Asianet Suvarna News Asianet Suvarna News

ಬೊಮ್ಮಾಯಿ ನಾಯಿಮರಿ ಹೇಳಿಕೆ ಸಮರ್ಥಿಸಿದ ಸಿದ್ದು

ಮೋದಿ ಎದುರು ತುಟಿ ಬಿಚ್ಚದ ಬೊಮ್ಮಾಯಿಯನ್ನು ಹುಲಿ-ಸಿಂಹಕ್ಕೆ ಹೋಲಿಸಲಾಗುತ್ತಾ?. ರಾಜ್ಯಕ್ಕೆ ಅನ್ಯಾಯವಾದರೂ ತುಟಿ ಬಿಚ್ಚದವರನ್ನು ನಾಯಿ, ಬೆಕ್ಕಿಗೇ ಹೋಲಿಸಬೇಕಲ್ಲವೇ?. ನನ್ನ ಹೇಳಿಕೆಗೆ ಬೊಮ್ಮಾಯಿಗಿಂತ ಸುತ್ತಲಿನ ವಂದಿ-ಮಾಗದರಿಂದಲೇ ಅನಗತ್ಯ ವಿವಾದ: ಸಿದ್ದರಾಮಯ್ಯ

Siddaramaiah justified CM Basavaraj Bommai Dog Statement grg
Author
First Published Jan 6, 2023, 2:00 AM IST

ಬೆಂಗಳೂರು(ಜ.06):  ‘ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಎದುರು ತುಟಿ ಬಿಚ್ಚಲಾಗದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹುಲಿ-ಸಿಂಹಕ್ಕೆ ಹೋಲಿಸಲಾಗುತ್ತಾ? ನಾಯಿ ಮರಿ, ಬೆಕ್ಕಿನ ಮರಿಗಳಿಗೇ ಹೋಲಿಸಬೇಕಲ್ಲವೇ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕುರಿತ ನಾಯಿ ಮರಿ ಹೇಳಿಕೆಯನ್ನು ಸಮರ್ಥಿಸಿಕೊಂಡು ಸರಣಿ ಟ್ವೀಟ್‌ ಮಾಡಿರುವ ಅವರು, ‘ಪ್ರಾಣಿ, ಪಕ್ಷಿ, ಹೂವು, ಹಣ್ಣುಗಳನ್ನು ಅವುಗಳ ಸ್ವಭಾವಗಳ ಸಾಮ್ಯತೆಗೆ ಅನುಗುಣವಾಗಿ ಮನುಷ್ಯರಿಗೆ ಹೋಲಿಸುವುದು ಜನಪದ ಸಂಸ್ಕೃತಿ. ನನ್ನ ಮಾತಿಗೆ ನನ್ನ ಒಡನಾಡಿಗಳಾದ ಬೊಮ್ಮಾಯಿ ಬೇಸರ ಮಾಡಿಕೊಂಡಿರುವುದಿಲ್ಲ. ಸುತ್ತಲಿನ ವಂದಿ-ಮಾಗದರು ಅವರನ್ನು ಓಲೈಸಲಿಕ್ಕಾಗಿ ಖಂಡಿಸಿ, ಮಂಡಿಸಿ ವಿವಾದ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಬೊಮ್ಮಾಯಿಯವರು ಜಾಗರೂಕರಾಗಿರುವುದು ಒಳ್ಳೆಯದು’ ಎಂದು ತಮ್ಮ ಹೇಳಿಕೆ ಟೀಕಿಸಿದ ಸಚಿವರಿಗೂ ತರಾಟೆಗೆ ತೆಗೆದುಕೊಂಡಿದ್ದಾರೆ.

Assembly election: ಸಿದ್ದರಾಮಯ್ಯ ನಾಯಿಮರಿ ಹೇಳಿಕೆಗೆ ಜ್ಞಾನಿಯಂತೆ ಉತ್ತರಿಸಿದ ಸಿಎಂ ಬೊಮ್ಮಾಯಿ: ಸಿದ್ದುಗೆ ನಾಚಿಕೆ..!

ರಾಜಾಹುಲಿ ಎನ್ನುವುದೂ ಅವಮಾನವೇ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನರೇಂದ್ರ ಮೋದಿ ಎದುರು ಮಾತನಾಡುವ ಧೈರ್ಯವಿಲ್ಲ. ಬೇರೆಯವರ ಧಮ್‌, ತಾಕತ್‌ ಪ್ರಶ್ನಿಸುವ ಬೊಮ್ಮಾಯಿ ಅವರೇ ಸ್ವತಃ ಮೋದಿಯವರನ್ನು ಕಂಡರೆ ಹೆದರುತ್ತಾರೆ ಎಂದು ಹೇಳಿದ್ದೇನೆ. ಇದನ್ನು ಅನಗತ್ಯವಾಗಿ ವಿವಾದ ಮಾಡಲಾಗಿದೆ. ಹುಲಿ ಮನುಷ್ಯರನ್ನು ಕೊಂದು ತಿನ್ನುವ ಪ್ರಾಣಿ. ಬಿಜೆಪಿ ನಾಯಕರೇ ಯಡಿಯೂರಪ್ಪ ಅವರನ್ನು ರಾಜಾಹುಲಿ ಎಂದು ಬಣ್ಣಿಸುತ್ತಾರೆ. ಇದನ್ನೂ ಅವಮಾನ ಎಂದು ತಿಳಿದುಕೊಳ್ಳಬಹುದಲ್ಲವೇ ಎಂದು ಪ್ರಶ್ನಿಸಿದರು.

ಟಿವಿ ಚಾನೆಲ್‌ನವರು ಪ್ರತಿದಿನ ನನ್ನನ್ನು ‘ಟಗರು’, ‘ಟಗರು’ ಎಂದು ಹಾಡು ಕಟ್ಟಿತೋರಿಸುತ್ತಾರೆ. ಟಗರು ಗುಮ್ಮುತ್ತೆ, ನಾನು ಯಾರಿಗೆ ಗುಮ್ಮಿದ್ದೇನೆ? ನಾನೂ ಅವಮಾನ ಮಾಡಿದ್ದಾರೆ ಎಂದು ಕೋಪ ಮಾಡಿಕೊಳ್ಳಬಹುದಲ್ಲಾ? ಸಾವಿರಾರು ಮಂದಿ ಹತ್ಯೆಗೀಡಾದ ಗುಜರಾತ್‌ ಗಲಭೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಕಾರಿಗೆ ಅಡ್ಡಬಂದು ನಾಯಿಮರಿ ಸತ್ತರೆ ಏನು ಮಾಡೋಣ ಎಂದು ಆಗಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ಇದೂ ವಿವಾದವಾಗಿತ್ತಲ್ಲವೇ? ಪುಕ್ಕಲು ಸ್ವಭಾವದವರು, ಧೈರ್ಯ ಇಲ್ಲದವರು ಎನ್ನುವ ಅರ್ಥದಲ್ಲಿ ಹಳ್ಳಿ ಭಾಷೆಯಲ್ಲಿ ನಾಯಿ ಮರಿ ಎಂದಿದ್ದೇ ಹೊರತು ಮುಖ್ಯಮಂತ್ರಿಗಳನ್ನು ವ್ಯಕ್ತಿಗತವಾಗಿ ನಿಂದಿಸುವ ದುರುದ್ದೇಶ ಖಂಡಿತ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios