ಕರ್ನಾಟಕದ ಹಾಸನದ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಒಂದು ವರ್ಷದ ಹಿಂದೆಯೇ ಗೊತ್ತಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆರೋಪಿಸಿದ್ದಾರೆ.  

ಪುಣೆ (ಮೇ.05): ಕರ್ನಾಟಕದ ಹಾಸನದ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಒಂದು ವರ್ಷದ ಹಿಂದೆಯೇ ಗೊತ್ತಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಕಾಂಗ್ರೆಸ್‌ ಸರ್ಕಾರ ಒಕ್ಕಲಿಗ ಮತಗಳನ್ನು ಕಳೆದುಕೊಳ್ಳಬಹುದೆಂಬ ಭಯದಲ್ಲಿ ಲೋಕಸಭೆ ಚುನಾವಣೆಯ ಕರ್ನಾಟಕದ ಮೊದಲ ಹಂತದ ಚುನಾವಣೆ ಮುಗಿಯುವವರೆಗೂ ಮೌನ ವಹಿಸಿದೆ. 

ಆದರೆ ಈಗ ಅದನ್ನೇ ದೊಡ್ಡ ಸುದ್ದಿ ಎಂಬಂತೆ ಬಿಂಬಿಸುತ್ತಿದೆ. ಇದು ಅವರ ಬೂಟಾಟಿಕೆಯನ್ನು ತೋರಿಸುತ್ತದೆ’ ಎಂದು ಕಿಡಿಕಾರಿದರು. ಪೆನ್‌ಡ್ರೈವ್‌ನಲ್ಲಿ ಏನಿದೆ ಎಂಬುದು ರಾಜ್ಯ ಸರ್ಕಾರಕ್ಕೆ ಗೊತ್ತಿದ್ದರೂ, ಮಹಿಳೆಯರ ಸುರಕ್ಷಿತೆಗೆ ಮುಂದಾಗಿಲ್ಲ. ಪ್ರಜ್ವಲ್‌ರನ್ನು ವಿದೇಶದಿಂದ ಕರೆತರಬೇಕೆಂದು ಕೇಂದ್ರಕ್ಕೆ ಪತ್ರ ಬರೆಯುವ ಬದಲು ಅವರೇ ಕರೆ ತರುವ ಕಾರ್ಯ ಮಾಡಿ ಕ್ರಮ ಕೈಗೊಳ್ಳಬಹುದಿತ್ತು ಎಂದರು.

ಗನ್‌ ಇದೆ ಎಂದು ಬೆದರಿಸಿ ಪ್ರಜ್ವಲ್‌ ರೇಪ್‌: ಜೆಡಿಎಸ್‌ನಿಂದ ಅಮಾನತುಗೊಂಡಿರುವ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಸ್ಥಳೀಯ ಸಂಸ್ಥೆಗಳ ಮಾಜಿ ಸದಸ್ಯೆಯೊಬ್ಬಳಿಗೆ ಗನ್‌ ತೋರಿಸಿ ಜೀವ ಬೆದರಿಕೆ ಹಾಕಿ ಅತ್ಯಾಚಾರ ನಡೆಸಿದ ಆರೋಪದಡಿ ಅಪರಾಧ ತನಿಖಾ ದಳ (ಸಿಐಡಿ) ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಹಾಸನ ಜಿಲ್ಲೆಯ 44 ವರ್ಷದ ಸಂತ್ರಸ್ತೆಯು (2ನೇ ದೂರುದಾರೆ) ನೀಡಿದ ದೂರು ಆಧರಿಸಿ ಆರೋಪಿ ಪ್ರಜ್ವಲ್‌ ರೇವಣ್ಣ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಗುರುವಾರವಷ್ಟೇ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸಂತ್ರಸ್ತೆಯನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ಹಾಜರುಪಡಿಸಿ ಹೇಳಿಕೆ ದಾಖಲಿಸಿದ್ದರು. ಇದರ ಬೆನ್ನಲ್ಲೇ ಎಫ್‌ಐಆರ್‌ ದಾಖಲಾಗಿದೆ.

ಬೇಗನೇ ಪ್ರಜ್ವಲ್‌ ರೇವಣ್ಣ ಬಂಧಿಸಿ: ಎಸ್‌ಐಟಿಗೆ ಸಿಎಂ ಸಿದ್ದರಾಮಯ್ಯ ತಾಕೀತು

ದೂರಿನಲ್ಲಿ ಏನಿದೆ?: ‘ನಾನು ಈ ಹಿಂದೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಯಾಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಕೆಲಸ ಮಾಡಿಸಿಕೊಡಲು ಶಾಸಕರು, ಸಂಸದರನ್ನು ಭೇಟಿಯಾಗುತ್ತಿದ್ದೆ. ಒಂದು ದಿನ ಬಿಸಿಎಂ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರಿಗೆ ಸೀಟು ಕೊಡಿಸುವ ಸಂಬಂಧ ಸಂಸದ ಪ್ರಜ್ವಲ್‌ ರೇವಣ್ಣರ ಬಳಿ ಮನವಿ ಮಾಡಲು ತೆರಳಿದ್ದೆ. ಅಂದು ಸಂಸದರ ಕಚೇರಿ ಮತ್ತು ವಸತಿ ಗೃಹದಲ್ಲಿ ತುಂಬಾ ಜನರು ಇದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ನೀವು ವಸತಿ ಗೃಹದ ಮಹಡಿಯಲ್ಲಿ ಇರುವಂತೆ ನನಗೆ ಸೂಚಿಸಿದರು. ಅದರಂತೆ ನಾನು ಮಹಡಿಗೆ ತೆರಳಿದೆ. ಅಲ್ಲಿ ಕೆಲ ಮಹಿಳೆಯರು ಇದ್ದರು.’