‘ಶೂದ್ರರಿಗೆ ಆರ್ಥಿಕವಾಗಿ ಶಕ್ತಿ ಬಂದರೆ ಅವರು ಸೇವಕರಾಗಿ ಉಳಿಯುವುದಿಲ್ಲ ಎಂದು ಮನುಸ್ಮೃತಿ ಹೇಳುತ್ತದೆ. ಮನುಸ್ಮೃತಿ ಪ್ರಕಾರ ನಡೆಯುವ ಬಿಜೆಪಿಯವರು ಇದೇ ಕಾರಣಕ್ಕೆ ಮನರೇಗಾ ರದ್ದುಪಡಿಸಿ ‘ವಿಬಿ ಜಿ ರಾಮ್‌ ಜಿ ಕಾಯ್ದೆ’ ಜಾರಿ ಮಾಡಿದ್ದು, ಕಾರ್ಮಿಕರನ್ನು ಆಧುನಿಕ ಗುಲಾಮಗಿರಿಗೆ ತಳ್ಳುವ ಈ ಕಾಯ್ದೆ

ವಿಧಾನಸಭೆ : ‘ಶೂದ್ರರಿಗೆ ಆರ್ಥಿಕವಾಗಿ ಶಕ್ತಿ ಬಂದರೆ ಅವರು ಸೇವಕರಾಗಿ ಉಳಿಯುವುದಿಲ್ಲ ಎಂದು ಮನುಸ್ಮೃತಿ ಹೇಳುತ್ತದೆ. ಮನುಸ್ಮೃತಿ ಪ್ರಕಾರ ನಡೆಯುವ ಬಿಜೆಪಿಯವರು ಇದೇ ಕಾರಣಕ್ಕೆ ಮನರೇಗಾ ರದ್ದುಪಡಿಸಿ ‘ವಿಬಿ ಜಿ ರಾಮ್‌ ಜಿ ಕಾಯ್ದೆ’ ಜಾರಿ ಮಾಡಿದ್ದು, ಕಾರ್ಮಿಕರನ್ನು ಆಧುನಿಕ ಗುಲಾಮಗಿರಿಗೆ ತಳ್ಳುವ ಈ ಕಾಯ್ದೆ ರದ್ದುಪಡಿಸಿ ಮನರೇಗಾ ಪುನರ್‌ ಸ್ಥಾಪಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ಮಂಗಳವಾರ ವಿರೋಧ ಪಕ್ಷಗಳ ತೀವ್ರ ಗದ್ದಲ ಹಾಗೂ ಆಕ್ಷೇಪದ ನಡುವೆಯೇ ವಿಬಿ-ಜಿ ರಾಮ್‌ ಜಿ ವಿರುದ್ಧ ನಿರ್ಣಯ ಮಂಡಿಸಿ ಮಾತನಾಡಿದರು.

ಮಹಿಳೆಯರು, ಆದಿವಾಸಿಗಳು, ಸಣ್ಣ ರೈತರು, ದಲಿತರು ಆರ್ಥಿಕವಾಗಿ ಶಕ್ತಿ ಬರಬಾರದು ಎಂಬುದು ಮನುಸ್ಮೃತಿಯ ಉದ್ದೇಶ. ಮನುಸ್ಮೃತಿ ಪ್ರಕಾರ ಶೂದ್ರರಿಗೆ ಆರ್ಥಿಕವಾಗಿ ಶಕ್ತಿ ಬಂದರೆ ಸೇವಕರಾಗಿ ಉಳಿಯುವುದಿಲ್ಲ. ಈ ಮನುಸ್ಮೃತಿ ಪ್ರಕಾರ ನಡೆಯುವರು ಆರ್‌ಎಸ್‌ಎಸ್‌. ಅದೇ ರೀತಿ ಆರ್‌ಎಸ್ಎಸ್‌ನ ಮಾರ್ಗದರ್ಶನದಂತೆ ನಡೆಯುವವರು ಬಿಜೆಪಿಯವರು. ಹೀಗಾಗಿಯೇ ಗ್ರಾಮೀಣ ಬಡವರ ಪಾಲಿನ ಸಂಜೀವಿನಿ ಆಗಿದ್ದ ಮನರೇಗಾ ರದ್ದುಪಡಿಸಿ ಬಡವರನ್ನು ಆಧುನಿಕ ಗುಲಾಮಗಿರಿಗೆ ತಳ್ಳುವ ವಿಬಿ ಜಿ ರಾಮ್‌ ಜಿ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಕಿಡಿಕಾರಿದರು.

ಇದೇ ವೇಳೆ ತಮ್ಮ ಬೇಡಿಕೆ ಮಂಡಿಸಿದ ಸಿದ್ದರಾಮಯ್ಯ, ‘ಗ್ರಾಮೀಣ ಜನರ ಬದುಕುವ ಹಕ್ಕು ಉಳಿಸಲು ವಿಬಿಜಿ ರಾಮ್ ಜಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಮನರೇಗಾ ಯೋಜನೆ ಮರುಜಾರಿ ಗೊಳಿಸಬೇಕು. ಜನರ ಉದ್ಯೋಗದ ಹಕ್ಕು ಮರು ಸ್ಥಾಪಿಸಬೇಕು, ಪಂಚಾಯತಿಗಳ ಅಧಿಕಾರ ಪುನರ್ ಸ್ಥಾಪನೆಯಾಗಬೇಕು. ದೇಶಾದ್ಯಂತ ಕನಿಷ್ಠ 400 ರು. ವೇತನ ನೀಡಬೇಕು ಎನ್ನುವುದು ನಮ್ಮ ಬೇಡಿಕೆ’ ಎಂದು ಆಗ್ರಹಿಸಿದ್ದಾರೆ.

ಅಲ್ಲದೆ, ಮಹಾತ್ಮಾ ಗಾಂಧಿ ಹೆಸರು ತೆಗೆದುಹಾಕಿ ಅವರಿಗೆ ಅವಮಾನ ಮಾಡಿದ್ದು, ಮನರೇಗಾ ಪುನರ್‌ಸ್ಥಾಪನೆ ಮೂಲಕ ಅವರ ಹೆಸರು ಮುಂದುವರೆಸಬೇಕು. ಈ ಬಗ್ಗೆ ಸದನದಲ್ಲಿ ನಿರ್ಣಯ ಮಂಡಿಸಿ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಬೇಕು ಎಂದು ಸದನಕ್ಕೆ ಮನವಿ ಮಾಡಿದರು.

ರಾಜ್ಯ ಬಿಜೆಪಿಯವರು ಮೇಲಿನವರನ್ನು ತೃಪ್ತಿಪಡಿಸಲು ಈ ನಿರ್ಣಯ ವಿರೋಧಿಸುತ್ತಿದ್ದಾರೆ. ದೆಹಲಿಯವರು ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಆರ್‌ಎಸ್‌ಎಸ್‌ನವರು ಬರೆದುಕೊಟ್ಟಿದ್ದನ್ನು ತಂದು ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.

ವಿಬಿ-ಜಿ-ರಾಮ್‌ ಜಿ ದುಷ್ಪರಿಣಾಮವೇನು?:

