ರಾಹುಲ್ ಗಾಂಧಿಯಂತಹ ಸಾಹಸ ಯಾರೂ ಮಾಡಿಲ್ಲ: ಸಿದ್ದರಾಮಯ್ಯ
ಪ್ರಧಾನಮಂತ್ರಿ ಆಗಬೇಕು ಎನ್ನುವ ಉದ್ದೇಶಕ್ಕೆ ರಾಹುಲ್ ಗಾಂಧಿ ಅವರು ಈ ಪಾದಯಾತ್ರೆಯನ್ನು ಕೈಗೊಂಡಿಲ್ಲ: ಸಿದ್ದರಾಮಯ್ಯ
ರಾಯಚೂರು(ಅ.23): ಬಿಜೆಪಿಯ ದುರಾಡಳಿತ, ದ್ವೇಷ, ಅಸೂಯೆಯಿಂದ ಕೂಡಿದ ಆಡಳಿತದ ವಿರುದ್ಧವಾಗಿ ರಾಹುಲ್ ಗಾಂಧಿ ಅವರು ಕೈಗೊಂಡಿರುವ ಭಾರತ ಜೋಡೋ ಯಾತ್ರೆ ಇತಿಸಾಹ ನಿರ್ಮಿಸಲಿದ್ದು, ಇಂತಹ ಸಾಹಸವನ್ನು ಯಾರೂ ಮಾಡಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಭಾರತ ಜೋಡೋ ಯಾತ್ರೆ ಎರಡನೇ ದಿನ ರಾಯಚೂರು ನಗರದ ವಾಲ್ಕಾಟ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಶನಿವಾರ ಸಂಜೆ ಮಾತನಾಡಿ, ಹಿಂದೆ ಬಹಳಷ್ಟುನಾಯಕರು ಪಾದಯಾತ್ರೆ ಕೈಗೊಂಡಿದ್ದಾರೆ. ಆದರೆ ಸ್ವಾತಂತ್ರ್ಯ ಭಾರತದಲ್ಲಿ ಯಾರೂ ಕೂಡ ಇಷ್ಟುದೊಡ್ಡ ಸಾಹಸ ಮಾಡಿಲ್ಲ. ದೇಶದ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೆ 150 ದಿನಗಳ ಕಾಲ 3571 ಕಿಮೀ ದೂರ ನಡೆಯುವುದು ಸಾಮಾನ್ಯದ ಸಂಗತಿಯಲ್ಲ. ಪ್ರಧಾನಮಂತ್ರಿ ಆಗಬೇಕು ಎನ್ನುವ ಉದ್ದೇಶಕ್ಕೆ ರಾಹುಲ್ ಗಾಂಧಿ ಅವರು ಈ ಪಾದಯಾತ್ರೆಯನ್ನು ಕೈಗೊಂಡಿಲ್ಲ, ಸಮಾಜದಲ್ಲಿ ದ್ವೇಷ ನಿರ್ಮೂಲನೆ ಮಾಡಿ ಶಾಂತಿ ನೆಲೆಸಲು, ಜನರಿಗೆ ಆತ್ಮವಿಶ್ವಾಸ ತುಂಬುವುದಕ್ಕಾಗಿ ರಾಹುಲ್ ಗಾಂಧಿ ಅವರು ಈ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಅಭಿವೃದ್ಧಿ ಮಾಡೋದು ತಾಕತ್ತು, ಬರಿ ಬಾಯಿ ಮಾತಲ್ಲಿ ಮಾತಾಡೋದಲ್ಲ: ಸಿದ್ದು ವಿರುದ್ಧ ಸಿಎಂ ವಾಗ್ದಾಳಿ
ಕೇಂದ್ರ ಮತ್ತು ಬಿಜೆಪಿ ಸರ್ಕಾರಗಳು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಎಲ್ಲವೂ ದುಬಾರಿಯಾಗಿವೆ. ಬಡವರು ಜೀವನ ನಡೆಸುವುದು ದುಸ್ತರವಾಗಿದೆ. ಶ್ರೀಮಂತರ ತೆರಿಗೆ ಕಡಿಮೆಯಾಗಿದೆ. ಬಡವರಿಗೆ ತೆರಿಗೆ ಹಾಕುತ್ತಿದ್ದಾರೆ‘ ಎಂದು ಹೇಳಿದರು.