ದೇಶ ಮತ್ತು ರಾಜ್ಯದಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದ್ದು, ದುರಾಡಳಿತ ಮುಚ್ಚಿಕೊಳ್ಳಲು ಬಿಜೆಪಿಯವರು ಕೋಮುವಾದವನ್ನು ಸೃಷ್ಠಿ ಮಾಡುತ್ತಿದ್ದಾರೆ. ‘ಕೈಮುಗಿದು ಪ್ರಾರ್ಥಿಸುತ್ತೇನೆ ಮೊದಲು ಬಿಜೆಪಿ ಪಕ್ಷವನ್ನು ಕಿತ್ತೊಗೆಯರಿ’ ಎಂದು ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಕೊಟ್ಟರು.
ಹಾಸನ (ಏ.18): ದೇಶ (India) ಮತ್ತು ರಾಜ್ಯದಲ್ಲಿ (Karnataka) ಭ್ರಷ್ಟಚಾರ ತಾಂಡವವಾಡುತ್ತಿದ್ದು, ದುರಾಡಳಿತ ಮುಚ್ಚಿಕೊಳ್ಳಲು ಬಿಜೆಪಿಯವರು (BJP) ಕೋಮುವಾದವನ್ನು ಸೃಷ್ಠಿ ಮಾಡುತ್ತಿದ್ದಾರೆ. ‘ಕೈಮುಗಿದು ಪ್ರಾರ್ಥಿಸುತ್ತೇನೆ ಮೊದಲು ಬಿಜೆಪಿ ಪಕ್ಷವನ್ನು ಕಿತ್ತೊಗೆಯರಿ’ ಎಂದು ಕಾಂಗ್ರೆಸ್ ಪ್ರತಿಭಟನಾ (Congress Protest) ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕರೆ ಕೊಟ್ಟರು. ನಗರದಲ್ಲಿ ಭಾನುವಾರ ನಡೆದ ಭ್ರಷ್ಟಚಾರ ವಿರೋಧಿ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೋದಿಯಷ್ಟುಸುಳ್ಳು ಹೇಳೋ ಪ್ರಧಾನಮಂತ್ರಿ (PM Narendra Modi) ಮತ್ತೊಬ್ಬರಿಲ್ಲ.
ಇಡೀ ದೇಶದ ಇತಿಹಾಸದಲ್ಲಿ ಮೋದಿಯಂತಹ ದುರಾಡಳಿತ ಕಂಡಿಲ್ಲ ಎಂದು ವ್ಯಂಗ್ಯವಾಡಿದರು. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಕಡಿಮೆ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದರು. ಆದರೆ ಇಂದು ಅಗತ್ಯ ವಸ್ತುಗಳ ಬೆಲೆ ಎಲ್ಲಾ ಗಗನಕ್ಕೇರಿದೆ. ಮಾತೆತ್ತಿದ್ರೆ ನನಗೆ 56 ಇಂಚಿನ ಎದೆ ಇದೆ ಅಂತಾರೆ. 56 ಇಲ್ಲದಿದ್ರೆ 58, 60 ಇಂಚಿನ ಎದೆ ಇಟ್ಟುಕೊಳ್ಳಲಿ ಬೇಡ ಅಂದೋರು ಯಾರು! ಬಾಡಿ ಬಿಲ್ಡರ್‌ಗಳ ಎದೆ ಇನ್ನೂ ಜಾಸ್ತಿ ಇರುತ್ತೆ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಏನು ಮಾಡಿಲ್ಲ ಎಂದು ಹೇಳುತ್ತಿರುವ ಮೋದಿ ಅವರು ಈಗ ಮಾಡುತ್ತಿರೋದೇನು? ದೇಶದಲ್ಲಿ ಎಲ್ಲವನ್ನೂ ಮಾರಲು ಹೊರಟಿದ್ದಾರೆ.
ದೇವರಿಂದಲೂ ಕಮಿಷನ್ ಕೇಳುವ ನಿಮ್ಮದು ಯಾವ ರೀತಿಯ ಧರ್ಮ ರಕ್ಷಣೆ? ಸಿಎಂಗೆ ಸಿದ್ದು ಗುದ್ದು..!
