ಬೆಳಗಾವಿ(ಅ.19): ನಳಿನ್‌ ಕುಮಾರ್ ಕಟೀಲ್‌ ಒಬ್ಬ ಯಃಕಶ್ಚಿತ್ ರಾಜಕಾರಣಿಯಾಗಿದ್ದಾರೆ. ಬಿಜೆಪಿ ರೂಲಿಂಗ್ ಪಾರ್ಟಿ ಅಧ್ಯಕ್ಷ ಜವಾಬ್ದಾರಿಯುತವಾಗಿ ಮಾತನಾಡಬೇಕು. ಏನೂ ಮಾತನಾಡಬೇಕೆಂಬ ಅರಿವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದಾರಮಯ್ಯ ಟಾಂಗ್‌ ಕೊಟ್ಟಿದ್ದಾರೆ. 

ಕಾಂಗ್ರೆಸ್‌ನ್ನು ಜನ ಸಮುದ್ರದಲ್ಲಿ ಬೀಸಾಕ್ತಾರೆ ಎಂಬ ನಳಿನ್‌ಕುಮಾರ್ ಕಟೀಲ್ ಹೇಳಿಕೆ ವಿಚಾರದ ಬಗ್ಗೆ ಇಂದು(ಸೋಮವಾರ) ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಾರ್ಟಿನಾ ಅರಬ್ಬಿ ಸಮುದ್ರಕ್ಕೆ ಬೀಸಾಕ್ತಾರಂತೆ. ಓಲ್ಡೆಸ್ಟ್ ಪಾಲಿಟಿಕಲ್ ಪಾರ್ಟಿ ಇದ್ರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಕಾಂಗ್ರೆಸ್‌ ಪಕ್ಷದ ಬಗ್ಗೆ ಕಟೀಲ್‌ಗೆ ಏನು ಗೊತ್ತಿದೆ ಎಂದು ಟೀಕಿಸಿದ್ದಾರೆ. 

'ಸರ್ಕಾರದ ವಿರುದ್ಧ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ'

ಸಿದ್ದರಾಮಯ್ಯ ಸರ್ಕಾರ ಇದ್ದಾಗ 3 ಸಾವಿರ ರೈತರ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ನಳಿನ್‌ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಾ ಕಾಲದಲ್ಲೂ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2014 ರಿಂದ 2016ರವರೆಗೆ ಎರಡು ವರ್ಷಗಳ ಕಾಲ ಭೀಕರ ಬರಗಾಲ ಎದರಾಗಿತ್ತು. ಇವರ ಕಾಲದಲ್ಲಿ ಆತ್ಮಹತ್ಯೆ ನಿಂತು ಹೋಗಿದೆಯಾ? ನೇಕಾರರು, ರೈತರ ಆತ್ಮಹತ್ಯೆ ಏಕೆ ಆಗುತ್ತಿದೆ ಅಂತಾ ಕಟೀಲ್ ಹೇಳಬೇಕಲ್ಲಾ? ಎಂದು ಪ್ರಶ್ನಿಸಿದ್ದಾರೆ. 
ನಮ್ಮ ಸರ್ಕಾರ ಇದ್ದಾಗ ಅನುದಾನ ಕೊರತೆ ಇತ್ತಾ ಬಿಜೆಪಿ, ಜೆಡಿಎಸ್ ಎಂಎಲ್‌ಎಗಳನ್ನು ಕೇಳಿ. ನನ್ನ ಸರ್ಕಾರದಲ್ಲಿ ಯಾವತ್ತೂ ಕೂಡ ಅನುದಾನಕ್ಕೆ ಕೊರತೆ ಇರಲಿಲ್ಲ ಎಂದು ಹೇಳಿದ್ದಾರೆ.