2005ರಲ್ಲಿ ಯುಪಿಎ ಜಾರಿಗೆ ತಂದಿದ್ದ ಮನರೇಗಾದಿಂದ 21 ವರ್ಷದಲ್ಲಿ ಕೋಟ್ಯಂತರ ಮಂದಿಗೆ ಉದ್ಯೋಗ ಖಾತ್ರಿ ನೀಡಲಾಗಿತ್ತು. ಈ ಕಾಯ್ದೆ ರದ್ದುಪಡಿಸಿ ಜಾರಿಗೆ ತಂದಿರುವ ವಿಬಿ-ಜಿ-ರಾಮ್‌ ಜಿಯಿಂದ ನಿರುದ್ಯೋಗ ಪ್ರಮಾಣ ಹೆಚ್ಚಳವಾಗುತ್ತದೆ, ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆಯಾಗುತ್ತದೆ. ಕನಿಷ್ಠ ವೇತನದ ರಕ್ಷಣೆ ಇಲ್ಲದೆ ಕಾರ್ಮಿಕರು ಸಂಕಷ್ಟಕ್ಕೆ ತಳ್ಳಲ್ಪಡುತ್ತಾರೆ. ದಲಿತ ಮತ್ತು ಆದಿವಾಸಿ ಕುಟುಂಬಗಳ ಮೇಲೆ ಅಧಿಕ ಒತ್ತಡ ಸೃಷ್ಟಿಯಾಗುತ್ತದೆ. ಗ್ರಾಮೀಣಾಭಿವೃದ್ಧಿಗೆ, ಗ್ರಾಮೀಣ ಬದುಕಿಗೆ ಈ ಕಾಯ್ದೆ ಮಾರಕವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮನರೇಗಾ ಯೋಜನೆಯಲ್ಲಿ ಪ್ರತಿ ವರ್ಷ ನೂರು ದಿನಗಳ ಉದ್ಯೋಗ ಖಾತ್ರಿ ಇತ್ತು. ಪರಿಚ್ಛೇದ 5 ಕಲಂ (1) ಪ್ರಕಾರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ಬಜೆಟ್ ಮಾಡಿದರೆ ಮಾತ್ರ ಕೆಲಸ ಸಿಗುತ್ತದೆ. ಇದರಿಂದ ಗ್ರಾಮೀಣ ಪ್ರದೇಶದ ಕೂಲಿಕಾರರ ಕೆಲಸ ಕಿತ್ತುಕೊಂಡಂತಾಗುತ್ತದೆ. 125 ದಿನ ಉದ್ಯೋಗ ಕೊಡುವುದಾಗಿ ಈ ಕಾಯ್ದೆಯಲ್ಲಿ ಹೇಳಲಾಗಿದೆ. ಆದರೆ, 60: 40 ಅನುದಾನದ ಅನುಪಾತ ಮಾಡಿರುವುದರಿಂದ ರಾಜ್ಯಗಳು ಶೇ.40 ರಷ್ಟು ಹಣ ಭರಿಸಬೇಕಾಗಿದೆ. ಪ್ರಸ್ತುತ ಎಲ್ಲಾ ರಾಜ್ಯಗಳು ಆರ್ಥಿಕವಾಗಿ ದುಸ್ಥಿತಿಗೆ ತಲುಪಿದ್ದು, ಕೇಂದ್ರದ ಅನುದಾನ, ತೆರಿಗೆ ಪಾಲು ಕಡಿತಗೊಂಡಿದೆ. 15ನೇ ಹಣಕಾಸು ಆಯೋಗದ ವತಿಯಿಂದ ರಾಜ್ಯಕ್ಕೆ 15,000 ಕೋಟಿ ನಷ್ಟವಾಗಿದೆ. ಹೀಗಿದ್ದಾಗ ಶೇ.40 ರಷ್ಟು ಹಣ ಹೇಗೆ ಭರಿಸಲು ಸಾಧ್ಯ? ಇಷ್ಟು ಹಣ ಭರಿಸಬೇಕಾದರೆ ನಮ್ಮ ಜತೆ ಚರ್ಚಿಸಿ ನಿರ್ಧರಿಸಬೇಕಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಆಗ ಬಿಜೆಪಿ ಸದಸ್ಯರು ಬಳಕೆ ಪ್ರಮಾಣಪತ್ರ ಸಲ್ಲಿಸದ ಕಾರಣ 15,000 ಕೋಟಿ ರು. ಬಿಡುಗಡೆಯಾಗಿಲ್ಲ ಎಂದರು.

ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ 5300 ಕೋಟಿ ರು. ಬಿಡುಗಡೆ ಮಾಡುವುದಾಗಿ ಹೇಳಿತ್ತು. ಇಂದಿನವರೆಗೂ ಅನುದಾನ ಕೊಟ್ಟಿಲ್ಲ. ಇದಕ್ಕೆ ಯಾವ ಬಳಕೆ ಪ್ರಮಾಣ ಪತ್ರವನ್ನು ನೀಡಬೇಕು?’ ಎಂದರು.

