ಬೆಂಗಳೂರು, (ಏ.22): ಕೇಂದ್ರ ಸರ್ಕಾರ ಬಡವರಿಗೆ ನೀಡುವ ಅಕ್ಕಿಯನ್ನು ಬಳಸಿಕೊಂಡು ಸ್ಯಾನಿಟೈಸರ್ ತಯಾರಿಕೆ ಮಾಡುವುದು ಸರಿ ಅಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸ್ಯಾನಿಟೈಸರ್ ತಯಾರಿಕೆ ಮಾಡುವುದಕ್ಕೆ ಅದರದೇ ಆದ ಕಚ್ಚಾವಸ್ತುಗಳು ಇವೆ. ಅವುಗಳನ್ನು ಬಳಸಿಕೊಂಡು ಸ್ಯಾನಿಟೈಸರ್ ತಯಾರಿಕೆ ಮಾಡಲಿ. ಅದು ಬಿಟ್ಟು ಅಕ್ಕಿಯಿಂದ ಸ್ಯಾನಿಟೈಸರ್ ತಯಾರಿಕೆ ಸರಿ ಅಲ್ಲ. ಆ ಅಕ್ಕಿಯನ್ನು ಬಡವರಿಗೆ ಕೊಟ್ಟರೆ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಲಾಕ್ ಡೌನ್ ಸಡಿಲಿಸಿದ ಕರ್ನಾಟಕ ಸರ್ಕಾರ : ಯಾವುದಕ್ಕೆ ವಿನಾಯಿತಿ? ಯಾವುದಕ್ಕಿಲ್ಲ?

ಹಾಗೇನಾದರೂ ಅಕ್ಕಿ ಬಿಟ್ಟು ಬೇರೆ ವಸ್ತುಗಳಿಂದ ಸ್ಯಾನಿಟೈಸರ್ ತಯಾರಿಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಾದರೆ ಮಾತ್ರ ಅಕ್ಕಿಯಿಂದ ಮಾಡಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಭಾರತೀಯ ಆಹಾರ ನಿಗಮ (ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ – ಎಫ್ ಸಿ ಐ) ಬಳಿ ಹೆಚ್ಚುವರಿಯಾಗಿ ಉಳಿದಿರುವ ಅಕ್ಕಿಯನ್ನು ಬಳಸಿಕೊಂಡು ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದಿಸಲು ನಿರ್ಧರಿಸಿದೆ.