ಬೆಂಗಳೂರು[ಡಿ.12]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೃದಯದ ರಕ್ತ ಪರಿಚಲನೆಯಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ್ಯಂಜಿಯೋಪ್ಲಾಸ್ಟಿಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸ್ಟೆಂಟ್‌ ಅಳವಡಿಕೆ ಮಾಡಲಾಗಿದೆ.

ಪ್ರಸ್ತುತ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಮುಂದುವರೆಸಲಾಗಿದೆ. ಗುರುವಾರ ಸಂಜೆ ವೇಳೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದು, ಒಂದು ವಾರ ವಿಶ್ರಾಂತಿ ಪಡೆಯುವ ಅಗತ್ಯವಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಚುನಾವಣಾ ಪ್ರಚಾರದಿಂದ ವಾಪಸು ಬಂದ ದಿನದಿಂದಲೂ ತೀವ್ರ ಮೂತ್ರನಾಳ ಸೋಂಕು (ಯುಟಿಐ) ಸಮಸ್ಯೆಯಿಂದ ಬಳಲುತ್ತಿದ್ದ ಸಿದ್ದರಾಮಯ್ಯ ಅವರಿಗೆ ತೀವ್ರ ಚಳಿ, ಜ್ವರ ಸಮಸ್ಯೆ ಉಂಟಾಗಿತ್ತು. ಡಿ.8ರಂದು ಎದೆಯಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿತ್ತು. ಹೀಗಿದ್ದರೂ ಮೂತ್ರನಾಳ ಸೋಂಕಿಗೆ ಆ್ಯಂಟಿಬಯೋಟಿಕ್‌ ಚಿಕಿತ್ಸೆಯನ್ನು ಮಾತ್ರವೇ ತೆಗೆದುಕೊಂಡು ಸುಮ್ಮನಾಗಿದ್ದರು.

ಮಂಗಳವಾರ ದಿನವಿಡೀ ಸಿದ್ದರಾಮಯ್ಯ ಅವರ ರಕ್ತದೊತ್ತಡದಲ್ಲಿ ತೀವ್ರ ಏರಿಳಿತ ಉಂಟಾಗಿತ್ತು. ಬುಧವಾರ ಬೆಳಗ್ಗೆ ವ್ಯಾಯಾಮದ ಭಾಗವಾಗಿ ಟ್ರೆಡ್‌ ಮಿಲ್‌ ಮಾಡುವ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ಸಿದ್ದರಾಮಯ್ಯ ಅವರ ಕುಟುಂಬ ವೈದ್ಯರಾದ ಡಾ

ರವಿಕುಮಾರ್‌ ಅವರು ಪರೀಕ್ಷೆ ನಡೆಸಿ ರಕ್ತದೊತ್ತಡದಲ್ಲಿ ತುಂಬಾ ಏರಿಳಿತ ಉಂಟಾಗಿದ್ದರಿಂದ ಕೂಡಲೇ ಮಲ್ಲೇಶ್ವರದಲ್ಲಿರುವ ವೆಗಾಸ್‌ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆಗೆ ಒಳಪಡಿಸಿದ್ದಾರೆ.

ಜೈನ್‌ ಆಸ್ಪತ್ರೆಯ ಹೃದಯ ತಜ್ಞರಾಗಿರುವ ಡಾ

ಬಿ.ರಮೇಶ್‌ ಅವರು ರೇಡಿಯೋ ಆ್ಯಕ್ಟಿವ್‌ ಐಸೋಟೋಪ್‌ ಇಂಜೆಕ್ಷನ್‌ ನೀಡಿ ಪರೀಕ್ಷೆ ನಡೆಸಿದಾಗ ಹೃದಯದ ರಕ್ತ ಪರಿಚಲನೆಯಲ್ಲಿ ಸಮಸ್ಯೆ ಇರುವುದು ಕಂಡುಬಂದಿತ್ತು. ಹೀಗಾಗಿ ಆ್ಯಂಜಿಯೋಗ್ರಾಂ ನಡೆಸಿದರು. ಈ ವೇಳೆ ಹೃದಯದ ಒಂದು ನಾಳದಲ್ಲಿ ಬ್ಲಾಕೇಜ್‌ ಉಂಟಾಗಿ ರಕ್ತ ಪರಿಚಲನೆ ತೀವ್ರ ಕಡಿಮೆಯಾಗಿತ್ತು. ಆದ್ದರಿಂದ ಕೂಡಲೇ ಆ್ಯಂಜಿಯೋಪ್ಲಾಸ್ಟಿಶಸ್ತ್ರಚಿಕಿತ್ಸೆ ನಡೆಸಿ ಸ್ಟೆಂಟ್‌ ಅಳವಡಿಕೆ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ.

19 ವರ್ಷಗಳ ಹಿಂದೆಯೂ ಸಿದ್ದರಾಮಯ್ಯ ಅವರ ಹೃದಯಕ್ಕೆ ಸ್ಟೆಂಟ್‌ ಅಳವಡಿಕೆ ಮಾಡಲಾಗಿತ್ತು.

ಆರೋಗ್ಯ ಸುಧಾರಿಸಿದೆ: ಪುತ್ರ ಯತೀಂದ್ರ

ತಂದೆಗೆ ಹೃದಯ ಸಮಸ್ಯೆ ಕಾಣಿಸಿಕೊಂಡಿತ್ತು. ಮೊದಲಿನಿಂದಲೂ ಅವರ ಹೃದಯದ ಆರೋಗ್ಯ ನೋಡಿಕೊಳ್ಳುತ್ತಿದ್ದ ಡಾ

ರಮೇಶ್‌ ಅವರು ಮಲ್ಲೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಆ್ಯಂಜಿಯೋಪ್ಲಾಸ್ಟಿನಡೆಸಿ ಸ್ಟೆಂಟ್‌ ಅಳವಡಿಸಿದ್ದಾರೆ. ಬುಧವಾರ ಬೆಳಗ್ಗೆ ಆ್ಯಂಜಿಯೋಗ್ರಾಂ ನಡೆಸಿದಾಗ ಹೃದಯಕ್ಕೆ ರಕ್ತ ಪರಿಚಲನೆ ಸರಿಯಾಗಿ ಇಲ್ಲದೆ ಬ್ಲಾಕೇಜ್‌ ಇರುವುದು ಕಂಡು ಬಂದಿತ್ತು. ಹೀಗಾಗಿ ಆ್ಯಂಜಿಯೋಪ್ಲಾಸ್ಟಿನಡೆಸಲಾಗಿದೆ. ಗುರುವಾರ ಆಸ್ಪತ್ರೆಯಿಂದ ಮನೆಗೆ ವಾಪಸಾಗಲಿದ್ದಾರೆ. ಒಂದು ವಾರ ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ.

- ಡಾ| ಯತೀಂದ್ರ ಸಿದ್ದರಾಮಯ್ಯ, ಪುತ್ರ ಹಾಗೂ ಶಾಸಕ