ಬಜೆಟ್‌ನಲ್ಲೇ ರಾಜ್ಯದ ವ್ಯಕ್ತಿತ್ವಕ್ಕೆ ಮಸಿ ಬಳಿದ ಸಿದ್ದು: ಬಿಜೆಪಿ ಎಂಎಲ್‌ಸಿ ಎನ್.ರವಿಕುಮಾರ್
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್ ಮಂಡಿಸುತ್ತಿರುವ ವೇಳೆಯಲ್ಲಿ ರಾಜ್ಯದ ವ್ಯಕ್ತಿತ್ವಕ್ಕೆ ವಿರುದ್ಧವಾದ ಮತ್ತು ರಾಷ್ಟ್ರಕವಿ ಕುವೆಂಪು ಅವರ ಆದರ್ಶಗಳಿಗೆ ವ್ಯತಿರಿಕ್ತವಾದ ಬಜೆಟ್ ಮಂಡಿಸಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.
ಬೆಂಗಳೂರು (ಜು.08): ಬಜೆಟ್ ಮಂಡನೆ ಎನ್ನುವುದು ರಾಜ್ಯದ ಅಭಿವೃದ್ಧಿ, ಮುನ್ಸೂಚನೆ ನೀಡುವ ದಾಖಲೆ. ಅದಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ. ನಾವೆಲ್ಲಾ ಚುನಾವಣೆ ಸಮಯದಲ್ಲಿ ಮತ್ತು ಸದನದೊಳಗೆ- ಹೊರಗೆ ಏನೇ ಆರೋಪ ಪ್ರತ್ಯಾರೋಪ ಮಾಡಿದರೂ ಬಜೆಟ್ ಮಂಡನೆ ಎನ್ನುವುದು ರಾಜಕೀಯದಿಂದ ಹೊರತಾದ ಪವಿತ್ರ ಕರ್ತವ್ಯ.
ಸದನದಲ್ಲಿ ಬಜೆಟ್ ಮಂಡನೆಗೆ ಅವಕಾಶ ಸಿಗುವುದು ಪುಣ್ಯದ ಫಲ. ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ 14 ಬಾರಿ ಬಜೆಟ್ ಮಂಡನೆಗೆ ಅವಕಾಶ ಸಿಕ್ಕಿರುವುದು ಈ ರಾಜ್ಯ ಮತ್ತು ದೇಶದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರಣಕ್ಕಾಗಿ ಮತ್ತು ಒಕ್ಕೂಟ ವ್ಯವಸ್ಥೆ ಕಾರಣ. ಆದರೆ, ಈ ಬಾರಿ ಸಿದ್ದರಾಮಯ್ಯ ತಮ್ಮ ಕರ್ತವ್ಯದಲ್ಲಿ ವಿಮುಖರಾಗಿದ್ದಾರೆ. ಬಜೆಟ್‌ನ ಪ್ರತಿ ಅಂಶದಲ್ಲಿಯೂ ಬಿಜೆಪಿಯನ್ನು ಟೀಕಿಸಲು ಒಂದಷ್ಟುಅಂಶವನ್ನು ಮೀಸಲಿಟ್ಟಿದ್ದಾರೆ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ. ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಪವಿತ್ರ ಬಾಂಧವ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ.
ಕೇಂದ್ರ ಸರ್ಕಾರದಿಂದ ರಾಜ್ಯದ ಬಗ್ಗೆ ಮಲತಾಯಿ ಧೋರಣೆ: ಸಿಎಂ ಸಿದ್ದರಾಮಯ್ಯ
ಪ್ರಧಾನಿ ನರೇಂದ್ರ ಮೋದಿಯವರು ಟೀಂ ಇಂಡಿಯಾ ಪರಿಕಲ್ಪನೆಯಲ್ಲಿ ದೇಶದ ಆರ್ಥಿಕತೆಯನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡಲು ಹೊರಟ್ಟಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಬ್ರೇಕಿಂಗ್ ಇಂಡಿಯಾ ಪರಿಲ್ಪನೆಯಲ್ಲಿ ಕರ್ನಾಟಕವನ್ನು ಅಭಿವೃದ್ಧಿಯಿಂದ ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ರಾಜ್ಯದ ಆಡಳಿತವು ರಾಷ್ಟ್ರಪತಿಗಳ ಆಜ್ಞಾನುಸಾರ, ರಾಜ್ಯಪಾಲರ ಮೂಲಕ ನಡೆಯುತ್ತದೆ ಎನ್ನುವುದು ಸಂವಿಧಾನಿಕ ಸ್ವರೂಪ. ಆದರೆ, ಬಜೆಟ್‌ನಂತಹ ಅಧಿಕೃತ ದಾಖಲೆಗಳಲ್ಲಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಮಾತುಗಳನ್ನೇ ಆಡಿದ್ದಾರೆ ಎಂದು ಟೀಕಿಸಿದ್ದಾರೆ.
