ಬೆಂಗಳೂರು[ಮಾ.15]: ಮಾರಣಾಂತಿಕ ಕೊರೋನಾ ವೈರಸ್‌ ನಿರ್ವಹಣೆಗೆ ಕೇಂದ್ರ ಸರ್ಕಾರ ಪ್ರತ್ಯೇಕ ಬಜೆಟ್‌ ಮಂಡಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ವೈರಸ್‌ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಕೇಂದ್ರ ಸರ್ಕಾರದ ನಾಯಕರು ಕೇವಲ ಭಾಷಣ ಬಿಗಿಯುತ್ತಾರೆ. ಆದರೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಕೊರೋನಾ ಸೋಂಕು ತಡೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತ್ಯೇಕ ನಿಧಿ ಮೀಸಲಿಟ್ಟಿದ್ದಾರೆ. ಅಂತೆಯೇ ಕೇಂದ್ರ ಸರ್ಕಾರ ಪ್ರತ್ಯೇಕ ಬಜೆಟ್‌ ಮಂಡಿಸಿ ಎಲ್ಲ ರಾಜ್ಯಗಳಿಗೂ ಸೋಂಕು ನಿರ್ವಹಣೆಗೆ ಹಣ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

'ತಂಗಿ ಶವದೊಂದಿಗೆ 2 ದಿನದಿಂದ ಮನೆಯಲ್ಲಿದ್ದೇನೆ, ಏನು ಮಾಡ್ಬೇಕಂತ ತಿಳೀತಿಲ್ಲ!'

ರಾಜ್ಯ ಸರ್ಕಾರ ಸೋಂಕು ನಿಯಂತ್ರಿಸಲು ತುರ್ತು ಪರಿಸ್ಥಿತಿ ಘೋಷಿಸಿದರೆ ಸಾಲದು. ಅದಕ್ಕೆ ತಕ್ಕಂತೆ ಮುಂಜಾಗ್ರತೆ, ಸುರಕ್ಷತಾ ಕ್ರಮಗಳ್ಳನ್ನು ಕೈಗೊಳ್ಳಬೇಕು. ಕೊರೋನಾ ಬಗ್ಗೆ ಜನರು ಭಯಭೀತರಾಗಿದ್ದಾರೆ. ಕೊರೋನಾ ಲಕ್ಷಣಗಳಿದ್ದರೆ ಮಾತ್ರ ಭಯಪಡಬೇಕು. ಇಲ್ಲದಿದ್ದರೆ ಆತಂಕಪಡುವ ಅಗತ್ಯವಿಲ್ಲ. ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಳ್ಳುವ ಎಲ್ಲ ಕಾರ್ಯಗಳಿಗೆ ಕಾಂಗ್ರೆಸ್‌ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.

ರಾಜ್ಯದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡು ವಾರ ಕಳೆದಿದೆ. ಐವರಿಗೆ ರೋಗ ದೃಢಪಟ್ಟಿದೆ. ರಕ್ತ ಮಾದರಿ ಪರೀಕ್ಷೆಗೆ ರಾಜ್ಯದಲ್ಲಿರುವುದೇ ಐದು ಪ್ರಯೋಗಾಲಯಗಳು. ಜಿಲ್ಲಾ ಕೇಂದ್ರಗಳಲ್ಲಿ ಪ್ರಯೋಗಾಲಯ ವ್ಯವಸ್ಥೆ ಇಲ್ಲ. ವಿಮಾನ ನಿಲ್ದಾಣವಿರುವ ಜಿಲ್ಲಾ ಕೇಂದ್ರಗಳಲ್ಲಿಯೂ ಇಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡು ಕೊರೋನಾ ವೈರಸ್‌ ಸೋಂಕು ಪತ್ತೆಗೆ ಹೆಚ್ಚಿನ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ವಿದೇಶಗಳಿಂದ ಬಂದವರಿಂದ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಸ್ಥಳೀಯರಿಂದ ಎಲ್ಲೂ ಸೋಂಕು ಹರಡಿಲ್ಲ. ಹೊರದೇಶದಿಂದ ಬಂದ ಮಗನಿಂದ ಸೋಂಕು ಹರಡಿ ದೆಹಲಿ ಮಹಿಳೆ ಮೃತಪಟ್ಟಿದ್ದಾರೆ. ಕಲಬುರಗಿಯಲ್ಲಿ ಮೃತಪಟ್ಟವ್ಯಕ್ತಿಯೂ ಸೌದಿಯಿಂದ ಬಂದಿದ್ದರು. ಇಲ್ಲಿಯವರಿಗೆ ಕೊರೋನಾ ಸ್ಥಳೀಯರಿಂದ ಬಂದಿಲ್ಲ. ಹೀಗಾಗಿ ಮಾಧ್ಯಮಗಳು ವಾಸ್ತವ ಸುದ್ದಿಗಳನ್ನು ಮಾತ್ರ ಬಿತ್ತರಿಸಬೇಕು. ಈ ಕುರಿತು ಸಾರ್ವಜನಿಕರಲ್ಲಿ ಪ್ರಚೋದನಕಾರಿ ಸುದ್ದಿಗಳನ್ನು ಮಾಡಬೇಡಿ. ಜನರು ಈಗಾಗಲೇ ಭಯಗೊಂಡಿದ್ದು, ಅವರನ್ನು ಇನ್ನಷ್ಟುಭಯಬೀಳಿಸುವುದು ಬೇಡ. ಕೊರೋನಾ ಸೋಂಕುಗಳ ಬಗ್ಗೆ ಎಚ್ಚರಿಕೆಯಿಂದ ವರದಿಗಳನ್ನು ಮಾಡುವಂತೆ ಮನವಿ ಮಾಡಿದರು.