* ಬೇರೆ ಜಾತಿಯವರು ಸಂಘದ ಉನ್ನತ ಹುದ್ದೆಗೆ ಏಕೆ ಅಸ್ಪೃಶ್ಯರು?* ನನ್ನ ಪ್ರಶ್ನೆಗೆ ಉತ್ತರಿಸಲಾಗದಷ್ಟುದುರ್ಬಲ ಸಂಘವೇ ನಿಮ್ಮದು?* ಆರೆಸ್ಸೆಸ್‌, ಕಟೀಲ್‌ ವಿರುದ್ಧ ವಿರೋಧ ಪಕ್ಷದ ನಾಯಕ ಮತ್ತೆ ಕಿಡಿ

ಬೆಂಗಳೂರು (ಮೇ.31): ನಿಮ್ಮ ಸಂಘದಲ್ಲಿ ಒಂದು ಜಾತಿಯ ಪದಾಧಿಕಾರಿಗಳು ಮಾತ್ರ ಯಾಕಿದ್ದಾರೆ? ದಲಿತರು, ಹಿಂದುಳಿದವರು ಸೇರಿದಂತೆ ಬೇರೆ ಜಾತಿಗಳಿಗೆ ಯಾಕೆ ಅವಕಾಶ ಇಲ್ಲ ಎಂಬ ಸರಳ ಪ್ರಶ್ನೆಗೆ ಆರ್‌ಎಸ್‌ಎಸ್‌ನಲ್ಲಿ ಉತ್ತರ ಇಲ್ಲ. ಇದೇ ಈ ಸಂಘಟನೆಯ ಡೋಂಗಿತನಕ್ಕೆ ಸಾಕ್ಷಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಆರ್‌ಎಸ್‌ಎಸ್‌ ವಿರುದ್ಧ ಕಿಡಿಕಾರಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೌರವಾನ್ವಿತ ನಾಯಕರಲ್ಲಿ ಮತ್ತೊಮ್ಮೆ ಮನವಿ ಮಾಡುತ್ತೇನೆ. ಹಿಂದೂಗಳೆಲ್ಲ ಒಂದು ಎನ್ನುವ ನಿಮ್ಮ ಸಂಘದ ಉನ್ನತ ಪದಾಧಿಕಾರ ಯಾಕೆ ಒಂದು ಜಾತಿಗೆ ಸೀಮಿತವಾಗಿದೆ? ಉಳಿದ ಜಾತಿಗಳು ಯಾಕೆ ಅಸ್ಪೃಶ್ಯವಾಗಿವೆ? ದಯವಿಟ್ಟು ಉತ್ತರಿಸಿ ಎಂದು ಸವಾಲು ಎಸೆದಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ನನ್ನ ಸರಳ ಪ್ರಶ್ನೆಗೆ ಉತ್ತರಿಸಲಾಗದ ಆರ್‌ಎಸ್‌ಎಸ್‌ ಸಂಘಟನೆಯು ಬಿಜೆಪಿಯ ಕೂಗುಮಾರಿಗಳನ್ನು ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಲು ಛೂ ಬಿಟ್ಟಿದೆ. 97 ವರ್ಷಗಳ ಇತಿಹಾಸವಿರುವ ಆರ್‌ಎಸ್‌ಎಸ್‌ ನನ್ನದೊಂದು ಸರಳ ಪ್ರಶ್ನೆಗೆ ಉತ್ತರಿಸಲಾಗದಷ್ಟುದುರ್ಬಲ ಸಂಘಟನೆಯೇ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯ ಒಬ್ಬ ನಾಯಕರು ಆರ್‌ಎಸ್‌ಎಸ್‌ ಶಾಖೆಗೆ ಬನ್ನಿ ಎಂದು ಕರೆಯುತ್ತಿದ್ದಾರೆ. ಇನ್ನೊಬ್ಬರು ಆರ್‌ಎಸ್‌ಎಸ್‌ ಪುಸ್ತಕ ಓದಿ ಎಂದು ಸಲಹೆ ನೀಡಿದ್ದಾರೆ. ಅಲ್ಲಿಗೆ ಹೋಗಿ ಓದಿ ಏನನ್ನು ಕಲಿಯಬೇಕು? 40% ಕಮಿಷನ್‌ ಹೊಡೆಯುವುದಾ? ದುಡ್ಡು ಪಡೆದು ಪಕ್ಷಾಂತರ ಮಾಡುವುದಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Vijayanagara: ಬೂಟು ನೆಕ್ಕುವ ಚಾಳಿ ಇರೋ ಸಿದ್ದರಾಮಯ್ಯ: ನಳಿನ್‌ ಕುಮಾರ್‌ ಕಟೀಲ್‌ ವಾಗ್ದಾಳಿ!

