* ಸಿದ್ದು, ಡಿಕೆಶಿ ದೆಹಲಿಗೆ: ಇಂದು ರಾಹುಲ್‌, ಪ್ರಿಯಾಂಕಾ ಭೇಟಿ* ‘ಮುಂದಿನ ಸಿಎಂ’ ವಿವಾದ ಶಮನಕ್ಕೆ ವರಿಷ್ಠರ ಸಂಧಾನ?* ಪದಾಧಿಕಾರಿಗಳ ನೇಮಕಾತಿ ಬಗ್ಗೆಯೂ ಚರ್ಚೆ ಸಾಧ್ಯತೆ

ಬೆಂಗಳೂರು(ಜು.20): ಹೈಕಮಾಂಡ್‌ ಬುಲಾವ್‌ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ದೆಹಲಿಗೆ ತೆರಳಿದ್ದು, ಮಂಗಳವಾರ ಸಂಜೆ ನಾಲ್ಕು ಗಂಟೆಗೆ ವರಿಷ್ಠರೊಂದಿಗೆ ಮಹತ್ವದ ಸಭೆ ನಡೆಯಲಿದೆ.

ಮುಂದಿನ ಮುಖ್ಯಮಂತ್ರಿ ಹೇಳಿಕೆಗಳಿಂದಾಗಿ ಬಹಿರಂಗಗೊಂಡಿರುವ ಕಾಂಗ್ರೆಸ್‌ ನಾಯಕರ ನಡುವಿನ ಒಳಬೇಗುದಿ ಶಮನ, ಪದಾಧಿಕಾರಿಗಳ ನೇಮಕ ಸೇರಿದಂತೆ ರಾಜ್ಯ ರಾಜಕಾರಣದ ಬಗ್ಗೆ ಹೈಕಮಾಂಡ್‌ ಜತೆ ಚರ್ಚೆ ನಡೆಯಲಿದೆ.

ಮೂಲಗಳ ಪ್ರಕಾರ, ಮಂಗಳವಾರ ಸಂಜೆ ರಾಹುಲ್‌ಗಾಂಧಿ ಅವರು ಮೊದಲು ಇಬ್ಬರೊಂದಿಗೂ ಪ್ರತ್ಯೇಕ ಚರ್ಚೆ ನಡೆಸಿದ ಬಳಿಕ ಬಳಿಕ ಇಬ್ಬರ ಜೊತೆ ಚರ್ಚಿಸಲಿದ್ದಾರೆ. ಈ ವೇಳೆ ರಾಹುಲ್‌ಗಾಂಧಿ ಜತೆ ಪ್ರಿಯಾಂಕಾ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಸಹ ಭಾಗವಹಿಸಲಿದ್ದಾರೆ.

ಬಣ ರಾಜಕೀಯ, ಪದಾಧಿಕಾರಿಗಳ ಬಗ್ಗೆ ಚರ್ಚೆ:

ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಬಣಗಳ ನಡುವೆ ನಡೆದಿರುವ ಪೈಪೋಟಿಗೆ ಹೈಕಮಾಂಡ್‌ ವರಿಷ್ಠರು ಈ ಸಂದರ್ಭದಲ್ಲಿ ಬ್ರೇಕ್‌ ಹಾಕುವ ನಿರೀಕ್ಷೆ ಇದೆ. ಪಕ್ಷವನ್ನು ಒಗ್ಗೂಡಿ ಅಧಿಕಾರಕ್ಕೆ ತರುವ ಬಗ್ಗೆ ಗಮನ ಕೊಡುವಂತೆ ಸೂಚನೆ ನೀಡಲಿದ್ದಾರೆ. ಇದಲ್ಲದೆ ಉಭಯ ನಾಯಕರು ನೀಡಿರುವ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯನ್ನು ಒಗ್ಗೂಡಿಸಿ ಒಂದು ಪಟ್ಟಿಮಾಡುವುದು. ವಿವಿಧ ಜಿಲ್ಲೆಗಳ ಅಧ್ಯಕ್ಷರ ಬದಲಾವಣೆ, ಮುಂಚೂಣಿ ಘಟಕಗಳ ಅಧ್ಯಕ್ಷರ ನೇಮಕದ ಬಗ್ಗೆಯೂ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲಾ ರಾಜ್ಯಾಧ್ಯಕ್ಷರನ್ನೂ ಕರೆದಿದ್ದಾರೆ- ಡಿಕೆಶಿ:

ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್‌, ರಾಹುಲ್‌ಗಾಂಧಿ ಅವರು ಕೇವಲ ಕರ್ನಾಟಕ ರಾಜ್ಯದ ಕೆಪಿಸಿಸಿ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರು ಮಾತ್ರವಲ್ಲ ಎಲ್ಲಾ ರಾಜ್ಯಗಳ ರಾಜ್ಯಾಧ್ಯಕ್ಷರನ್ನೂ ಕರೆದಿದ್ದಾರೆ. ಎಲ್ಲರೊಂದಿಗೂ ಚರ್ಚೆ ಮಾಡುವಂತೆ ನಮ್ಮನ್ನೂ ಕರೆದಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಪಕ್ಷ ಕಟ್ಟುವ ಕುರಿತು ಮಾರ್ಗದರ್ಶನ ಪಡೆಯಲು ಹೋಗುತ್ತಿದ್ದೇವೆ ಎಂದು ಹೇಳಿದರು.

ಸಿದ್ದು ಗರಂ:

ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿದ್ದರಾಮಯ್ಯ, ಹೈಕಮಾಂಡ್‌ ಜತೆ ಚರ್ಚಿಸುವುದನ್ನೆಲ್ಲಾ ನಿಮಗೆ ಹೇಳಬೇಕಾ? ನಮ್ಮ ಪಕ್ಷದ ವಿಚಾರವನ್ನು ನಿಮ್ಮ ಜತೆ ಚರ್ಚೆ ಮಾಡಲು ಆಗುತ್ತದೆಯೇ ಎಂದು ಸುದ್ದಿಗಾರರ ವಿರುದ್ಧ ಕಿಡಿಕಾರಿದರು.

ಮುಂದಿನ ವಾರ ರಾಜ್ಯಕ್ಕೆ ಕಾಂಗ್ರೆಸ್‌ ಉಸ್ತುವಾರಿ: ಡಿಕೆಶಿ

ಬೆಂಗಳೂರು: ‘ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಮುಂದಿನ ವಾರ 5 ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರವಾಸದ ನಂತರ ಅವರು ದೆಹಲಿಗೆ ವಾಪಸ್‌ ಹೋದ ಬಳಿಕ ಪದಾಧಿಕಾರಿಗಳ ಪಟ್ಟಿಅಂತಿಮವಾಗಲಿದೆ. ನಾನು ಈಗಾಗಲೇ ಹೈಕಮಾಂಡ್‌ಗೆ ಪಟ್ಟಿನೀಡಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.