71.18 ಲಕ್ಷ ಕಾರ್ಮಿಕರಿಗೆ ಮನರೇಗಾ ಸಹಕಾರಿ:

ಮನರೇಗಾ ಅಡಿ ಕರ್ನಾಟಕದಲ್ಲಿ 71.18 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ಪೈಕಿ ಶೇ.51 ರಷ್ಟು ಮಹಿಳೆಯರಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಮನರೇಗಾ ಸಾಕಷ್ಟು ಸಹಾಯ ಮಾಡಿತು. ಈಗ ಗ್ರಾಮ ಸಭೆಯೂ ಇಲ್ಲ, ಪಂಚಾಯತಿ ಪ್ರಕಾರವೂ ತೀರ್ಮಾನವಾಗುವುದಿಲ್ಲ. ಇದರಿಂದ ಉದ್ಯೋಗಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಸಂವಿಧಾನದ 73ನೇ ವಿಧಿಯಡಿಯ ವಿಕೇಂದ್ರೀಕರಣ ವ್ಯವಸ್ಥೆಗೆ ತಿಲಾಂಜಲಿ ಇಡಲಾಗಿದೆ. 2008ರಲ್ಲಿ ಯಡಿಯೂರಪ್ಪ ಅವರ ಸರ್ಕಾರ ಮನರೇಗಾ ಅಡಿ 31.54 ಲಕ್ಷ ಕುಟುಂಬಗಳಿಗೆ 13.24 ಕೊಟಿ ಮಾನವ ದಿನಗಳ ಕೆಲಸ ಸೃಜನೆಯಾಗಿದೆ ಎಂದಿದ್ದರು.

ಈಗ ವಿಬಿಜಿ ರಾಮ್‌ ಜಿ ಯೋಜನೆಯಿಂದ ಉದ್ಯೋಗವಿಲ್ಲದೆ ಗ್ರಾಮೀಣ ಜನ ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ. ಜನರ ಬದುಕುವ ಸಾಂವಿಧಾನಿಕ ಹಕ್ಕನ್ನು ಕೇಂದ್ರ ಕಸಿದುಕೊಂಡಿದೆ ಎಂದು ದೂರಿದರು.

ಗುತ್ತಿಗೆದಾರರಿಗೆ ಅವಕಾಶ:

ಮನರೇಗಾ ದಲ್ಲಿ ಆಸ್ತಿ ಸೃಷ್ಟಿಸುವ ಕೆಲಸಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಹೊಸ ಕಾಯ್ದೆ ಅಡಿ ಸರಬರಾಜು ಆಧಾರಿತ ಕೆಲಸಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಹಿಂದೆ ಗುತ್ತಿಗೆದಾರರಿಗೆ ಅವಕಾಶ ಇರಲಿಲ್ಲ. ಹೊಸ ಕಾಯ್ದೆಯನ್ನು ಪಿಎಂ ಗತಿಶಕ್ತಿ ಯೋಜನೆಗೆ ಜೋಡಿಸಿರುವುದರಿಂದ ದೊಡ್ಡ ರಸ್ತೆಗಳು ಮತ್ತು ಹೈವೇಗಳ ನಿರ್ಮಾಣಕ್ಕೆ ಬಳಕೆಯಾಗುತ್ತದೆ. ಇದು ಪರೋಕ್ಷವಾಗಿ ಗುತ್ತಿಗೆದಾರರು ಮತ್ತು ಕಾರ್ಪೊರೆಟ್‌ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆಯಾಗಿ ಮಾರ್ಪಟ್ಟಿದೆ. ಇದು ಬಡವರ ಕೈಯಿಂದ ಅನ್ನ ಕಸಿದುಕೊಂಡು ಉಳ್ಳವರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡುವ ಯೋಜನೆ ಎಂದು ಟೀಕಿಸಿದರು.

- ಕೇಂದ್ರ ಕಾಯ್ದೆ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

- ಮನರೇಗಾ ಪುನರ್‌ ಸ್ಥಾಪಿಸಲು ಕೇಂದ್ರಕ್ಕೆ ಒತ್ತಾಯ

- ಶೂದ್ರರಿಗೆ ಆರ್ಥಿಕ ಶಕ್ತಿ ಸಿಕ್ಕರೆ ಅವರು ಸೇವಕರಾಗಿರಲ್ಲ

- ಬಿಜೆಪಿ ಪಾಲಿಸುವ ಮನುಸ್ಕೃತಿ ಈ ಮಾತು ಹೇಳುತ್ತದೆ

- ಇದೇ ಕಾರಣಕ್ಕೆ ಕೇಂದ್ರದಿಂದ ಜಿ ರಾಮ್‌ ಜಿ ಕಾಯ್ದೆ ಜಾರಿ

- ಈ ಕಾಯ್ದೆ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳಲಿದೆ: ಸಿಎಂ