ದಾರಿಯಲ್ಲಿ ನಿಂತ ಡಕೋಟಾ ಎಕ್ಸ್‌ಪ್ರೆಸ್ ಸರ್ಕಾರ: ಕಲಾಪದಲ್ಲಿ ಟೀಕಾಪ್ರಹಾರ
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವದ ಕುರಿತು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದಾರೆ.
ಬೆಂಗಳೂರು, (ಫೆ.03): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಜನರಿಂದ ಬಹುಮತ ಪಡೆದ ಸರ್ಕಾರ ಅಲ್ಲ. ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಸುಳ್ಳು ಹೇಳಿಸಿದೆ. ಭಾಷಣದಲ್ಲಿ ಮುನ್ನೋಟವೂ ಇಲ್ಲ, ಹಿನ್ನೋಟವೂ ಇಲ್ಲ. ರಾಜ್ಯಪಾಲರನ್ನು ಬಳಸಿಕೊಂಡು ಸುಳ್ಳು ಹೇಳಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವದ ಕುರಿತು ವಿಧಾನಸಭೆಯಲ್ಲಿ ಚರ್ಚೆ ಆರಂಭಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಆಪರೇಷನ್ ಕಮಲದ ಜನಕ ಮಿಸ್ಟರ್ ಯಡಿಯೂರಪ್ಪ. ಅನೈತಿಕವಾಗಿ ಹುಟ್ಟಿದ ಅಂಗವೈಫಲ್ಯದ ಸರ್ಕಾರವಿದು. ಇಂತಹ ಸರ್ಕಾರದಿಂದ ಯಾನಮ್ಮ ಸರ್ಕಾರವಿದ್ದಾಗ ಟೇಕ್ ಆಫ್ ಆಗಿಲ್ಲ ಎಂದು ಹೇಳುತ್ತಿದ್ದವರು ಈಗ ಇವರ ಸರ್ಕಾರ ಏನಾಗಿದೆ, ಟೇಕಾಫ್ ಅಲ್ಲ ಸರ್ಕಾರ ಆಫ್ ಆಗಿಬಿಟ್ಟಿದೆ ಲೇವಡಿ ಮಾಡಿದರು.
ದಾರಿಯಲ್ಲಿ ನಿಂತ ಡಕೋಟಾ ಎಕ್ಸ್ ಪ್ರೆಸ್ ಸರ್ಕಾರ, 18 ತಿಂಗಳಾದರೂ ಯಡಿಯೂರಪ್ಪಗೆ ಸರ್ಕಾರ ಎಂಬ ಬಸ್ ಓಡಿಸಲು ಬರುತ್ತಿಲ್ಲ, ಗೇರ್ ಹಾಕಲು ಕೂಡ ಯಡಿಯೂರಪ್ಪಗೆ ತಿಳಿಯುತ್ತಿಲ್ಲ. ನಾಲ್ಕು ಕಡೆಗಳಿಂದಲೂ ಬಸ್ ಹಿಡಿದು ಎಳೆದಾಡುತ್ತಿದ್ದಾರೆ, ಹೀಗೇ ಎಳೆದರೆ ಗೇರೇ ಕಿತ್ತುಬರಬಹುದು ಎಂದು ವ್ಯಂಗ್ಯವಾಡಿದರು.
ವಿಧಾನಸಭೆ ಕಲಾಪದಲ್ಲಿ ಶಪಥ ಮಾಡಿದ ಯಡಿಯೂರಪ್ಪ: ಏನದು..?
ನಾನು ಯಡಿಯೂರಪ್ಪನವರಿಗೆ ಹೇಳುತ್ತಿದ್ದೇನೆ. ಒಮ್ಮೆ ನೀವು ಕನ್ನಡಿಯ ಮುಂದೆ ನಿಂತುಕೊಂಡು ನೋಡಿ.. ನೀವೇನು ಭರವಸೆ ಕೊಟ್ಟಿದ್ದೀರಿ ಎಂದು ನೀವೇ ಕೇಳಿಕೊಳ್ಳಿ. ನೀವು ಕೊಟ್ಟ ಭರವಸೆಯಲ್ಲಿ ಏನೇನು ಈಡೇರಿಸಿದ್ದೀರಿ? ನಾವು 140 ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಸಿದ್ದರಾಮಯ್ಯ ಗುಡುಗಿದರು.
ಬಜೆಟ್ ನಲ್ಲಿ ಏನೇನೂ ಸತ್ವವೇ ಇಲ್ಲ. ನಮ್ಮ ಸರ್ಕಾರದ ಸಾಧನೆಗಳನ್ನೇ ಯೋಜನೆಗಳನ್ನೇ ನಮ್ಮದೆಂದು ಬಜೆಟ್ ನಲ್ಲಿ ಹೇಳಿಕೊಂಡಿದ್ದಾರೆ. ಯಾವುದೇ ಚುನಾಯಿತ ಸರ್ಕಾರ ಮಾಡುವ ಕೆಲಸವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಪಾಲರಿಗೆ ಒಂದು ಘಟನೆ, ಗೌರವ ಇರುತ್ತದೆ. ಈ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡು ಅವರ ಬಾಯಿಯ ಮೂಲಕ ಸುಳ್ಳು ಹೇಳಿಸಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರು ಮಾಡುವ ಕೆಲಸ ಇದಲ್ಲ. ವಸ್ತುಸ್ಥಿತಿಯನ್ನು, ಮುಂದಿನ ಚಿಂತನೆಗಳನ್ನು ಹೇಳಬೇಕು. ಆದರೆ ಅದನ್ನು ಮಾಡಿಲ್ಲ ಎಂದು ಟೀಕಿಸಿದರು.