ಸಿದ್ದರಾಮಯ್ಯ ಬರ ಪರಿಹಾರಕ್ಕಾಗಿ ದೆಹಲಿಗೆ ಹೋಗಿಲ್ಲ: ವಿ.ಸೋಮಣ್ಣ
ಬರ ಪರಿಹಾರ ಬಿಡುಗಡೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತ್ಯೇಕವಾಗಿ ದೆಹಲಿಗೆ ಹೋಗಿ ಪ್ರಧಾನಿಗಳನ್ನು ಭೇಟಿ ಮಾಡದೆ ಯಾವುದೋ ಕೆಲಸಕ್ಕೆ ಹೋದಾಗ ಭೇಟಿ ಮಾಡಿ ಬಂದಿದ್ದಾರೆ ಅಷ್ಟೇ. ವಿನಾ ಕಾರಣ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ವಿ.ಸೋಮಣ್ಣ ತಿಳಿಸಿದರು.
ತುಮಕೂರು (ಏ.13): ಬರ ಪರಿಹಾರ ಬಿಡುಗಡೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತ್ಯೇಕವಾಗಿ ದೆಹಲಿಗೆ ಹೋಗಿ ಪ್ರಧಾನಿಗಳನ್ನು ಭೇಟಿ ಮಾಡದೆ ಯಾವುದೋ ಕೆಲಸಕ್ಕೆ ಹೋದಾಗ ಭೇಟಿ ಮಾಡಿ ಬಂದಿದ್ದಾರೆ ಅಷ್ಟೇ. ವಿನಾ ಕಾರಣ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಸೋಮಣ್ಣ ತಿಳಿಸಿದರು. ಕಲ್ಪತರನಾಡು ತುಮಕೂರು ಲೋಕಸಭಾ ಕ್ಷೇತ್ರವನ್ನು 2ನೇ ವಾರಣಾಸಿಯಾಗಿ ಅಭಿವೃದ್ಧಿಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದರು.
ನಾನು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವುದು ವಿಧಿ ಲಿಖಿತ. ಮಾಜಿ ಪ್ರಧಾನಿ ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು ನನ್ನು ಈ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಹೊಸ ಪೀಠಿಕೆಗಾಗಿ ಇಲ್ಲಿಗೆ ಕಳುಹಿಸಿದ್ದಾರೆ ಎಂದರು. ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಕೊಬ್ಬರಿ, ನೀರಾವರಿ, ಶಿಕ್ಷಣ ಕ್ಷೇತ್ರ ಅಭಿವೃದ್ಧಿ, ರೈಲ್ವೆ ಯೋಜನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಸೇರಿದಂತೆ ವಿವಿಧ ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ನನ್ನ ಆದ್ಯತೆಯಾಗಿದೆ ಎಂದು ಹೇಳಿದರು.
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ತುಮಕೂರು ನಗರ, ತುಮಕೂರು ಗ್ರಾಮಾಂತರ ತುರುವೇಕೆರೆ, ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ, ಕೊರಟಗೆರೆ ಹಾಗೂ ಮಧುಗಿರಿ ವಿಧಾನಸಭಾ ಕ್ಷೇತ್ರಗಳು ಒಳಪಡಲಿದ್ದು, ಈ ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗುವಂತೆ 10 ಸಾವಿರ ಉದ್ಯೋಗ ಸೃಷ್ಟಿ ಮಾಡಲು ಶ್ರಮ ವಹಿಸಿ ಕೆಲಸ ಮಾಡುತ್ತೇನೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಗುಡಿ ಕೈಗಾರಿಕೆ, ಗ್ರಾಮ ಸಡಕ್ ಯೋಜನೆಯಡಿ ಹಳ್ಳಿಗಳಿಗೆ ಲಿಂಕ್ ರಸ್ತೆ ನಿರ್ಮಾಣ ಸೇರಿದಂತೆ ತಾಲ್ಲೂಕುಗಳ ಅಭಿವೃದ್ಧಿಗೂ ಒತ್ತು ನೀಡುತ್ತೇನೆ ಎಂದರು.
ಪಿಎಂ, ಸಿಎಂ ಸ್ಥಾನ ಉಳಿಸಿಕೊಳ್ಳಲು ಅಪ್ಪ, ಮಗನಿಗೆ ಆಗಲಿಲ್ಲ: ಸಚಿವ ಕೆ.ಎನ್.ರಾಜಣ್ಣ ವ್ಯಂಗ್ಯ
ಜೀವನದಲ್ಲಿ ಯಾರನ್ನೂ ದ್ವೇಷಿಸಿಲ್ಲ: ನನಗೂ ತುಮಕೂರಿಗೂ ಅವಿನಾಭಾವ ಮತ್ತು ಭಾವನಾತ್ಮಕ ಸಂಬಂಧ ಇದೆ. ನನ್ನ ಜೀವನದಲ್ಲಿ ಯಾರನ್ನೂ ದ್ವೇಷಿಸಲ್ಲ, ನೋಯಿಸಿಲ್ಲ. ವೈಯುಕ್ತಿಕವಾಗಿ ಯೂ ಅವಮಾನ ಮಾಡಿಲ್ಲ. ಮಾಧ್ಯಮದವರು ಅಂತೆ-ಕಂತೆಗಳಿಗೆ ಮನ್ನಣೆ ನೀಡಬೇಡಿ ಎಂದು ತಿಳಿಸಿದರು. ಅಧಿಕಾರ ಬರುವುದು, ಬಿಡುವುದು ಪರಮಾತ್ಮನ ಇಚ್ಛೆ. ಎಲ್ಲವೂ ನಂಬಿಕೆ ಮೇಲೆ ನಡೆಯುತ್ತದೆ. ರಾಜಕಾರಣ ನಿಂತ ನೀರಲ್ಲ, ನಾನು ಇನ್ನು 10-15 ವರ್ಷಗಳ ಕಾಲ ಸಕ್ರಿಯ ರಾಜಕಾರಣದಲ್ಲಿರುತ್ತೇನೆ. ಈ ಚುನಾವಣೆ ನನಗೆ ಅಸ್ತಿತ್ವವೂ ಅಲ್ಲ, ಪ್ರತಿಷ್ಠೆಯೂ ಅಲ್ಲ. ದೇಶದ ಅಭಿವೃದ್ಧಿಗಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಸೂರ್ಯ-ಚಂದ್ರರಷ್ಟೇ ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ಖಚಿತ ಎಂದು ಅವರು ತಿಳಿಸಿದರು.