ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಮಂಡಳಿಯಲ್ಲಿ ಸ್ಥಾನ ಕಲ್ಪಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೋರ್ಡಿಂಗ್‌ ಪಾಸ್‌ ಇದ್ದಂತೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಬೆಂಗಳೂರು (ಜು.07): ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಮಂಡಳಿಯಲ್ಲಿ ಸ್ಥಾನ ಕಲ್ಪಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೋರ್ಡಿಂಗ್‌ ಪಾಸ್‌ ಇದ್ದಂತೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಟೇಕಾಫ್‌ ಆಗಿಲ್ಲ. ಶಾಸಕರೆಲ್ಲರೂ ತಿರುಗಿಬಿದ್ದಿದ್ದಾರೆ. ಶಾಸಕರು ಸಿದ್ದರಾಮಯ್ಯ ಅವರ ಪರವಾಗಿ ಇಲ್ಲ ಎಂಬುದು ಅವರ ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರ ಸಭೆಯಿಂದ ಗೊತ್ತಾಗಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೇಂದ್ರಕ್ಕೆ ಹೋಗುವುದು ಗ್ಯಾರಂಟಿ ಎಂದರು. ಮುಖ್ಯಮಂತ್ರಿಗಳ ಹುದ್ದೆಗೆ ಎರಡೂವರೆ ವರ್ಷಗಳ ಅಗ್ರಿಮೆಂಟ್‌ ನಡೆದಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಸಿದ್ಧತೆ ನಡೆದಿದೆ. ಕಳೆದ ಆರು ತಿಂಗಳಿಂದ ನಾನು ಇದನ್ನೇ ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಅವರನ್ನು ಅತಂತ್ರ ಮಾಡಲು ಕುತಂತ್ರ ನಡೆದಿದೆ. ನಾನು ಹೇಳಿದ್ದ ಜ್ಯೋತಿಷ್ಯ ನಿಜವಾಗಿದೆ. ಕಾಂಗ್ರೆಸ್‌ನ ಶಾಸಕರು ರಾಜಾರೋಷವಾಗಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾತೊಡಗಿದ್ದಾರೆ ಎಂದು ತಿಳಿಸಿದರು.

ಸರ್ಕಾರ ಶೀಘ್ರ ಪತನ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಟೇಬಲ್ ಕೆಳಗಿನಿಂದ ಮನಿ (ಹಣ) ಕೊಟ್ಟವರಿಗೆ ಮನೆ ನೀಡುತ್ತದೆ. ಇದು ನುಡಿದಂತೆ ನಡೆಯುವ ಸರ್ಕಾರ ಅಲ್ಲ. ಸಿಕ್ಕ ಸಿಕ್ಕಲ್ಲಿ ಕಮಿಷನ್ ಹೊಡೆಯುವ 60 ಪರ್ಸೆಂಟ್ ಸರ್ಕಾರ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದರು. ರಾಜ್ಯದಲ್ಲಿ ಬಡವರು ದುಡ್ಡು ಕೊಟ್ಟು ಮನೆ ಪಡೆಯುವ ಸ್ಥಿತಿ ಬಂದಿದೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸ್ವಪಕ್ಷದ ಶಾಸಕರಾದ ಪಾಟೀಲರು, ರಾಜು ಕಾಗೆ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸಾಗರ ಶಾಸಕ ಗೋಪಾಲಕೃಷ್ಣ ಅವರೇ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಟಿಪ್ಪು ಸಂಸ್ಕೃತಿಯನ್ನು ರಾಜ್ಯದ ಮೇಲೆ ಹಾಕುತ್ತಿದ್ದಾರೆ ಎಂದರು.

ದಲಿತರಿಗೆ, ಎಸ್ಟಿಗಳಿಗೆ ಮೀಸಲಾತಿ ಕೊಡಬೇಕೆಂಬುದು ಸಂವಿಧಾನದಲ್ಲಿ ಇದೆ. ಈ ದರಿದ್ರ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ನಿಧನರಾದಾಗ ಜಾಗ ಕೊಟ್ಟಿಲ್ಲ. ದಿಲ್ಲಿಯಿಂದ ಮುಂಬೈಗೆ ಮೃತದೇಹ ತರಲು ಹಣ ಕೊಡಲಿಲ್ಲ. ರಾಜ್ಯದಲ್ಲಿ ಆದಷ್ಟು ಬೇಗ ಕಾಂಗ್ರೆಸ್ ಸರ್ಕಾರ ಪತನಗೊಳ್ಳುತ್ತದೆ. ಅಕ್ಟೋಬರ್ ನವೆಂಬರ್‌ನಲ್ಲಿ ಯಾರೇ ಸಿಎಂ ಆದರೂ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದರು. ಸಂಸದ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯ ಸರ್ಕಾರ ಎರಡು ವರ್ಷಗಳ ಅವಧಿಯಲ್ಲಿ ಭ್ರಷ್ಟಾಚಾರ ಹಗರಣದಲ್ಲಿ ಮುಳುಗಿ ಹೋಗಿದೆ. ಸ್ವಾತಂತ್ರ‍್ಯ ಬಂದು 75 ವರ್ಷ ಕಳೆದರೂ ಇಂತಹ ಅನಿಷ್ಟ ಸರ್ಕಾರ ನೋಡಿರಲಿಲ್ಲ ಎಂದರು.