ಇನ್ನು, ‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು, ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಎಂಬ ರಾಷ್ಟ್ರಕವಿ ಕುವೆಂಪು ಅವರ ಸಾಲುಗಳನ್ನು ಬಜೆಟ್‌ನಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ. ಆದರೆ, ಅದೇ ರಾಷ್ಟ್ರಕವಿ ಕುವೆಂಪು ಅವರು ಹೇಳಿದ ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎಂಬ ಮಹಾವಾಕ್ಯಕ್ಕೆ ದ್ರೋಹ ಎಸಗಿದ್ದಾರೆ. ಸಿದ್ದರಾಮಯ್ಯ ಅವರು ಬಜೆಟ್ ಹೊಂದಿದ್ದ ಎಲ್ಲಾ ಗೌರವ, ಮರ್ಯಾದೆಗಳನ್ನೂ ಗಾಳಿಗೆ ತೂರಿದ್ದಾರೆ. ಆರ್ಥಿಕವಾಗಿಯೂ ಸಿದ್ದರಾಮಯ್ಯ ವಿಫಲವಾಗಿದ್ದಾರೆ ಎಂದು ಆಪಾದಿಸಿದ್ದಾರೆ.
ಹಿಂದಿನ ಸರ್ಕಾರ ಬಗ್ಗೆ ಮಾತನಾಡಿ ಸಿದ್ದು ನಗೆಪಾಟಲಿಗೆ ಗುರಿ: ಮೂರು ಗಂಟೆಗಳ ಕಾಲ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಹಾಗೂ ಹಿಂದಿನ ರಾಜ್ಯ ಸರ್ಕಾರದ ಬಗ್ಗೆ ಮಾತನಾಡಿ ನಗೆಪಾಟಲಿಗೆ ಈಡಾಗಿದ್ದಾರೆ ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ತುಳಸಿ ಮುನಿರಾಜುಗೌಡ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದಿದೆ. ಆ ಗ್ಯಾರಂಟಿ ಯೋಜನೆಗಳಿಗೆ 55 ಸಾವಿರ ಕೋಟಿ ಬೇಕು. ಆದರೆ, ಬಜೆಟ್‌ನಲ್ಲಿ ಹಣ ಕ್ರೋಢೀಕರಣಕ್ಕೆ ಮಾರ್ಗವನ್ನೇ ತೋರಿಸಿಲ್ಲ.
ಸಾಲ ಮಾಡದೇ ಅಧಿಕಾರ ಮಾಡಬೇಕೇ ಹೊರತು ಸಾಲ ಮಾಡುತ್ತೇವೆ ಎಂದು ಶೂರತ್ವದಲ್ಲಿ ಹೇಳಿಕೊಳ್ಳುವುದಲ್ಲ. ಇದೊಂದು ನಯವಂಚನೆ, ಜನ ವಿರೋಧಿ ಬಜೆಟ್ ಎಂದು ಟೀಕಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸಾಲ ಇಲ್ಲದೆ ಜನರ ಸಂಕಷ್ಟಕ್ಕೆ ಮಿಡಿದ ಸರ್ಕಾರ ನಮ್ಮದು. ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಈ ಹಿಂದೆ ಕಾಂಗ್ರೆಸ್ ಏನೇನು ಮಾಡಿದೆ ಎಂಬುದು ಜನರಿಗೆ ಗೊತ್ತಿದೆ. ಡಬಲ್ ಇಂಜಿನ್ ಸರ್ಕಾರ ಜನಪರ ಕೆಲಸಗಳನ್ನು ಮಾಡಿದೆ. ಈಗ ನಮ್ಮ ಸರ್ಕಾರಗಳಿಗೆ ಸಿದ್ದರಾಮಯ್ಯ ಸರ್ಟಿಫಿಕೆಟ್ ಕೊಡುವ ಬದಲು ಸಾಲ ಇಲ್ಲದೇ ರಾಜ್ಯ ಮುನ್ನಡೆಸಲಿ ಎಂದು ಹೇಳಿದ್ದಾರೆ.
ಇದು ದಾಖಲೆ ಸ್ಥಾಪಿಸಿಕೊಳ್ಳಲು ಮಂಡಿಸಿದ ಬಜೆಟ್: ಎಚ್.ಡಿ.ಕುಮಾರಸ್ವಾಮಿ ಟೀಕೆ
ಇನ್ನು ರಾಜ್ಯದಲ್ಲಿ ಯುವನಿಧಿ ಯೋಜನೆಯಲ್ಲಿ ಯುವಕ, ಯುವತಿಯರಿಗೆ ಉಂಡೆನಾಮ ಹಾಕಿದ್ದು ಆಗಿದೆ. ಗೃಹಜ್ಯೋತಿ ಯೋಜನೆಯಲ್ಲಿ ಯಾಮಾರಿಸಿದ್ದಾಗಿದೆ. ಇನ್ನು ಗೃಹಲಕ್ಷ್ಮಿ ಯೋಜನೆ ಆರಂಭವಾಗಿಯೇ ಇಲ್ಲ. ಅನ್ನಭಾಗ್ಯದಲ್ಲೂ ದೋಖಾ. ಈಗ ಪೂರಕ ಬಜೆಟ್ ಮಂಡಿಸುವ ಭರಾಟೆಯಲ್ಲಿ ಅವರ ಯೋಜನೆಗೆ ಸಂಪನ್ಮೂಲ ಕ್ರೂಢಿಕರಣ ಮಾಡುವ ವಿಧಾನವನ್ನೇ ಹೇಳಿಲ್ಲ. ಸಾಲ ಮಾಡುವುದನ್ನೇ ಎದೆ ಉಬ್ಬಿಸಿ ಹೇಳಿದ್ದಾರೆ. ಇದೊಂದು ಜನರನ್ನು ಯಾಮರಿಸುವ ಬಜೆಟ್ ಎಂದು ಮುನಿರಾಜುಗೌಡ ಪ್ರಕಟಣೆ ಮೂಲಕ ಕಿಡಿಕಾರಿದ್ದಾರೆ.