ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ ಸಿದ್ದರಾಮಯ್ಯ
* ಜಾತಿ ಸಮೀಕ್ಷೆ ಬಿಡುಗಡೆಗೆ ಆರೋಪ-ಪ್ರತ್ಯಾರೋಪ
* ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ ಸಿದ್ದರಾಮಯ್ಯ
* ಕುಮಾರಸ್ವಾಮಿ ಬಿಡುಗಡೆ ಮಾಡಲಿಲ್ಲ ಎಂದು ಆರೋಪಿಸಿದ ವಿರೋಧ ಪಕ್ಷದ ನಾಯಕ
ಬೆಂಗಳೂರು, (ಸೆ.25): ಜಾತಿ ಸಮೀಕ್ಷೆ ಬಿಡುಗಡೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು (ಸೆ.25) ಸುದ್ದಿಗಾರರೊಂದಿಗೆ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ಮುಖ್ಯಮಂತ್ರಿ ಆಗಿದ್ದಾಗ ಜಾತಿ ಸಮೀಕ್ಷೆ ಪೂರ್ಣ ಆಗಿರಲಿಲ್ಲ. ಎಚ್.ಡಿ. ಕುಮಾರಸ್ವಾಮಿ (HD Kumaraswamy) ಮುಖ್ಯಮಂತ್ರಿ ಆಗಿದ್ದಾಗ ಜಾತಿ ಸಮೀಕ್ಷೆ ಪೂರ್ಣವಾಯ್ತು. ಆದ್ರೆ, ಅದನ್ನು ಕುಮಾರಸ್ವಾಮಿ ಬಿಡುಗಡೆ ಮಾಡಲಿಲ್ಲ ಎಂದು ಆರೋಪಿಸಿದರು.
ಜಾತಿಗಣತಿ ವರದಿ: ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಆಗ ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳ ಸಚಿವನಾಗಿದ್ದರು. ವರದಿ ಪೂರ್ಣವಾಗಿದೆ ಎಂದು ನನಗೆ ಮಾಹಿತಿ ನೀಡಿದ್ರು. ಜಾತಿ ಗಣತಿ ಬಿಡುಗಡೆಗೆ ಪುಟ್ಟರಂಗಶೆಟ್ಟಿ ಪ್ರಯತ್ನ ಮಾಡಲು ಹೋಗಿದ್ದರು. ಆದರೆ ಆಗ ಕುಮಾರಸ್ವಾಮಿ ಬಿಡುಗಡೆ ಮಾಡಲಿಲ್ಲ. ಪುಟ್ಟರಂಗಶೆಟ್ಟಿಯನ್ನು ಕುಮಾರಸ್ವಾಮಿ ಹೆದರಿಸಿ ಬಿಟ್ಟಿದ್ದರು. ಅವರಿಗೆ ಹೆದರಿ ವರದಿ ಬಿಡುಗಡೆ ಗೋಜಿಗೆ ಹೋಗಲಿಲ್ಲ. ಇದನ್ನು ನಾನು ಹೇಳಿದರೆ ಕುಮಾರಸ್ವಾಮಿಗೆ ಕೋಪ ಬರುತ್ತೆ. ಸಿದ್ದರಾಮಯ್ಯ ಕೂತ್ಕೊಂಡು ಬರೆಸಿಬಿಟ್ಟಿದ್ದಾನೆ ಎನ್ನುತ್ತಾರೆ ಎಂದು ಟಾಂಗ್ ಕೊಟ್ಟರು.
ಹಿಂದುಳಿದವರು ಜಾತಿ ಹೆಸರಲ್ಲಿ ಸಮ್ಮೇಳನ ಮಾಡಿದರೆ ತಪ್ಪಲ್ಲ. ಮುಂದುವರಿದವರು ಜಾತಿ ಸಮ್ಮೇಳನಗಳನ್ನು ಮಾಡಬಾರದು. ಹಿಂದುಳಿದವರೇ ಸಂಘಟಿತರಾಗಿ ಸಮ್ಮೇಳನ ಮಾಡಬೇಕು ಎಂದರು.
.ಕೆಲವರು ಹೆಸರಿಗೆ ಮಾತ್ರ ಬಸವಣ್ಣನ ಹೆಸರು ಹೇಳುತ್ತಾರೆ. ಇವನಾರವ ಇವನಾರವ, ನಮ್ಮವ ನಮ್ಮವ ವಚನ ಹೇಳ್ತಾರೆ. ಪಕ್ಕದಲ್ಲಿ ನಿಂತು ನೀವು ಯಾವ ಜಾತಿ ಎಂದು ಕೇಳುತ್ತಾರೆ. ನಮ್ಮ ಸಂವಿಧಾನ ಅತ್ಯಂತ ಒಳ್ಳೆಯದು. ಆದರೆ ಸಂವಿಧಾನ ಒಳ್ಳೆಯವರ ಕೈಯಲ್ಲಿರಬೇಕು ಎಂದು ಹೇಳಿದರು.