಆಗಿದೆಯೋ, ಇಲ್ಲವೋ ನೋಡಬೇಕು ಎಂದ ಸಿದ್ದರಾಮಯ್ಯ

ದಾವಣಗೆರೆ(ಡಿ.31):  ಪಂಚಮಸಾಲಿ, ಒಕ್ಕಲಿಗರಿಗೆ ಮೀಸಲಾತಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಗಿಮಿಕ್‌ ಅಷ್ಟೆಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಘೋಷಣೆ ಮಾಡಿದ ಮೀಸಲಾತಿ ವಿಚಾರ ಇನ್ನೂ ಯಾರಿಗೂ ಅರ್ಥವಾಗಿಲ್ಲ. ಮೀಸಲಾತಿ ವಿಚಾರದಲ್ಲಿ ಎಲ್ಲವೂ ಸಂವಿಧಾನ ಬದ್ಧವಾಗಿ ಆಗಿದೆಯೋ, ಇಲ್ಲವೋ ನೋಡಬೇಕು ಎಂದರು.

ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ ಶೇ.50 ಮೀರದಂತೆ ಸುಪ್ರೀಂ ಕೋರ್ಚ್‌ ಹೇಳಿದೆ. 1992ರಲ್ಲಿ ಸುಪ್ರೀಂ ಕೋರ್ಚ್‌ನ 9 ನ್ಯಾಯಾಧೀಶರ ನ್ಯಾಯಪೀಠವು ಇದನ್ನೇ ಹೇಳಿದೆ. ಕೇಂದ್ರದಲ್ಲಿ ಶೇ.49.5 ಮೀಸಲಾತಿ ನೀಡಿದ್ದು, ಈಚೆಗೆ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ(ಇಡಬ್ಲ್ಯುಸಿ) ವರ್ಗಕ್ಕೆ ಶೇ.10 ಮೀಸಲಾತಿ ನೀಡಿದೆ. ಒಟ್ಟು ಶೇ. 59.5 ಮೀಸಲಾತಿ ನೀಡಿದಂತಾಗಿದೆ. ಈಗ ರಾಜ್ಯ ಸರ್ಕಾರ ಎಲ್ಲಿಂದ ಮೀಸಲಾತಿ ಕೊಡುತ್ತದೆಂಬುದನ್ನೇ ಹೇಳಿಲ್ಲ. ಸರ್ಕಾರವೇ ಗೊಂದಲದಲ್ಲಿದೆ. ಚುನಾವಣೆಗಾಗಿ ಇಷ್ಟೆಲ್ಲಾ ಗಿಮಿಕ್‌ ಮಾಡುತ್ತಿದ್ದಾರಷ್ಟೇ ಎಂದು ಕುಟುಕಿದರು.

Belagavi Winter Session: ಅಧಿವೇಶನ ಯಾವ ಪುರುಷಾರ್ಥಕ್ಕೆ?: ಸಿದ್ದು ಆಕ್ರೋಶ

ಪಂಚಮಸಾಲಿ, ಒಕ್ಕಲಿಗರಿಗೆ ಎಲ್ಲಿಂದ ಮೀಸಲಾತಿ ನೀಡುತ್ತಾರೆ? ಒಕ್ಕಲಿಗರಿಗೆ ಮೀಸಲಾತಿ ನೀಡಲು ನಮ್ಮ ತಕರಾರು ಇಲ್ಲ. 3ಎ ವರ್ಗದಲ್ಲಿದ್ದ ಒಕ್ಕಲಿಗರನ್ನು 2ಡಿ ವರ್ಗಕ್ಕೆ ಸೇರಿಸಿದ್ದಾರೆ. 3ಬಿ ವರ್ಗದಲ್ಲಿದ್ದ ಪಂಚಮಸಾಲಿಗಳನ್ನು 2ಸಿ ಮಾಡಿದ್ದಾರೆ. ಎರಡೂ ಜಾತಿಗಳು ಈ ಬಗೆಯ ಮೀಸಲಾತಿ ಕೇಳಿದ್ದವ? ರಾಜಕೀಯ ಗಿಮಿಕ್‌ಗೋಸ್ಕರ್‌ ಹೀಗೆಲ್ಲಾ ಮಾಡಲಾಗಿದೆ ಎಂದು ದೂರಿದರು.

ಇಲ್ಲಿ ಕಾನೂನು ಮಾಡಿದರಷ್ಟೇ ಸಾಲದು, ಸಂವಿಧಾನದಲ್ಲಿ ತಿದ್ದುಪಡಿ ಆಗಬೇಕು. ಬಿಜೆಪಿಯ ಡಬಲ್‌ ಇಂಜಿನ್‌ ಸರ್ಕಾರವಿದೆಯಲ್ಲ. ಸುಗ್ರಿವಾಜ್ಞೆ ತರಿಸಿ, ಪ್ರಧಾನಿ ಮೋದಿ ಮುಂದೆ ಕುಳಿತು ಮಾಡಿಸಲಿ ಎಂದು ಕಿವಿಮಾತು ಹೇಳಿದರು.