ಅರ್ಕಾವತಿ ಪ್ರಕರಣದಲ್ಲಿ ಸಿದ್ದರಾಮಯ್ಯಗೆ ಜೈಲು ಖಚಿತ: ಕಟೀಲ್
ಅರ್ಕಾವತಿ ಕುರಿತು ಕೆಂಪಣ್ಣನವರ ವರದಿ ಲೋಕಾಯುಕ್ತಕ್ಕೆ ನೀಡಿ ತನಿಖೆ ಮಾಡಿ ತಪ್ಪಿತಸ್ತರನ್ನು ಜೈಲಿಗೆ ಹಾಕುತ್ತೇವೆ ಇದರಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಯ್ಯ ಪಾತ್ರ ಇದ್ದು ಅವರು ಜೈಲಿಗೆ ಹೋಗುತ್ತಾರೆ: ನಳಿನ್ ಕುಮಾರ್ ಕಟೀಲ್
ಲಿಂಗಸುಗೂರು(ಫೆ.26): ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೈಲಿಗೆ ಹೋಗುವುದು ಖಚಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಪಟ್ಟಣದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅರ್ಕಾವತಿ ಹಗರಣದ ಉರುಳಿನಿಂದ ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತ ಮುಚ್ಚಿಸಿ ಹಲ್ಲಿಲ್ಲದ ಎಸಿಬಿ ಹುಟ್ಟು ಹಾಕಿದರು. ಹಗರಣದ ಕುರಿತು ಕೆಂಪಣ್ಣ ನೀಡಿದ್ದ ವರದಿ ಮುಚ್ಚಿಟ್ಟರು. ಅರ್ಕಾವತಿ ಕುರಿತು ಕೆಂಪಣ್ಣನವರ ವರದಿ ಲೋಕಾಯುಕ್ತಕ್ಕೆ ನೀಡಿ ತನಿಖೆ ಮಾಡಿ ತಪ್ಪಿತಸ್ತರನ್ನು ಜೈಲಿಗೆ ಹಾಕುತ್ತೇವೆ ಇದರಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಯ್ಯ ಪಾತ್ರ ಇದ್ದು ಅವರು ಜೈಲಿಗೆ ಹೋಗುತ್ತಾರೆ ಎಂದು ಗುಡುಗಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಜನಾರ್ದನರೆಡ್ಡಿ ನೋಡಿಕೊಳ್ಳುವುದಾಗಿ ಎಲ್ಲೂ ಹೇಳಿಲ್ಲ. ಇದರ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ತಿವಿದರು. ಅಲ್ಲದೇ ಸಿ.ಟಿ. ರವಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ. ಸಿದ್ದರಾಮಯ್ಯ ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗಿದ್ದರು. ಇಬ್ಬರ ಪ್ರಕರಣದಲ್ಲಿ ಭಾರಿ ವ್ಯತ್ಯಾಸಗಳಿವೆ ಎಂದು ತಿಳಿಸಿದರು.
ಚುನಾವಣೇಲಿ ಸೋತು ಸಿದ್ರಾಮಯ್ಯ ಕಾಡಿಗೆ ಹೋಗ್ತಾರೆ, ಬಂಡೆ ಖ್ಯಾತಿಯ ಡಿಕೆಶಿ ಚೂರು ಚೂರಾಗ್ತಾರೆ: ಕಟೀಲ್
ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರವರ ಪ್ರವಾಸದಿಂದ ರಾಜ್ಯದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿದೆ. ಇದೇ 27ರಂದು ಶಿವಮೊಗ್ಗ ಮತ್ತು ಬೆಳಗಾವಿಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಸಿಎಂ ಬೊಮ್ಮಾಯಿ ಅತ್ಯುತ್ತಮ ಬಜೆಟ್ ಮಂಡನೆ ಮಾಡುವ ಜೊತೆಗೆ ಎಸ್.ಸಿ, ಎಸ್.ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಿ ದಲಿತ ಕಲ್ಯಾಣಕ್ಕೆ ಬಿಜೆಪಿ ಮುಂದಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಗೆಲ್ಲಲು ಮೂರು ತಂಡಗಳಲ್ಲಿ ರಾಜ್ಯದ ನಾನಾ ಭಾಗದಿಂದ ಜನ ಸಂಕಲ್ಪ ಯಾತ್ರೆ ಆರಂಭಿಸಲಾಗಿದೆ. ಬಿ.ಎಸ್ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ನನ್ನ ನೇತೃತ್ವದಲ್ಲಿ 3 ತಂಡಗಳಲ್ಲಿ ಯಾತ್ರೆ ನಡೆಸಿದ್ದೇವೆ. ಮಾಚ್‌ರ್‍ನಿಂದ ಬಿಜೆಪಿ ಪ್ರಗತಿ ರಥಯಾತ್ರೆ ಆರಂಭಿಸಲಾಗುವುದೆಂದು ತಿಳಿಸಿದರು.
ಈ ವೇಳೆ ಸಂಸದ ರಾಜಾ ಅಮರೇಶ್ವರ ನಾಯಕ, ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್, ಸಿದ್ದರಾಜು, ಮಾಜಿ ಶಾಸಕರಾದ ಪ್ರತಾಪ ಗೌಡ ಪಾಟೀಲ್, ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮಾಜಿ ಶಾಸಕ ಗಂಗಾಧರ ನಾಯಕ ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.