ನಳಿನ್‌ ಕುಮಾರ್‌ ಕಟೀಲ್‌ ಬಗ್ಗೆ ಕಿಡಿ: ಆರ್‌ಎಸ್‌ಎಸ್‌ ಶಾಖೆಗಳಿಗೆ ಹೋದರೆ ಏನಾಗುತ್ತದೆ ಎನ್ನುವುದಕ್ಕೆ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರೇ ಜೀವಂತ ಉದಾಹರಣೆ. ಸಂಸ್ಕೃತಿ, ಸಂಸ್ಕಾರ, ಸಚ್ಚಾರಿತ್ರ್ಯದಂತಹ ಮೌಲ್ಯಗಳಿಗೂ ನಿತ್ಯ ಶಬ್ದಭೇದಿ ಮಾಡುತ್ತಿರುವ ಕಟೀಲ್‌ ಅವರಿಗೂ ಏನಾದರೂ ಸಂಬಂಧವಿದೆಯೇ? ಬಿಜೆಪಿ ನಾಯಕರ ಮಾತುಗಳಿಂದಲೇ ಆರ್‌ಎಸ್‌ಎಸ್‌ ತನ್ನ ಸ್ವಯಂಸೇವಕರಿಗೆ ಕಲಿಸಿಕೊಡುವ ಸಂಸ್ಕಾರ-ಸಂಸ್ಕೃತಿ ಏನು ಎಂಬುದು ತಿಳಿಯುತ್ತದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?: ರೋಹಿತ್ ಚಕ್ರತೀರ್ಥ ಎನ್ನುವ ಒಬ್ಬನಿಗೆ ಮಕ್ಕಳ ಪಠ್ಯ ಪುಸ್ತಕ ರೂಪಿಸುವ ಜವಾಬ್ದಾರಿ ನೀಡಲಾಗಿದೆ. ಇದಕ್ಕಿಂತ ಮೂರ್ಖತನವನ್ನು ನಾನು ನೋಡಿಲ್ಲ. ಈತ ಹೆಡಗೇವಾರ್‌ಗಿಂತ ಒಂದು ಹೆಜ್ಜೆ ಮುಂದಿದ್ದಾನೆ. ಅಪ್ರತಿಮ ದೇಶಭಕ್ತ ಭಗತ್‌ಸಿಂಗ್ ಪಠ್ಯವನ್ನು ತೆಗೆದು ಹೆಡಗೇವಾರ್ ಭಾಷಣ ಹಾಕಿದ್ದಾನೆ. ಭಗತ್‌ಸಿಂಗ್ ಗಿಂತ ದೇಶಭಕ್ತ ಬೇಕಾ? ಇದನ್ನು ಯಾರಾದರೂ ಪ್ರಶ್ನಿಸಿದರೆ ದೇಶ ಬಿಟ್ಟು ಹೋಗಿ ಎನ್ನುತ್ತಾರೆ. ಯಾರು ದೇಶ ಬಿಟ್ಟು ಹೋಗಬೇಕಾದವರು?

ಸಾರ್ವರಕರ್ ಸೇನೆ ಸೇರುವಂತೆ ಕರೆ ನೀಡಿದ್ರು, ಮಹಾತ್ಮ ಗಾಂಧಿ ಏನ್ ಮಾಡಿದ್ರು? ಸಿ.ಟಿ ರವಿ ಪ್ರಶ್ನೆ

ಆರ್‌ಎಸ್‌ಎಸ್ ಈ ದೇಶದ್ದಾ ? ಅವರೇನು ದ್ರಾವಿಡರಾ ? ದ್ರಾವಿಡರು ಈ ದೇಶದವರು. ಇದನ್ನೆಲ್ಲಾ ಪ್ರಶ್ನಿಸುತ್ತಾ ಹೋದರೆ ಏನಾಗುತ್ತದೆ ಗೊತ್ತಾ ? ಅದಕ್ಕೆ ಚರಿತ್ರೆಯನ್ನು ಕೆದಕಲು ಹೋಗಬಾರದು. ಈ ಬಗ್ಗೆ ನಾನು ಮಾತನಾಡುವುದಿಲ್ಲ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು, “ಚರಿತ್ರೆ ಗೊತ್ತಿಲ್ಲದವರು ಭವಿಷ್ಯ ರೂಪಿಸಲಾರರು” ಎಂದು ಹೇಳಿದ್ದರು. ಆರ್ ಎಸ್ ಎಸ್ ನವರಿಗೆ ನಿಜವಾದ ಚರಿತ್ರೆ ಮತ್ತು ಇತಿಹಾಸದ ಬಗ್ಗೆ ಬಹಳ ಭಯ ಇದೆ. ನಿಜವಾದ ಚರಿತ್ರೆ ದೇಶದ ದುಡಿಯುವ ವರ್ಗಗಳು, ಶ್ರಮಿಕರು ಮತ್ತು ದ್ರವೀಡರು ಅರಿತುಕೊಂಡರೆ ಏನಾಗಬಹುದು ಎನ್ನುವುದು ಅವರಿಗೆ ಗೊತ್ತಿದೆ. ಈ ಕಾರಣಕ್ಕೇ ಇತಿಹಾಸವನ್ನು ತಿರುಚುತ್ತಾರೆ. ಪಠ್ಯ ಪುಸ್ತಕಗಳ ಸಮಿತಿಗೆ ಚಕ್ರತೀರ್ಥನಂತವರನ್ನು ಹಾಕುವುದೇ ಈ ಉದ್ದೇಶಗಳಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.