ಮೈಸೂರು ಮಹಾರಾಜರು ನಾಡಿನ ಒಳಿತಗಾಗಿ ತಮ್ಮ ಸಂಪತ್ತನ್ನು ಮಾರಾಟ ಮಾಡಿ ಕೆಆರ್‌ಎಸ್ ನಿರ್ಮಿಸಿದರು. ಆದರೆ, ಸಿದ್ದರಾಮಯ್ಯ ಏನು ಮಾರಿದ್ದಾರೆ? ಮುಡಾ ಸೈಟ್‌ ಹೊಡೆದಿರುವುದೇ ಸಾಧನೆ ಎಂದು ಶಾಸಕ ಯತ್ನಾಳ್‌ ಅವರು ಯತೀಂದ್ರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ವಿಜಯಪುರ (ಜು.27): ಮೈಸೂರು ಮಹಾರಾಜರು ನಾಡಿನ ಒಳಿತಗಾಗಿ ತಮ್ಮ ಸಂಪತ್ತನ್ನು ಮಾರಾಟ ಮಾಡಿ ಕೆಆರ್‌ಎಸ್ ನಿರ್ಮಿಸಿದರು. ಆದರೆ, ಸಿದ್ದರಾಮಯ್ಯ ಏನು ಮಾರಿದ್ದಾರೆ? ಮುಡಾ ಸೈಟ್‌ ಹೊಡೆದಿರುವುದೇ ಸಾಧನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರು ಯತೀಂದ್ರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ಮಹಾರಾಜರು ತಮ್ಮ ಎಲ್ಲ ಬಂಗಾರದ ಒಡವೆ ಮಾರಿ ಕೃಷ್ಣರಾಜಸಾಗರ ಜಲಾಶಯ ಕಟ್ಟಿದರು.

ಸಿದ್ದರಾಮಯ್ಯ ಏನಾದರೂ ಮಾರಿದ್ದಾರೆಯೇ? ಇದ್ದ ಮೈಸೂರಿನಲ್ಲಿನ ಮುಡಾ ಸೈಟ್‌ ಹೊಡೆದುಕೊಂಡು ಹೋಗಿದ್ದಾರೆ. ಅವರ ಮಗ ತೀರ ಹಾದಿಬಿಟ್ಟು ಮಾತನಾಡುತ್ತಿದ್ದಾನೆ. ಏನೋ ಸ್ವಲ್ಪ ಶ್ಯಾಣ್ಯಾ ಅದಾನ ಅಂತಾ ತಿಳದುಕೊಂಡಿದ್ದೆ. ನಿಮ್ಮಪ್ಪ ಗ್ಯಾರಂಟಿ ಮಾಡಿ ಕರ್ನಾಟಕ ದಿವಾಳಿ ಮಾಡಿದ್ದಾನೆ. ಪರಿಸ್ಥಿತಿ ಹೀಗಿರುವಾಗ ಮಹಾರಾಜರಿಗೆ ಹೋಲಿಕೆ ಮಾಡಿ ಮಾತನಾಡುವುದು ಅಸಂಬದ್ಧ ಹೇಳಿಕೆ ಎಂದರು.

ಲೂಟಿ ಹೊಡೆಯಲು ಸುರ್ಜೇವಾಲಾ ಸಭೆ ಮಾಡಿದ್ದಾರೆ: ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ ಕೇವಲ ಕಲೆಕ್ಷನ್‌ಗಾಗಿ ರಾಜ್ಯದಲ್ಲಿ ಸಭೆ ನಡೆಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿದ್ದು, ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಕ್ಕೆ ಸಂಬಂಧಪಡದ, ಮಂತ್ರಿಯೂ ಅಲ್ಲದ, ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದ ವ್ಯಕ್ತಿ ಸುರ್ಜೇವಾಲಾ ಕರ್ನಾಟಕದಲ್ಲಿ ಅಧಿಕಾರಿಗಳ ಸಭೆ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸುರ್ಜೇವಾಲಾ ಕೇವಲ ಕಲೆಕ್ಷನ್‌ಗಾಗಿ ಸಭೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಜಿಎಸ್‌ಟಿ ನೋಟಿಸ್ ಜಾರಿ ವಿಷಯದಲ್ಲೂ ರಾಜ್ಯ ಸರ್ಕಾರ ಕೇಂದ್ರದ ಮೇಲ ಗೂಬೆ ಕೂರಿಸುತ್ತಿದೆ. ತೆರಿಗೆ ವಿಧಿಸಿದರೆ ಎಲ್ಲ ರಾಜ್ಯಗಳಿಗೂ ವಿಸ್ತರಿಸಬಹುದಿತ್ತಲ್ಲವೇ? ಇದು ರಾಜ್ಯ ಸರ್ಕಾರ ಮಾಡುತ್ತಿರುವ ಕುತಂತ್ರ. ಮುಂಬರುವ ಚುನಾವಣೆಗಳಿಗೆ ಕಾಂಗ್ರೆಸ್‌ಗೆ ಹಣ ಬೇಕಾಗಿದ್ದು, ನಮ್ಮ ರಾಜ್ಯ ಬಿಟ್ಟರೆ ಬೇರೆ ಸಂಪನ್ಮೂಲ ಕಾಂಗ್ರೆಸ್ ಬಳಿ ಇಲ್ಲ. ಹೀಗಾಗಿ ಜಿಎಸ್‌ಟಿ ನೋಟಿಸ್ ಕೊಟ್ಟಿದ್ದಾರೆ ಎಂದು ದೂರಿದ್ದಾರೆ.