ಬೆಂಗಳೂರು(ಅ.31): ರಾಜ್ಯ ಸರ್ಕಾರ ಅರ್ಥಿಕವಾಗಿ ದಿವಾಳಿಯಾಗಿದ್ದು ಸಮರ್ಥವಾಗಿ ಆಡಳಿತ ನಡೆಸಲು ಸಾಧ್ಯವಾಗದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರ ಬಿಟ್ಟು ಕೆಳಗಿಳಿಯಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕುಸುಮಾ ಪರ ರೋಡ್‌ ಶೋ ಮೂಲಕ ಪ್ರಚಾರ ನಡೆಸಿದ ಅವರು, ಬಿಜೆಪಿ ಸರ್ಕಾರ ಅನೈತಿಕ ಕೂಸು. ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ಕೊರೋನಾ ಮತ್ತು ನೆರೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿಯೂ ವಿಫಲವಾಗಿರುವ ಬಿಜೆಪಿ ಸರ್ಕಾರ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದೆ ಎಂದು ಆರೋಪಿಸಿದರು.

ಈ ಚುನಾವಣೆ ರಾಜಕೀಯ ಧರ್ಮಯುದ್ಧ: ಡಿ.ಕೆ.ಶಿವಕುಮಾರ್‌

ಕಳೆದ ವರ್ಷದ ನೆರೆ ಪರಿಹಾರವನ್ನೇ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಜತೆಗೆ ಕೊರೋನಾ ಪರಿಹಾರವನ್ನೂ ಕೊಟ್ಟಿಲ್ಲ. ಕೇಂದ್ರ ಸರ್ಕಾರದಿಂದ ಜಿಎಸ್‌ಟಿ ರಾಜ್ಯದ ಪಾಲು ತರುವಲ್ಲಿಯೂ ವಿಫಲವಾಗಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಲಂಚದ ಹಾವಳಿ ವಿಜೃಂಭಿಸುತ್ತಿದ್ದು, ಭ್ರಷ್ಟಾಚಾರ ಪಾರದರ್ಶಕವಾಗಿ ನಡೆಯುತ್ತಿದೆ. ಇಂತಹ ಸರ್ಕಾರಕ್ಕೆ ಉಪ ಚುನಾವಣೆ ಫಲಿತಾಂಶ ಎಚ್ಚರಿಕೆ ಗಂಟೆ ಆಗಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರ ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು ಕಡಿತ ಮಾಡಿದೆ. ಅದರ ಜತೆಗೆ ವಿತರಣೆ ಆಗುತ್ತಿರುವ ಆಹಾರ ಪದಾರ್ಥಗಳು ಕಲಬೆರಕೆ ಆಗುತ್ತಿವೆ. ಶಿರಾಕ್ಕೆ ಹೋದಾಗ ಸರ್ಕಾರ ಕೊಡುತ್ತಿರುವ ರಾಗಿಯನ್ನು ಕೋಳಿ ಸಹ ತಿನ್ನುವುದಿಲ್ಲ. ಅಷ್ಟುಕಲ್ಲು, ಕಡ್ಡಿಗಳಿವೆ ಎಂದು ಜನ ಹಿಡಿ ಶಾಪ ಹಾಕುತ್ತಿದ್ದರು. ನಾಡಿನ ಜನ ಸಾಮಾನ್ಯರಿಗೆ ಅನ್ಯಾಯ ಮಾಡುತ್ತಿರುವ ಈ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.