ಸಿದ್ದರಾಮನಹುಂಡಿಗೆ ಭೇಟಿ ಕೊಟ್ಟ ಸಿದ್ದು, ಸೊಸೆ-ಮೊಮ್ಮಗನ ಜತೆ ಸೆಲ್ಫಿಗೆ ಮುಗಿಬಿದ್ದ ಜನ!
ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಿದ್ದರಾಮಯ್ಯ ತಮ್ಮ ತವರು ಮೈಸೂರಿನ ಸಿದ್ದರಾಮನಹುಂಡಿ ನಿವಾಸಕ್ಕೆ ಇಂದು ಭೇಟಿ ಕೊಟ್ಟರು. ಇವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.
ಬೆಂಗಳೂರು (ಏ.19): ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿದೆ. ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಿದ್ದರಾಮಯ್ಯ ಪರ ಅಖಾಡಕ್ಕೆ ಮೊಮ್ಮಗ ಧವನ್ ರಾಕೇಶ್ ಮತ್ತು ಸೊಸೆ ಸ್ಮಿತಾ ಧುಮುಕಿದ್ದಾರೆ. ತಮ್ಮ ತವರು ಮೈಸೂರಿನ ಸಿದ್ದರಾಮನಹುಂಡಿ ನಿವಾಸಕ್ಕೆ ಸಿದ್ದರಾಮಯ್ಯ ಇಂದು ಭೇಟಿ ಕೊಟ್ಟಿದ್ದು, ಮೊಮ್ಮಗ ಧವನ್, ದಿವಂಗತ ರಾಕೇಶ್ ಸಿದ್ದರಾಮಯ್ಯ ಪತ್ನಿ ಸ್ಮಿತಾ ನೋಡಲು ಗ್ರಾಮಸ್ಥರು ಮುಗಿಬಿದ್ದರು. ಮಾತ್ರವಲ್ಲ ಸೆಲ್ಫಿಗೆ ತೆಗೆದುಕೊಳ್ಳಲು ಜನರು, ಅಭಿಮಾನಿಗಳು ಮುಗಿಬಿದ್ದರು. ಇಂದು ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಈ ವೇಳೆ ಸೊಸೆ ಮತ್ತು ಮೊಮ್ಮಗ ಸಾಥ್ ನೀಡಲಿದ್ದಾರೆ.
ತಾತನಂತೆ ಕಾನೂನು ಪದವಿ ಪಡೆದು ರಾಜಕೀಯಕ್ಕೆ ಬರುವೆ: ಇನ್ನು ನನ್ನ ಸ್ವ ಇಚ್ಛೆಯಿಂದ ರಾಜಕಾರಣಕ್ಕೆ ಬರುತ್ತಿದ್ದೇನೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಸಿದ್ದರಾಮಯ್ಯ ಮೊಮ್ಮಗ ಧವನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನನ್ನ ರಾಜಕೀಯ ಪ್ರವೇಶ ಮನೆಯವರೆಲ್ಲರಿಗೂ ಖುಷಿ ಕೊಟ್ಟಿದೆ. ತಾತನ ಪತವಾಗಿ ಪ್ರಚಾರ ಮಾಡುತ್ತೇನೆ. ನಾಮಪತ್ರ ಸಲ್ಲಿಕೆ ವೇಳೆ ಕೂಡ ಭಾಗವಹಿಸುತ್ತೇನೆ. ತಾತ ಅವರಿಗೆ ವೋಟ್ ಕೊಡಿ ಅಂತ ಎಲ್ಲರನ್ನು ಕೇಳಿಕೊಳ್ಳುತ್ತೇನೆ. ಮೊದಲಿನಿಂದಲೂ ನನಗೆ ರಾಜಕೀಯ ಅಂದ್ರೆ ಆಸಕ್ತಿ. ತಂದೆ ರಾಕೇಶ್ ಮನೆಯಲ್ಲಿ ರಾಜಕೀಯದ ಬಗ್ಗೆ ಮಾತನಾಡುವಾಗ ಆಸಕ್ತಿಯಿಂದ ಕೇಳುತ್ತಿದ್ದೆ. ನನ್ನ ತಂದೆಯನ್ನ ಸದಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಚಿಕ್ಕಪ್ಪ ಯತೀಂದ್ರ ಅವರು ನನಗೆ ಎರಡನೇ ತಂದೆ. ಅವರು ಕೂಡ ರಾಜಕಾರಣದ ಬಗ್ಗೆ ಹೇಳುತ್ತಿರುತ್ತಾರೆ. ನನಗೆ 25 ವರ್ಷ ತುಂಬಲಿ. ಆಗ ಚುನಾವಣೆ ಸ್ಪರ್ಧೆಗೆ ಕ್ವಾಲಿಫೈ ಆಗುತ್ತೇನೆ. ನಂತರ ಅದರ ಬಗ್ಗೆ ಚರ್ಚೆ ಮಾಡ್ತೇನೆ. ತಾತ ಹಾಗೂ ಚಿಕ್ಕಪ್ಪ ಮೊದಲು ಓದುವಂತೆ ಹೇಳಿದ್ದಾರೆ. ತಾತನಂತೆ ನಾನೂ ಕೂಡ ಲಾ ಮಾಡುತ್ತೇನೆ. ಸಂವಿಧಾನದ ಬಗ್ಗೆ ಹೆಚ್ಚು ಹೇಳಿ ಕೊಡುತ್ತಿದ್ದಾರೆ. ವರುಣದಲ್ಲಿ ಸ್ನೇಹಿತರನ್ನು ಮಾಡಿಕೊಳ್ಳಬೇಕು. ಬಹಳ ದಿನಗಳು ಆಗಿತ್ತು ಇಲ್ಲಿಗೆ ಬಂದು ಎಂದು ಹೇಳಿಕೆ ನೀಡಿದ್ದಾರೆ.
ವರುಣ ರಾಜಕಾರಣಕ್ಕೆ ಎಂಟ್ರಿ ನೀಡಿದ ಮರಿ ಟಗರು, ಸಿದ್ದು ಪರ ಪ್ರಚಾರಕ್ಕಿಳಿದ ರಾಕೇಶ್ ಸುಪುತ್ರ
ನಾಮಪತ್ರ ಸಲ್ಲಿಕೆಗೂ ಮುನ್ನ ಸಿದ್ದರಾಮಯ್ಯ ಮನೆದೇವರು ಸಿದ್ದರಾಮೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದು, ಸಿದ್ದರಾಮಯ್ಯ ಪತ್ನಿ ಪಾರ್ವತಿ, ಸೊಸೆ ಸ್ಮಿತಾ, ಮೊಮ್ಮಗ ಧವನ್ , ಪುತ್ರ ಯತೀಂದ್ರ ಸೇರಿ ಹಲವರು ಭಾಗಿಯಾಗಿದ್ದರು.
ವರುಣ ರಾಜಕಾರಣಕ್ಕೆ ಮರಿ ಟಗರು ಎಂಟ್ರಿ; ತಾತಗೆ ಸಾಥ್ ನೀಡಿದ ಧವನ್ ರಾಕೇಶ್!
ಇದಕ್ಕೂ ಮುನ್ನ ಸ್ವಗ್ರಾಮಕ್ಕೆ ಸಿದ್ದರಾಮನಹುಂಡಿ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಗ್ರಾಮದ ಹೆಬ್ಬಾಗಿಲಿನಲ್ಲಿ ಅದ್ಧೂರಿ ಸ್ವಾಗತ ಕೋರಲಾಯ್ತು. ಜೆಸಿಬಿ ಮೂಲಕ ಅಭಿಮಾನಿಗಳು ಹೂಮಳೆ ಸುರಿಸಿದರು. ಪಟಾಕಿ ಸಿಡಿಸಿ, ತಮಟೆ ಬಾರಿಸಿಕೊಂಡು ಮೆರವಣಿಗೆ ಮೂಲಕ ಸಿದ್ದರಾಮಯ್ಯ ಅವರನ್ನು ನಿವಾಸಕ್ಕೆ ಕರೆತಂದರು.
ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.