'ಮಸ್ಕಿ ಚುನಾವಣೆಗೆ ಬಿಜೆಪಿಯಿಂದ 50 ಕೋಟಿ ಖರ್ಚು, ಪ್ರತಾಪಗೌಡ 30 ಕೋಟಿ ರೂ. ಗೆ ಸೇಲ್'
ಪ್ರತಾಪಗೌಡ .30 ಕೋಟಿಗೆ ಸೇಲ್: ಸಿದ್ದು| ಮಸ್ಕಿ ಚುನಾವಣೆಗೆ ಬಿಜೆಪಿಯಿಂದ 50 ಕೋಟಿ ಖರ್ಚು| ಸಿದ್ದು, ಡಿಕೆಶಿಯಿಂದ ಕ್ಷೇತ್ರದಲ್ಲಿ ಮಿಂಚಿನ ಸಂಚಾರ| 3 ಗ್ರಾಮಗಳಲ್ಲಿ ರೋಡ್‌ಶೋ, ಬಹಿರಂಗ ಸಮಾವೇಶ
ರಾಯಚೂರು(ಏ.06): ಸಂತೆಯಲ್ಲಿ ಎಮ್ಮೆ, ದನ, ಕುರಿ, ಮೇಕೆ, ಕೋಳಿ ಹೇಗೆ ಮಾರಾಟ ಮಾಡುತ್ತಾರೋ ಅದೇ ರೀತಿ ಪ್ರತಾಪ್‌ಗೌಡ 30 ಕೋಟಿ ರು.ಗೆ ಸೇಲಾಗಿದ್ದಾರೆ. ಜೊತೆಗೆ ಬಿಜೆಪಿ ರಾಜ್ಯ ಸರ್ಕಾರ ಲೂಟಿ ಹೊಡೆದ ದುಡ್ಡನ್ನು ಉಪಚುನಾವಣೆಗೆ ಬಳಸಲಾಗುತ್ತಿದ್ದು ಮಸ್ಕಿಯಲ್ಲಿ 50 ಕೋಟಿ ರು. ಖರ್ಚು ಮಾಡುತ್ತಿದೆ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಉಪಚುನಾವಣೆ ನಡೆಯಲಿರುವ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಿಂಚಿನ ಸಂಚಾರ ನಡೆಸಿದ ಅವರು ಕಲ್ಮಂಗಿ, ಉಮಲೂಟಿ, ತುರ್ವಿಹಾಳ ಗ್ರಾಮಗಳಲ್ಲಿ ರೋಡ್‌ಶೋ, ಪ್ರಚಾರ ಸಭೆಗಳನ್ನು ನಡೆಸಿ ಮಾತನಾಡಿದರು. ಸಂತೆಯಲ್ಲಿ ಎಮ್ಮೆ, ದನ, ಕುರಿ, ಕೋಳಿ, ಮೇಕೆಗಳನ್ನು ಮಾರಾಟ ಮಾಡೋದು ನೋಡಿದ್ದೇವೆ. ಆದರೆ ಕೇವಲ ಹಣದಾಸೆಗಾಗಿ ತಮ್ಮನ್ನೇ ತಾವು ಮಾರಿಕೊಂಡಿರುವುದಲ್ಲದೆ, ಪರೋಕ್ಷವಾಗಿ ಕ್ಷೇತ್ರದ ಮತದಾರರಿಗೆ ಅವಮಾನ ಮಾಡಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಯುವಕರಿಗೆ 6 ಸಾವಿರ ರು. ಮಾಸಾಶನ ನೀಡಲಾಗುವುದು ಎಂದು ಘೋಷಿಸಿದರು. ಇದೇವೇಳೆ ಪ್ರತಾಪ್‌ಗೌಡ ಪಾಟೀಲ್ ವಿರುದ್ಧ ಹರಿಹಾಯ್ದ ಅವರು, ಅಧಿಕಾರ ಹಾಗೂ ಹಣದ ದಾಹಕ್ಕಾಗಿ ಪ್ರತಾಪಗೌಡ ಪಾಟೀಲ್ ರಾಜೀನಾಮೆ ಸಲ್ಲಿಸಿದ್ದಾರೆ.
ಬಸವ ಕಲ್ಯಾಣ ಹಾಗೂ ಬೆಳಗಾವಿ ಕ್ಷೇತ್ರಗಳಲ್ಲಿ ಶಾಸಕ ಹಾಗೂ ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದಾಗಿ ಚುನಾವಣೆಗಳು ಬಂದಿವೆ. ಆದರೆ ಮಸ್ಕಿ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿರುವುದು ಪ್ರತಾಪಗೌಡರ ದುರಾಸೆಯಿಂದಾಗಿ. ಮಸ್ಕಿ ಕ್ಷೇತ್ರದ ಜನತೆ ಪ್ರತಾಪಗೌಡರಿಗೆ ಅಧಿಕಾರಕೊಟ್ಟರೂ ಸದ್ಬಳಕೆ ಮಾಡಿಕೊಳ್ಳಲಿಲ್ಲ. ಕೊಟ್ಟಕುದುರೆಯನ್ನು ಏರದವನು ವೀರನು ಅಲ್ಲ, ಧೀರನು ಅಲ್ಲ ಎಂದು ವ್ಯಂಗ್ಯವಾಡಿದರು.