ಸಿದ್ದರಾಮಯ್ಯ ಮತ್ತೆಂದು ರಾಜ್ಯಕ್ಕೆ ಮುಖ್ಯಮಂತ್ರಿಯಾಗುವುದಿಲ್ಲ. ಇದು ಅವರ ಕನಸು ಎಂದು ಮುಖಂಡರೋರ್ವರು ಭವಿಷ್ಯ ನುಡಿದಿದ್ದಾರೆ.

ಬೆಂಗಳೂರು (ಆ.20): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಜನ್ಮದಲ್ಲಿ ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸುವ ಹುನ್ನಾರ ನಡೆಸಲಾಗುತ್ತಿದೆ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಬುಧವಾರ ವಿಧಾನಸೌಧದಲ್ಲಿ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಕುರ್ಚಿ ಮೇಲೆ ವ್ಯಾಮೋಹ ಹೋಗಿಲ್ಲ. ಈ ಜನ್ಮದಲ್ಲಿ ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ. ಸಿದ್ದರಾಮಯ್ಯ ಹೇಳಿಕೆಯು ಬಾಲಿಶ ಹೇಳಿಕೆಯಾಗಿದೆ ಎಂದು ಟೀಕಾಪ್ರಹಾರ ನಡೆಸಿದರು.

ಬಿಜೆಪಿ-ಕೆಜೆಪಿ ಪರಿಣಾಮ ಸಿದ್ದರಾಮಯ್ಯ ಆಕಸ್ಮಿಕವಾಗಿ ಮುಖ್ಯಮಂತ್ರಿಯಾದರು. ಆ ಸ್ಥಾನವನ್ನು ಅವರು ಉಳಿಸಿಕೊಂಡಿಲ್ಲ. ಕಾಂಗ್ರೆಸ್‌ ಪಕ್ಷವನ್ನು ಮುಳುಗಿಸಿದರು. ಸಿದ್ದರಾಮಯ್ಯ ಅವಧಿಯಲ್ಲಿಯೇ ಗುಂಪುಗಾರಿಕೆ ಹೆಚ್ಚಾಗಿದೆ. ಹಿಂದು-ಮುಸ್ಲಿಮರ ನಡುವೆ ಬೆಂಕಿ ಹಚ್ಚಿದ್ದು, ನೆಮ್ಮದಿಯಾಗಿ ಬದುಕಲು ಬಿಡಬೇಕು. ಅವರಿಂದಲೇ ಧರ್ಮಗಳ ನಡುವೆ ಗಲಭೆಗಳು ನಡೆಯುತ್ತಿದೆ. ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಹೇಳಿಕೆಯು ಕಾಂಗ್ರೆಸ್‌ನವರಿಗೆ ನಾಚಿಕೆಯಾಗಬೇಕು. ನಮ್ಮ ನಾಯಕರು ಯಾರೂ ನನ್ನ ಬೆಂಬಲಕ್ಕೆ ಬಂದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಡಿ.ಜೆ.ಹಳ್ಳಿಯಲ್ಲಿ ನಡೆದಿರುವ ಘಟನೆಯು ಕೋಮುಗಲಭೆಯಲ್ಲ, ಅದು ಮತಾಂಧರ ದೊಂಬಿ. ಈ ಘಟನೆಯನ್ನು ಕಾಂಗ್ರೆಸ್‌ ಖಂಡಿಸಿಲ್ಲ ಎಂದು ಅವರು ಹರಿಹಾಯ್ದರು.

ಬಿಜೆಪಿ ಸರ್ಕಾರ ಪತನವಾಗಲಿ ಎಂದು ಕಾಂಗ್ರೆಸ್‌ ಈ ಕುತಂತ್ರ ಮಾಡುತ್ತಿದೆ. ಈಗ ಅನೇಕ ಉಗ್ರಗಾಮಿಗಳು ಹೊರಗೆ ಬರುತ್ತಿದ್ದಾರೆ. ಈ ಉಗ್ರಗಾಮಿಗಳನ್ನು ನಮ್ಮ ಸರ್ಕಾರ ಮಟ್ಟಹಾಕಲಿದೆ. ಉಳಿದಿರುವ ಅವಧಿಗೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಸಿದ್ದರಾಮಯ್ಯ ತಮ್ಮ ಅಸ್ತಿತ್ವಕ್ಕೋಸ್ಕರ ಟ್ವೀಟ್‌ ಮಾಡುತ್ತಿದ್ದಾರಾ ಅಥವಾ ಬೇರೆಯವರು ಟ್ವೀಟ್‌ ಮಾಡುತ್ತಿದ್ದಾರಾ ಎಂದು ಈಶ್ವರಪ್ಪ ಕಿಡಿಕಾರಿದರು.