ದುರಾಡಳಿತವನ್ನು ಮುಚ್ಚಿಹಾಕಲು ಕೋಮುವಾದವನ್ನ ಸೃಷ್ಟಿಮಾಡಿದ್ದಾರೆ. ಜಾತ್ರೆಯಲ್ಲಿ ವ್ಯಾಪಾರ, ಹಲಾಲ್, ನಿನ್ನೆ ಮೊನ್ನೆಯದಾ.? ಇನ್ನು ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವವಾಡುತ್ತಿದೆ ಎಂದರು. ಜೆಡಿಎಸ್‌ನವರು ಬಿಜೆಪಿ ಬಿ ಟೀಂ, ಇಪ್ಪತ್ತೋ, ಮುವತ್ತೋ ಸೀಟು ಬಂದ್ರೆ ಸಾಕು ಎಂದು ಕೂತಿದ್ದಾರೆ. ಇವಾಗ ಕುಮಾರಸ್ವಾಮಿ 123 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಇದು ಸಾಧ್ಯವಾ? ಸಮ್ಮಿಶ್ರ ಸರ್ಕಾರ ಸಿದ್ದರಾಮಯ್ಯರಿಂದ ಹೋಯ್ತು ಅಂತಾರೆ. 80 ಸೀಟು ಗೆದ್ದ ನಾವು 37 ಸೀಟು ಗೆದ್ದವರಿಗೆ ಅಧಿಕಾರ ನೀಡಿದ್ದೆವು. ಮುಖ್ಯಮಂತ್ರಿ ಆದ ಮೇಲೆ ತಾಜ್ ವೆಸ್ಟೆಂಡ್ ಹೋಟೆಲ್ ಸೇರಿಕೊಂಡ್ರು. ಕೊಟ್ಟಕುದುರೆ ಏರದವನು ಧೀರನೂ ಅಲ್ಲ ಶೂರರೂ ಅಲ್ಲ ಎಂದು ಕಿಡಿಕಾರಿದರು.
ಕಾರ್ಯಕರ್ತರ ಚಕಮಕಿ: ಸಭೆ ಪ್ರಾರಂಭವಾಗುವ ಮೊದಲು ಇಬ್ಬರು ಸ್ಥಳೀಯ ಮುಖಂಡ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಕಾರ್ಯಕರ್ತರ ಕೂಗಾಟ ಕೇಳಿ ಬರುತ್ತಿದ್ದರೂ ವೇದಿಕೆ ಮೇಲಿದ್ದ ಸಿದ್ದರಾಮಯ್ಯ ಮಾತ್ರ ಏನನ್ನೂ ಹೇಳಲಿಲ್ಲ. ಈ ವೇಳೆ ಕಾಂಗ್ರೆಸ್ ಮುಖಂಡರಾದ ಎಚ್.ಕೆ. ಮಹೇಶ್ ಮತ್ತು ಬನವಾಸೆ ರಂಗಸ್ವಾಮಿ ಅವರು ಮೈಕ್ ಹಿಡಿದುಕೊಂಡು ತಮ್ಮ ಬೆಂಬಲಿಗರನ್ನು ಸಮಾಧಾನ ಮಾಡಲು ಯತ್ನಿಸಿದರು. ಬನವಾಸೆ ರಂಗಸ್ವಾಮಿ ಮೈಕ್ ಹಿಡಿದಾಗ ಎಚ್.ಕೆ. ಮಹೇಶ್ ಕಡೆಯವರು ಆಕ್ರೋಶಭರಿತರಾಗಿ ಮಾತನಾಡಿದರು. ಮಹೇಶ್ ಮೈಕ್ ಹಿಡಿದಾಗ ಬನವಾಸೆ ರಂಗಸ್ವಾಮಿ ಕಡೆಯ ಕಾರ್ಯಕರ್ತರು ಕೂಗಾಡಿದರು. ಈ ವೇಳೆ ಮಹೇಶ್ ಮತ್ತು ಬನವಾಸೆ ರಂಗಸ್ವಾಮಿ ಕಡೆಯ ಕಾರ್ಯಕರ್ತರ ನಡುವೆ ಜಗಳ ಪ್ರಾರಂಭವಾಗಿ ಕೈ ಕೈ ಮಿಲಾಯಿಸುವಷ್ಟುಹಂತಕ್ಕೆ ತಿರುಗಿತು. ನಂತರ ಪೊಲೀಸರು ಸಮಾಧಾನ ಮಾಡಿದರು.
ಭಾಷಣದಲ್ಲಿ ಸಿ.ಟಿ ರವಿ ಸಂಬಂಧಿ ಹೆಸ್ರು ಪ್ರಸ್ತಾಪಿಸಿದ ಸಿದ್ದರಾಮಯ್ಯ
ಕಾಂಗ್ರೆಸ್ ಕಾರ್ಯಕರ್ತರ ಸಭೆಯ ನಂತರ ನಗರದ ಮಹಾವೀರ ವೃತ್ತದಿಂದ ಎನ್.ಆರ್. ವೃತ್ತ, ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಪ್ರತಿಭಟನಾ ಮೆರವಣಿಗೆಯು ತಹಸೀಲ್ದಾರ್ ನಟೇಶ್ ಅವರಿಗೆ ಮನವಿ ಸಲ್ಲಿಸಿತು. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಧೃವನಾರಾಯಣ್, ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಪುಷ್ಪ ಅಮರನಾಥ್, ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಮಾಜಿ ಸಚಿವ ಬಿ. ಶಿವರಾಮ್, ಎಚ್.ಕೆ. ಮಹೇಶ್, ಎಚ್.ಕೆ. ಜವರೇಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ, ಪುಟ್ಟೇಗೌಡ, ಮುಖಂಡರಾದ ಬನವಾಸೆ ರಂಗಸ್ವಾಮಿ, ದೇವರಾಜೇಗೌಡ, ರಾಮಚಂದ್ರ, ರಂಜಿತ್ ಗೊರೂರು ಇತರರು ಇದ್ದರು.
