ಆಸ್ಪತ್ರೆಯಲ್ಲೇ ಸುದ್ದಿಗೋಷ್ಠಿ: LLB ಓದಿದ್ರೂ ವೈದ್ಯರಂತೆ ತಮ್ಮ ಆರೋಗ್ಯದ ಬಗ್ಗೆ ವಿವರಿಸಿದ ಸಿದ್ದು
ಹೃದಯ ಕಾಯಿಲೆ ಸಂಬಂಧ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಗುಣಮುಖರಾಗಿದ್ದಾರೆ. ಈ ಬಗ್ಗೆ ಸ್ವತಃ ಸಿದ್ದರಾಮಯ್ಯನವರೇ ಆಸ್ಪತ್ರೆಯಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿ ತಮ್ಮ ಆರೋಗ್ಯದ ಬಗ್ಗೆ ಎಳೆ-ಎಳೆಯಾಗಿ ಬಿಚ್ಚಿಟ್ಟರು. ವಿಶೇಷ ಅಂದ್ರೆ ಅವರು LLB ಓದಿದ್ರೂ MBBS ಡಾಕ್ಟರ್ ರೀತಿಯಲ್ಲಿ ತಮ್ಮ ಆರೋಗ್ಯದ ಚಿಕಿತ್ಸೆ ಬಗ್ಗೆ ಮಾಧ್ಯಮಗಳ ಮುಂದೆ ವಿವರಿಸಿದರು. ಹಾಗಾದ್ರೆ ಅವರು ಏನೆಲ್ಲಾ ಹೇಳಿದರೂ ಎನ್ನುವುದನ್ನು ಈ ಕೆಳಗಿನಂತಿದೆ ಓದಿ...
ಬೆಂಗಳೂರು[ಡಿ.12]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೃದಯದ ರಕ್ತ ಪರಿಚಲನೆಯಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆ್ಯಂಜಿಯೋಪ್ಲಾಸ್ಟ್ ಚಿಕಿತ್ಸೆ ನೀಡಲಾಗಿದೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿರುವ 71 ವರ್ಷದ ಸಿದ್ದರಾಮಯ್ಯನವರಿಗೆ ಆ್ಯಂಜಿಯೋಪ್ಲಾಸ್ಟ್ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಅವರು ಇನ್ನೆರಡು ದಿನ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಅವರು ಇನ್ನೆರಡು ದಿನ ಆಸ್ಪತ್ರೆಯಲ್ಲಿ ಇರಲಿದ್ದಾರೆ.
ಸಿದ್ದರಾಮಯ್ಯಗೆ ಹೃದಯ ಶಸ್ತ್ರಚಿಕಿತ್ಸೆ: ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ, ಸ್ಟೆಂಟ್ ಅಳವಡಿಕೆ
ಇನ್ನು ಸಿದ್ದರಾಮಯ್ಯನವರ ಆರೋಗ್ಯದ ಬಗ್ಗೆ ಹಲವು ಊಹಾಪೋಹಗಳು ಎದ್ದಿದ್ದವು. ಇದೀಗ ಸ್ವತಃ ಸಿದ್ದರಾಮಯ್ಯನವರೇ ಇಂದು [ಗುರುವಾರ] ಆಸ್ಪತ್ರೆಯಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿ ಗಾಳಿ ಸುದ್ದಿಗಳಿಗೆ ಸ್ಪಷ್ಟನೆಗಳನ್ನು ನೀಡಿದರು. LLB ಓದಿಕೊಂಡು ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಸಿದ್ದು, MBBS ಮಾಡಿರುವ ನುರಿತ ವೈದ್ಯರಂತೆ ತಮ್ಮ ಆರೋಗ್ಯದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಅದು ಈ ಕೆಳಗಿನಂತಿದೆ.
ಸಿದ್ದರಾಮಯ್ಯ ಮಾತುಗಳು
ನೋ ಪ್ರಾಬ್ಲಂ. ಐ ಯ್ಯಾಮ್ ಟೋಟಲಿ ಆಲ್ ರೈಟ್. 19 ವರ್ಷಗಳ ಹಿಂದೆ 2 ರಕ್ತನಾಳಗಳಲ್ಲಿ ಬ್ಲಾಕ್ ಆಗಿದ್ದರಿಂದ ದೆಹಲಿಯ ಆಸ್ಪತ್ರೆಯೊಂದರಲ್ಲಿ 2ಕ್ಕೂ ಸ್ಟಂಟ್ ಹಾಕಿಸಿದ್ದೆ. 19 ವರ್ಷ ಯಾವುದೇ ತೊಂದರೆ ಆಗಿರಲಿಲ್ಲ. ಆದ್ರೆ, ಈಗ 1 ರಕ್ತನಾಳ ಬ್ಲಾಕ್ ಆಗಿರುವುದು ವೈದ್ಯರ ತಪಾಸಣೆಯಲ್ಲಿ ಕಂಡುಬಂದಿದೆ.
ಆ್ಯಂಜಿಯೋಗ್ರಾಂ ಮಾಡಿ ಬ್ಲಾಕ್ ಪತ್ತೆ ಆಯ್ತು. ಬ್ಲಾಕ್ ಆಗಿದ್ದ ರಕ್ತನಾಳಕ್ಕೆ ಡಾಕ್ಟರ್ ಸ್ಟಂಟ್ ಹಾಕಿದ್ದಾರೆ. ಇದೊಂದು ಸಿಂಪಲ್ ಪ್ರೊಸೀಜ್ಹರ್ ಅಷ್ಟೆ. ಇನ್ನೆರಡು ದಿನ ವಿಶ್ರಾಂತಿಗೆ ವೈದ್ಯರು ಹೇಳಿದ್ರು. ಮನೆಗೆ ಹೋದ್ರೆ ಜನರ ಹೆಚ್ಚಾಗಿ ಸೇರುತ್ತಾರೆ.
ಆದ್ದರಿಂದ ಇನ್ನೆರಡು ದಿನ ಆಸ್ಪತ್ರೆಯಲ್ಲೇ ರೆಸ್ಟ್ ಮಾಡುತ್ತೇನೆ. ನನಗೆ ಯಾವುದೇ ರೀತಿಯ ತೊಂದರೆ ಇಲ್ಲ. ನಾನು 100 ಪರ್ಸೆಂಟ್ ಫಿಟ್ ಆಗಿದ್ದೇನೆ. ನನ್ನ ಆರೋಗ್ಯದಲ್ಲಿ ಯಾವುದೇ ತೊಂದ್ರೆ ಇಲ್ಲ. ಯಾವುದೇ ಊಹಾಪೋಹಗಳಿಗೆ ಅವಕಾಶವಿಲ್ಲ. ಐ ಯ್ಯಾಮ್ ಟೋಟಲಿ ಆಲ್ ರೈಟ್ ಎಂದು ತಮ್ಮದೇ ಶೈಲಿಯಲ್ಲಿ ಹೇಳಿ ಎಲ್ಲರಲ್ಲೂ ಮೊಗದಲ್ಲಿ ನಗು ಮೂಡಿಸಿದರು.