ಬೆಂಗಳೂರು, (ಜುಲೈ.24): ರಾಜ್ಯದ ವಿಶ್ವ ವಿದ್ಯಾಲಯಗಳ ಕುಲಪತಿ ಹಾಗೂ ಸಾಂವಿಧಾನಿಕ ಸಂಸ್ಥೆಗಳ ಅಧ್ಯಕ್ಷ, ಸದಸ್ಯರ ಹುದ್ದೆಗಳಿಗೆ
ತಳ ಸಮುದಾಯದ ವಿದ್ವಾಂಸರನ್ನು ನೇಮಿಸಬೇಕೆಂದು ವಿರೋಧ ಪಕ್ಷದ ನಾಯಕ ಮನವಿ ಮಾಡಿದ್ದಾರೆ.

ಈ ಬಗ್ಗೆ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗೆ ತಯಾರಿ, ಸೆ.19ರಿಂದ ಐಪಿಎಲ್ ಸವಾರಿ; ಜು.24ರ ಟಾಪ್ 10 ಸುದ್ದಿ!

ರಾಜ್ಯದಲ್ಲಿ 25 ವಿಶ್ವ ವಿದ್ಯಾಲಯಗಳಿದ್ದರೂ, ಜಾನಪದ ವಿಶ್ವ ವಿದ್ಯಾಲಯದ ಕುಲಪತಿಯನ್ನು ಹೊರತು ಪಡಿಸಿ ಉಳಿದ ಯಾವುದೇ
ವಿಶ್ವ ವಿದ್ಯಾಲಯಗಳಿಗೂ ಪರಿಶಿಷ್ಟ ಜಾತಿಗೆ ಸೇರಿದ ಕುಲಪತಿಗಳಿಲ್ಲ.ಇದು ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯಗಳ ಕಾಯ್ದೆಯ ಪ್ರಕಾರ ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ.  ಆದ್ದರಿಂದ ಖಾಲಿ ಇರುವ ಹಾಗೂ ಮುಂದೆ ಖಾಲಿಯಾಗುವ ವಿಶ್ವ ವಿದ್ಯಾಲಯಗಳ ಕುಲಪತಿಗಳ ಹುದ್ದೆಗೆ ಪರಿಶಿಷ್ಟ ಜಾತಿ ಅಥವಾ ಕೆಳವರ್ಗಗಳಿಗೆ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಸ್ಥಾನ ನೀಡಿ ನೇಮಕ ಮಾಡುವಂತೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಹಾಗೂ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನನನ್ನು ಭೇಟಿಯಾಗಿ ಗಮನ ಸೆಳೆದಿದ್ದರು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕೆಪಿಎಸ್‍ಸಿ ಸೇರಿದಂತೆ ಸಂವಿಧಾನಿಕ ಹುದ್ದೆಗಳ ನೇಮಕದ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ತತ್ವವನ್ನು ಗೌರವಿಸಿ ನೇಮಕ ಮಾಡುವಂತೆಯೂ ಕೂಡ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.